Advertisement

ಕೊಳೆತ ತ್ಯಾಜ್ಯಕ್ಕೆ ಮುಕ್ತಿ ನೀಡಿದ ಕಾಪು ಪುರಸಭೆ

09:16 AM May 31, 2019 | sudhir |

ಕಾಪು : ಕಾಪು ಪುರಸಭೆಯ ಮಲ್ಲಾರು ಗ್ರಾಮದ 16ನೇ ವಾರ್ಡ್‌ನ ಕೊಪ್ಪಲಂಗಡಿ – ಕೋಟೆ ರೋಡ್‌ನ‌ ಸೇತುವೆಯ ತಳಭಾಗದಲ್ಲಿ ಶೇಖರಣೆಗೊಂಡಿದ್ದ ಸುಮಾರು ನಾಲ್ಕು ಲೋಡ್‌ನ‌ಷ್ಟು ಕೊಳೆತ ತ್ಯಾಜ್ಯವನ್ನು ಕಾಪು ಪುರಸಭೆಯು ಬುಧವಾರ ಜೆಸಿಬಿ ಕಾರ್ಯಾಚರಣೆ ಮೂಲಕ ತೆರವುಗೊಳಿಸಿ, ಸಮರ್ಪಕವಾಗಿ ವಿಲೇವಾರಿಗೊಳಿಸಲಾಯಿತು.

Advertisement

ಕಾಪು – ಶಿರ್ವ ರಾಜ್ಯ ಹೆದ್ದಾರಿಯಲ್ಲಿರುವ ಬಡಗರಗುತ್ತು ವಾರ್ಡ್‌ ವ್ಯಾಪ್ತಿಗೆ ಬರುವ ಮಲ್ಲಾರು ಕೊಂಬಗುಡ್ಡೆ ಸೇತುವೆ ಮತ್ತು ಜನಾರ್ದನ ದೇವಸ್ಥಾನ ವಾರ್ಡ್‌ ವ್ಯಾಪ್ತಿಗೆ ಬರುವ ರಾಷ್ಟ್ರೀಯ ಹೆದ್ದಾರಿ 66ರಿಂದ ಕೊಪ್ಪಲಂಗಡಿ – ಕೋಟೆ ರೋಡ್‌ನ‌ ಸೇತುವೆಯ ಕೆಳಭಾಗದಲ್ಲಿ ತ್ಯಾಜ್ಯ ಸಂಗ್ರಹಣೆಯಾಗುತ್ತಿರುವ ಬಗ್ಗೆ ಮೇ 28ರ ಉದಯವಾಣಿಯಲ್ಲಿ ಸಚಿತ್ರ ಲೇಖನ ಪ್ರಕಟಿಸಲಾಗಿತ್ತು.

ಜನಾರ್ದನ ದೇವಸ್ಥಾನ ವಾರ್ಡ್‌ನ ಮಲ್ಲಾರು ಕೋಟೆ ರೋಡ್‌ನ‌ಲ್ಲಿರುವ ಸೇತುವೆಗಳ ತಳಭಾಗದಲ್ಲಿದ್ದ ವಿವಿಧ ರೀತಿಯ ಕೊಳೆತ ತ್ಯಾಜ್ಯ ವಸ್ತುಗಳನ್ನು ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ದಿನವೇ ಮಾನವ ಬಳಕೆಯ ಮೂಲಕ ಸ್ಥಳಾಂತರಿಸಲು ಪ್ರಯತ್ನಿಸಲಾಗಿತ್ತು. ಆದರೆ ತ್ಯಾಜ್ಯದ ಪ್ರಮಾಣ ಹೆಚ್ಚಿದ್ದರಿಂದ ಬುಧವಾರ ಜೆಸಿಬಿ ಮೂಲಕ ತ್ಯಾಜ್ಯವನ್ನು ಮೇಲಕ್ಕೆತ್ತಲಾಗಿದ್ದು, ಸೇತುವೆಯ ತಳಭಾಗದಿಂದ ತೆಗೆದ ತ್ಯಾಜ್ಯವನ್ನು ತೋಡಿನ ಪಕ್ಕದಲ್ಲೇ ಬೃಹತ್‌ ಗುಂಡಿ ತೆಗೆದು ವಿಲೇವಾರಿ ಮಾಡಲಾಯಿತು.

ಕಸ ಹಾಕದಂತೆ ನಿರ್ಬಂಧ
ಮಲ್ಲಾರು ಕೋಟೆ ರೋಡ್‌ನ‌ ಸೇತುವೆ ತಳಭಾಗದಲ್ಲಿ ತ್ಯಾಜ್ಯದ ರಾಶಿ ಬೆಳೆದಿರುವ ಬಗ್ಗೆ ದೂರು ಬರುತ್ತಿದ್ದವು. ಮಂಗಳವಾರದ ಉದಯವಾಣಿ ಪತ್ರಿಕೆಯಲ್ಲಿ ಸಚಿತ್ರವಾಗಿ ವರದಿ ಪ್ರಕಟಗೊಂಡ ಕೂಡಲೇ ಹೋಗಿ ಸ್ಥಳ ಪರಿಶೀಲನೆ ನಡೆಸಿದ್ದೆವು. ಅಲ್ಲಿ ಕೊಳೆತು ನಾರುತ್ತಿದ್ದ ತ್ಯಾಜ್ಯ ವಸ್ತುಗಳ ವಿಲೇವಾರಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ. ಮುಂದೆ ಇಲ್ಲಿ ಯಾವುದೇ ರೀತಿಯ ಕಸವನ್ನೂ ಹಾಕದಂತೆ ನಿರ್ಬಂಧ ವಿಧಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ತಿಳಿಸಿದ್ದಾರೆ.

ಕಸ – ತ್ಯಾಜ್ಯವನ್ನು ವಿಂಗಡಿಸಿ ವಾಹನಕ್ಕೆ ನೀಡಲು ಮನವಿ
ಕಾಪು ಪುರಸಭೆಯಲ್ಲಿ ತ್ಯಾಜ್ಯ ಸಂಗ್ರಹಣೆಗಾಗಿ 5 ವಾಹನಗಳಿದ್ದು ತಲಾ 5 ಜನರಂತೆ 26 ಮಂದಿ ಪೌರ ಕಾರ್ಮಿಕರನ್ನು ವಿಂಗಡಣೆ ಮಾಡಿ ವಾಹನಗಳಲ್ಲಿ ನಿಯೋಜಿಸಲಾಗಿದೆ. ಪುರಸಭೆಯ ವಾರ್ಡ್‌ಗಳಿಗೆ ಪ್ರತೀ ದಿನ ತ್ಯಾಜ್ಯ ಸಂಗ್ರಹಣೆಗಾಗಿ ವಾಹನಗಳು ಹೋಗುತ್ತಿದ್ದು, ಜನರು ಮನೆಯಲ್ಲೇ ಕಸವನ್ನು ವಿಂಗಡಿಸಿ ವಾಹನಗಳಿಗೆ ಕೊಡಬೇಕು. ತಮ್ಮ ಪರಿಸರವನ್ನು ಕಾಪಾಡುವ ದೃಷ್ಟಿಯಲ್ಲಿ ಕಸವನ್ನು ವಿಂಗಡಿಸಿ, ಪುರಸಭಾ ವಾಹನಕ್ಕೆ ನೀಡಿ ಜನರು ಮಾನವೀಯತೆ ಮೆರೆಯಬೇಕು ಎಂದು ರಾಯಪ್ಪ ಅವರು ನಾಗರಿಕರಲ್ಲಿ ವಿನಂತಿಸಿದ್ದಾರೆ.

Advertisement

ಸ್ವತ್ಛ ಕಾಪು-ಸುಂದರರ ಕಾಪು ಯೋಜನೆ
ಕಾಪು ಪುರಸಭೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಹಾಕುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು. ಮಲ್ಲಾರು – ಕೋಟೆ ರೋಡ್‌ನ‌ ಸೇತುವೆಯ ಸುತ್ತಲೂ ಎರಡು ಸಿಸಿ ಕ್ಯಾಮರಾ ಅಳವಡಿಸಿ ತ್ಯಾಜ್ಯ ತಂದು ಸುರಿಯುವವರನ್ನು ಪುರಸಭೆ ವತಿಯಿಂದ ಪತ್ತೆ ಹಚ್ಚಲಾಗುವುದು. ತ್ಯಾಜ್ಯ – ಕಸ ತಂದು ಸುರಿಯುವವರನ್ನು ಗ್ರಾಮಸ್ಥರು ರೆಡ್‌ ಹ್ಯಾಂಡ್‌ ಹಿಡಿದುಕೊಟ್ಟಲ್ಲಿ ಅವರಿಗೆ ಗರಿಷ್ಠ 5,000 ರೂ. ವರೆಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು. ಈ ಮೂಲಕ ಕಾಪು ಪುರಸಭೆಯ ಸ್ವತ್ಛ ಕಾಪು – ಸುಂದರ ಕಾಪು ಯೋಜನೆ ಅನುಷ್ಟಾನಕ್ಕೆ ಎಲ್ಲರೂ ಸಹಕರಿಸುವ ಅಗತ್ಯವಿದೆ.
-ರಾಯಪ್ಪ, ಮುಖ್ಯಾಧಿಕಾರಿ,ಕಾಪು ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next