Advertisement
ಕಾಪು ಸುತ್ತಲಿನಲ್ಲಿನಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆ ಮತ್ತು ಅದರ ಪರಿಣಾಮದಿಂದಾಗಿ ಉಂಟಾದ ಕೃತಕ ನೆರೆಯ ಕಾರಣದಿಂದಾಗಿ ಚರಂಡಿಯಿಲ್ಲದೇ ರಸ್ತೆಯಲ್ಲೇ ಮಳೆ ನೀರು ಹರಿದು ಹೋಗಿದ್ದು, ಅದರಿಂದಾಗಿ ಕಾಪು ಪೇಟೆಯ ನಾಲ್ಕೈದು ಕಡೆಗಳಲ್ಲಿ ಮ್ಯಾನ್‌ಹೋಲ್ ಮತ್ತು ಅದರ ಸುತ್ತಲಿನ ಮಣ್ಣು ಭೂಮಿಯೊಳಗೆ ಕುಸಿಯಲಾರಂಭಿಸಿದೆ.
ಒಳಚರಂಡಿ ಯೋಜನೆಗಾಗಿ ಕಾಪು ಪೇಟೆಯಲ್ಲಿ ಸುಮಾರು 20ಕ್ಕೂ ಅಧಿಕ ಮ್ಯಾನ್‌ಹೋಲ್‌ಗಳನ್ನು ಅಳವಡಿಸಲಾಗಿದೆ. ಅವುಗಳ ಪೈಕಿ ಕಾಪು ಪೊಲೀಸ್ ವೃತ್ತ ನಿರೀಕ್ಷಕರ ಕಛೇರಿ ಬಳಿ, ವಿಜಯಾ ಬ್ಯಾಂಕ್ ಬಳಿ, ಕಾಪು ಪೇಟೆ, ರಿಕ್ಷಾ ನಿಲ್ದಾಣ, ಜಾವೇದ್ ಪ್ರಿಂಟಿಂಗ್ ಪ್ರಸ್ ಮತ್ತು ವೈಶಾಲಿ ಹೊಟೇಲ್ ಬಳಿಯ ಮ್ಯಾನ್‌ಹೋಲ್‌ಗಳು ಭೂಮಿಯೊಳಗೆ ಕುಸಿಯುವ ಭೀತಿ ಎದುರಾಗಿದೆ. ಸುಗಮ ಸಂಚಾರಕ್ಕೂ ಭೀತಿ
ಮ್ಯಾನ್‌ಹೋಲ್ ಕುಸಿಯುವ ಭೀತಿ ಎದುರಾದ ಪ್ರದೇಶಗಳಲ್ಲಿ ಸ್ಥಳೀಯರು ಮತ್ತು ಪುರಸಭೆಯು ಎಚ್ಚೆತ್ತುಕೊಂಡು ಮ್ಯಾನ್‌ಹೋಲ್‌ನ ಸುತ್ತಲಿನಲ್ಲಿ ಯಾರೂ ಸಂಚರಿಸದಂತೆ ಎಚ್ಚರ ವಹಿಸಿದರು. ವಿಜಯಾ ಬ್ಯಾಂಕ್ ಬಳಿಯಲ್ಲಿ ಪುರಸಭಾ ಸದಸ್ಯ ಅನಿಲ್ ಕುಮಾರ್ ಅವರು ವಿಶೇಷ ಮುತಿವರ್ಜಿ ವಹಿಸಿ, ಪೊಲೀಸರಿಗೆ ತಿಳಿಸಿ ಬ್ಯಾರಿಕೇಡ್‌ಗಳನ್ನು ಇರಿಸಿದರೆ, ರಿಕ್ಷಾ ನಿಲ್ದಾಣದ ಬಳಿ ಮ್ಯಾನ್‌ಹೋಲ್‌ನಲ್ಲಿ ಗಿಡ ನೆಟ್ಟು ರಿಕ್ಷಾ ಚಾಲಕರು ಜನರನ್ನು ಎಚ್ಚರಿಸಿದ್ದಾರೆ. ಜಾವೇದ್ ಪ್ರಸ್ ಬಳಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಉಳಿದೆಡೆಯೂ ಕೆಂಪು ಬಟ್ಟೆ ಅಳವಡಿಸಿ ಮ್ಯಾನ್ ಹೋಲ್ ಬಳಿ ಸಂಚರಿಸುವಾಗ ಜಾಗೃತೆ ವಹಿಸುವಂತೆ ಸೂಚನೆ ನೀಡಿದ್ದಾರೆ.
Related Articles
ಸ್ವತ್ಛ ಕಾಪು – ಸುಂದರ ಕಾಪು ಎಂಬ ಘೋಷಣೆಯೊಂದಿಗೆ ಅನುಷ್ಟಾನಕ್ಕೆ ಬಂದಿರುವ ಕಾಪು ಪುರಸಭೆ ವ್ಯಾಪ್ತಿಯ ಕಾಪು ಪೇಟೆಯಲ್ಲಿ ಮಳೆ ನೀರು ಹರಿದು ಹೋಗಲು ಸಮರ್ಪಕ ಚರಂಡಿಯ ವ್ಯವಸ್ಥೆಗಳು ಇಲ್ಲದಿರುವುದೇ ಮ್ಯಾನ್ ಹೋಲ್ ಮತ್ತು ಅದರ ಸುತ್ತಲಿನ ಮಣ್ಣು ಕುಸಿತಕ್ಕೆ ಮುಖ್ಯ ಕಾರಣ ಎಂದು ಹೆಳಲಾಗುತ್ತಿದೆ. ಅದರೊಂದಿಗೆ ಮಳೆ ನೀರು ಹರಿಯಲು ಸಮರ್ಪಕ ವ್ಯವಸ್ಥೆಯಿಲ್ಲದೇ ರಸ್ತೆಯಲ್ಲೇ ನೀರು ಹರಿಯುತ್ತಿದ್ದು, ಮತ್ತು ಕಾಪು ಪೇಟೆಯು ಕೆಂಪು ಹೂ ಮಣ್ಣಿನ ಪ್ರದೇಶವೂ ಆಗಿರುವುದರಿಂದ ನೀರಿನ ಒತ್ತಡ ತಾಳಲಾರದೇ ಮಣ್ಣು ಮತ್ತು ಮ್ಯಾನ್‌ಹೋಲ್ ಭೂಮಿಯೊಳಗೆ ಕುಸಿದಿರಬೇಕೆಂದು ಹೇಳಲಾಗಿದೆ.
Advertisement
3 ಕೋ. ರೂ. ವೆಚ್ಚದ ಯೋಜನೆಕಾಪು ಪುರಸಭಾ ವ್ಯಾಪ್ತಿಯ ಕಾಪು ಪೇಟೆಯ ಒಳಚರಂಡಿ ನೀರು ಸರಬರಾಜು ಯೋಜನೆಗಾಗಿ ಕರ್ನಾಟಕ ನೀರು ಮತ್ತು ಒಳಚರಂಡಿ ಸರಬರಾಜು ಮಂಡಳಿಯ ಮೂಲಕ ಸುಮಾರು 3 ಕೋ. ರೂ. ವೆಚ್ಚದಲ್ಲಿ ಪೈಪ್‌ಲೈನ್ ಮತ್ತು ಮ್ಯಾನ್‌ಹೋಲ್ ಅಳವಡಿಸಲಾಗುತ್ತಿದೆ. ಕಾಮಗಾರಿಯ ವೇಳೆ ನಡೆದ ಕೆಲವೊಂದು ಸಮಸ್ಯೆಗಳು ಎದುರಾದ ಹಿನ್ನೆಲೆಯಲ್ಲಿ ಕಾಮಗಾರಿ ತುಸು ನಿಧಾನಗತಿಯಲ್ಲಿ ಸಾಗುವಂತಾಗಿದೆ. ತುರ್ತು ಪರಿಹಾರ ಕ್ರಮಕ್ಕೆ ಸನ್ನದ್ಧ
ಮ್ಯಾನ್‌ಹೋಲ್ ಕುಸಿದು ಸಿಂಕ್ ಆಗಿರುವ ಪ್ರದೇಶಗಳಲ್ಲಿ ವೆಟ್‌ಮಿಕ್ಸ್ ಅಳವಡಿಸಿ ಮ್ಯಾನ್‌ಹೋಲ್‌ನ್ನು ಟೈಟ್ ಮಾಡಿಕೊಡಲಾಗುವುದು. ಮಳೆ ನೀರು ಹರಿದು ಹೋಗುವ ಚರಂಡಿಯಲ್ಲಿ ಮಣ್ಣು ತುಂಬಿಕೊಂಡಿದ್ದು, ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆಯಿಲ್ಲದಿರುವುದರಿಂದ ಹೀಗಾಗಿದೆ. ಪೇಟೆಯಲ್ಲಿ ಡ್ರೈನೇಜ್ ವ್ಯವಸ್ಥೆಯೂ ಸರಿಯಿಲ್ಲದೇ ಇರುವುದು ಕೂಡಾ ಘಟನೆಗೆ ಮುಖ್ಯ ಕಾರಣವಾಗಿದೆ. ಈ ಬಗ್ಗೆ ತುರ್ತಾಗಿ ಏನೆಲ್ಲಾ ವ್ಯವಸ್ಥೆಯಾಗಬೇಕೋ ಅದನ್ನು ಸರಿಪಡಿಸಿಕೊಡಲಾಗುವುದು ಎಂದು ಗುತ್ತಿಗೆದಾರ ಕೆ. ವಾಸುದೇವ ಶೆಟ್ಟಿ ತಿಳಿಸಿದ್ದಾರೆ. ಅಪಾಯದ ಕಾಮಗಾರಿ
ಕಾಪು ಪೇಟೆಯಲ್ಲಿ ಮಣ್ಣು ತುಂಬಾ ನಯವಾಗಿರುವುದರಿಂದ ಕಾಮಗಾರಿಗೆ ತೊಂದರೆ ಎದುರಾಗುತ್ತಿದೆ. ಫೆಬ್ರವರಿಯಲ್ಲಿ ಪೈಪ್ ಅಳವಡಿಕೆ ಸಂದರ್ಭ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಮಾರ್ಚ್ ತಿಂಗಳಲ್ಲಿ ಕೂಡಾ ಮತ್ತೆ ಮಣ್ಣು ಕುಸಿದು ಓರ್ವ ಕಾರ್ಮಿಕ ಗಾಯಗೊಂಡಿದ್ದನು. ಎರಡು ಮೂಡು ಕಡೆ ಮ್ಯಾನ್‌ಹೋಲ್ ಕುಸಿತದ ಮುನ್ಸೂಚನೆ ದೊರಕಿದ್ದು, ಇದೇ ಕಾರಣದಿಂದಾಗಿ ಪೇಟೆಯ ಮುಖ್ಯ ಭಾಗದಲ್ಲಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ನಮ್ಮ ಕೆಲಸಕ್ಕೆ ಸಾರ್ವಜನಿಕರಿಂದಲೂ ಸ್ಪಂದನೆ ಆಗತ್ಯವಾಗಿ ದೊರಕಬೇಕಿದೆ.
- ವಾಸುದೇವ ಶೆಟ್ಟಿ, ಗುತ್ತಿಗೆದಾರ ಶೀಘ್ರ ಪರಿಹಾರ
ಒಳಚರಂಡಿ ಯೋಜನೆಯ ಪೈಪ್‌ಲೈನ್ ಮತ್ತು ಮ್ಯಾನ್‌ಹೋಲ್ ಅಳವಡಿಕೆ ಸಂದರ್ಭ ಮ್ಯಾನ್‌ಹೋಲ್‌ನ ಪ್ರದೇಶಗಳನ್ನು ಸರಿಯಾಗಿ ಮಣ್ಣು ತುಂಬಿ ಗಟ್ಟಿಗೊಳಿಸದ ಕಾರಣ ಮ್ಯಾನ್‌ಹೋಲ್ ಕುಸಿಯುವಂತಾಗಿದೆ. ಈ ಬಗ್ಗೆ ಗುತ್ತಿಗೆದಾರರನ್ನು ಸಂಪರ್ಕಿಸಲಾಗಿದ್ದು, ಬುಧವಾರ ಬೆಳಗ್ಗೆಯಿಂದಲೇ ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾಮಗಾರಿ ಮುಂದುವರಿಸಿದ್ದಾರೆ. ಕಾಪು ಪೇಟೆಯ ಚರಂಡಿ ಬಿಡಿಸುವ ಕೆಲಸವೂ ಒಂದೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಎಂದು ತಿಳಿಸಿದ್ದಾರೆ.
– ಶೀನ ನಾಯ್ಕ ,
ಪುರಸಭೆ ಮುಖ್ಯಾಧಿಕಾರಿ ಸಹಾಯವಾಣಿ
ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ತುರ್ತು ವಿಪತ್ತು ನಿರ್ವಹಣೆಗೆ 24×7 ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದೆ. ಸಾರ್ವಜನಿಕರು ಈ ಕೆಳಗಿನ ನಿಯಂತ್ರಣ ಕೊಠಡಿಗಳಿಗೆ ಕರೆಯನ್ನು ಮಾಡಿ ಮಾಹಿತಿ ನೀಡಬಹುದು.