ಕಾಪು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾಪು ತಾಲೂಕು ವ್ಯಾಪ್ತಿಯ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರು ಜತೆಗೂಡಿ ತಾಲೂಕು ಆಡಳಿತ ಕಚೇರಿ ಬಳಿ ಸೆ.26ರ ಗುರುವಾರ ಧರಣಿ ನಡೆಸಿದರು.
ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಡೇನಿಯಲ್ ಡಿ. ಸೋಜ ಮಾತನಾಡಿ, 18 ತಂತ್ರಾಂಶಗಳನ್ನೊಳಗೊಂಡ ಆ್ಯಪ್ ನಿರ್ವಹಣೆಯ ಹೊರೆ, ಪತಿ – ಪತ್ನಿ ಅಂತರ್ ಜಿಲ್ಲಾ ವರ್ಗಾವಣೆಗೆ ತೊಡಕು, ಸರಕಾರಿ ರಜಾದಿನಗಳಲ್ಲಿ ಕೆಲಸ ಮಾಡುವ ಒತ್ತಡ, ಮಾನಸಿಕ ಕಿರಿಕಿರಿ ಹಾಗೂ 20 ವರ್ಷಗಳಾದರೂ ಗ್ರಾಮ ಆಡಳಿತಾಧಿಕಾರಗಳಿಗೆ ಭಡ್ತಿಗೆ ಅವಕಾಶವಿಲ್ಲದಿರುವುದು ಸಹಿತವಾಗಿ ವಿವಿಧ ಬೇಡಿಕೆಗಳನ್ನು ಈಗಾಗಲೇ ಸರಕಾರದ ಮುಂದಿಟ್ಟಿದ್ದೇವೆ. ಆದರೂ ಬೇಡಿಕೆ ಈಡೇರದ ಕಾರಣ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದರು.
ಉಡುಪಿ ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ವಿಜಯ್ ಮಾತನಾಡಿ, ಇಂದು ಪ್ರತಿ ತಾಲೂಕಿನಲ್ಲಿ ಧರಣಿ ನಡೆಸಿ, ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಿದ್ದೇವೆ. ನಾಳೆ ಜಿಲ್ಲಾಧಿಕಾರಿ ಕಚೇರಿ, ಬಳಿಕ ಬೆಂಗಳೂರಿನಲ್ಲಿ ಧರಣಿ ನಡೆಸಲಿದ್ದೇವೆ. ನಮಗೆ ನೀಡಿರುವ ಭರವಸೆ ಮತ್ತು ಆಶ್ವಾಸನೆಯನ್ನು ಈಡೇರಿಸುವವರೆಗೂ ಸೇವರಯನ್ನು ಸ್ಥಗಿತಗೊಳಿಸಿ ಧರಣಿಯನ್ನು ಮುಂದುವರಿಸಲಿದ್ದೇವೆ ಎಂದರು.
ಕಾಪು ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಲೋಕನಾಥ ಲಮಾಣಿ, ಉಪಾಧ್ಯಕ್ಷ ಶ್ರೀನಿವಾಸ ಆರ್. ಟಿ., ಜಿಲ್ಲಾ ಪ್ರತಿನಿಧಿ ಜಗದೀಶ್ ಸೇರಿದಂತೆ ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮ ಸಹಾಯಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.