ಕಾಪು: ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆದು, ಅದು ಹೊಡೆದಾಟದ ಮಟ್ಟಕ್ಕೇರಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ಬಗ್ಗೆ ಮಾಹಿತಿ ಪಡೆದು ಹೊರಗಿನ ತಂಡವೊಂದು ಕಾಲೇಜಿಗೆ ಬಂದಿದ್ದು, ಇದು ಇತರ ವಿದ್ಯಾರ್ಥಿಗಳ ಆಕ್ರೊಶಕ್ಕೆ ಕಾರಣವಾಯಿತು.
ವಿದ್ಯಾರ್ಥಿಗಳ ಆಕ್ರೋಶ ಮತ್ತು ಮಾತಿನ ಚಕಮಕಿ ಮಿತಿ ಮೀರಿ, ಕೋಮು ಬಣ್ಣ ಪಡೆಯುತ್ತಿದ್ದಂತೆಯೇ ಕಾಲೇಜಿನ ಪ್ರಾಂಶುಪಾಲರು ಕಾಪು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾಪು ಎಸ್ಐ ರಾಘವೇಂದ್ರ ಸಿ. ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರು ಹೊರಗಿನಿಂದ ಬಂದ ತಂಡದ ಇಬ್ಬರನ್ನು ವಶಕ್ಕೆ ಪಡೆದಿದ್ದು, ಅವರ ವಾಹನವನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ. ಹೊಡೆದಾಟಕ್ಕೆ ಯತ್ನಿಸಿದ ವಿದ್ಯಾರ್ಥಿಗಳನ್ನೂ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಘಟನೆಯ ವಿಚಾರ ತಿಳಿಯುತ್ತಲೇ ಜನಪ್ರತಿನಿಧಿಗಳು, ರಾಜಕಾರಣಿಗಳು, ವಿವಿಧ ಸಂಘಟನೆಗಳ ಮುಖಂಡರು ಕಾಪು ಪೊಲೀಸ್ ಠಾಣೆಗೆ ಧಾವಿಸಿದ್ದು, ಪರಿಸ್ಥಿತಿಯ ಗಂಭೀರತೆ ಅರಿತು ಹಿರಿಯ ಪೊಲೀಸ್ ಅಧಿಕಾರಿಗಳು ಕೂಡಾ ಕಾಪುವಿಗೆ ದೌಡಾಯಿಸಿದ್ದಾರೆ.