ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಕಾಪುವಿನಲ್ಲಿ ಬೈಕ್‌ಗೆ ಆಂಬ್ಯುಲೆನ್ಸ್ ಢಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ರವಿವಾರ (ಮಾ.12) ಮಧ್ಯಾಹ್ನ ಸಂಭವಿಸಿದೆ.
ಉಚ್ಚಿಲ ನಿವಾಸಿ ರಿತೇಶ್ ದೇವಾಡಿಗ ಗಂಭೀರ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ರವಿವಾರ ಮಧ್ಯಾಹ್ನ ಉಚ್ಚಿಲದಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಬೈಕ್‌ಗೆ ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಆಂಬ್ಯುಲೆನ್ಸ್ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ರಾ. ಹೆ. 66ರ ಕಾಪುವಿನಲ್ಲಿ ನಡೆಯುತ್ತಿರುವ ರಸ್ತೆ ಮರು ಡಾಮರೀಕರಣ ಕಾಮಗಾರಿಯ ಕಾರಣದಿಂದಾಗಿ ಮಂಗಳೂರು-ಉಡುಪಿ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆಯಿದ್ದು, ಅಂಬುಲೆನ್ಸ್ ಚಾಲಕ ವಿರುದ್ಧ ದಿಕ್ಕಿನಲ್ಲಿ ಆಂಬ್ಯುಲೆನ್ಸ್ ನ್ನು ಚಲಾಯಿಸಿಕೊಂಡು ಬಂದು ಬೈಕ್‌ಗೆ ಢಿಕ್ಕಿ ಹೊಡೆದಿದ್ದಾನೆ.
ಆಂಬ್ಯುಲೆನ್ಸ್ ಢಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ರಿತೇಶ್ ಮೇಲಕ್ಕೆ ಹಾರಿ, ಬಳಿಕ ರಸ್ತೆಗೆ ಬಿದ್ದಿದ್ದು ತಲೆಗೆ ಗಂಭೀರ ಗಾಯವಾಗಿದೆ. ಅವರನ್ನು ಸ್ಥಳೀಯರು ಉಪಚರಿಸಿ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬ್ಯುಲೆನ್ಸ್ ಮೂಲಕ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.
ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಸ್ಥಳಕ್ಕೆ ಧಾವಿಸಿದ್ದು, ಅಪಘಾತಕ್ಕೆ ಕಾರಣನಾದ ಆಂಬ್ಯುಲೆನ್ಸ್ ಚಾಲಕ ಮತ್ತು ದಿನಕ್ಕೊಂದು ರೀತಿಯಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡುತ್ತಿರುವ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಆಂಬ್ಯುಲೆನ್ಸ್ ಮತ್ತು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.