Advertisement

ಕಾಪು –ಪೊಲಿಪು ಗುಡ್ಡೆಯಲ್ಲಿ ಆಕಸ್ಮಿಕ ಬೆಂಕಿ: ಹತ್ತಾರು ಎಕರೆ ಗದ್ದೆ ಬೆಂಕಿಗಾಹುತಿ

12:15 AM May 20, 2019 | Sriram |

ಕಾಪು: ಪೊಲಿಪುಗುಡ್ಡೆ ಪರಿಸರದಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ದುರಂತದಲ್ಲಿ ಹತ್ತಾರು ಎಕರೆ ಗದ್ದೆ ಪ್ರದೇಶಗಳು ಮತ್ತು ಅಲ್ಲಿದ್ದ ಮರಮಟ್ಟುಗಳು ಸಂಪೂರ್ಣ ಬೆಂಕಿಗೆ ಆಹುತಿಯಾದ ಘಟನೆ ರವಿವಾರ ಸಂಭವಿಸಿದೆ.

Advertisement

ಕಾಪು – ಪೊಲಿಪು ಮೀನುಗಾರಿಕಾ ರಸ್ತೆಯ ಪಕ್ಕದಿಂದ ಹಿಡಿದು ಪೊಲಿಪು ಗುಡ್ಡೆಯವರೆಗಿನ ಸುಮಾರು 15 ಎಕರೆ ಗದ್ದೆ ಪ್ರದೇಶವು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಗದ್ದೆ ಬದಿಯಲ್ಲಿದ್ದ ತಾಳೆ ಮರಗಳು, ತೆಂಗಿನ ಮರಗಳು, ಅಡಿಕೆ ಮರಗಳ ಸಹಿತ ಬೆಲೆಬಾಳುವ ಮರಗಳು ಬೆಂಕಿಯಲ್ಲಿ ಕರಟಿ ಹೋಗಿವೆ.

ಗದ್ದೆಯಲ್ಲಿ ಹಬ್ಬುತ್ತಾ ಬಂದ ಬೆಂಕಿ ಪೊಲಿಪು ಗುಡ್ಡೆ ವಿಟu‌ಲ ಎಂಬವರ ಮನೆಯ ಬದಿಗೂ ಬಂದಿದ್ದು ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬಂದಿಗಳು ಸಕಾಲಿಕ ಕಾರ್ಯಾಚರಣೆ ನಡೆಸಿ, ಮನೆ ಬೆಂಕಿಗೆ ಆಹುತಿಯಾಗುವುದನ್ನು ತಪ್ಪಿಸಿದ್ದಾರೆ.

ಬೆಂಕಿ ನಂದಿಸಲು ಸಂಜೆಯವರೆಗೂ ಹರಸಾಹಸ
ಉಡುಪಿ ಮತ್ತು ಮಲ್ಪೆಯಿಂದ ಅಗ್ನಿಶಾಮಕ ದಳದ ವಾಹನಗಳು ಮತ್ತು ಸಿಬಂದಿ ಬಂದು ಬೆಂಕಿಯನ್ನು ನಂದಿಸಲು ಶ್ರಮಿಸಿದರಾದರೂ ಸಂಜೆಯವರೆಗೂ ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸ ಪಡಬೇಕಾಯಿತು. ಸಂಜೆಯವರೆಗೂ ಬೆಂಕಿಯ ಕೆನ್ನಾಲಗೆ ವಿಸ್ತಾರಗೊಳ್ಳುತ್ತಲೇ ಸಾಗಿದೆ.

ಸ್ಥಳೀಯ ಪ್ರಯತ್ನಕ್ಕೆ ಶ್ಲಾಘನೆ
ರವಿವಾರ ಮತ್ತು ಶುಭ ಕಾರ್ಯಗಳ ಅವಸರದಲ್ಲಿ ಇದ್ದರೂ ಕೂಡಾ ಸ್ಥಳೀಯ ನೂರಾರು ಮಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕದಳದ ಸಿಬಂದಿಗಳೊಂದಿಗೆ ಶ್ಲಾಘನೆಗೆ ಕಾರಣರಾಗಿದ್ದಾರೆ. ಪುರಸಭಾ ಸದಸ್ಯೆ ಸುಧಾ ರಮೇಶ್‌ ನೇತೃತ್ವದಲ್ಲಿ ಸ್ಥಳೀಯರಾದ ರವೀಂದ್ರ ಕಾಪು, ರಾಕೇಶ್‌ ಪೂಜಾರಿ, ರಾಜೇಶ್‌ ಪೂಜಾರಿ, ಉಮ್ಮರಬ್ಬ, ಗಿರೀಶ್‌ ಮೊದಲಾದವರು ಬೆಂಕಿ ನಂದಿಸಲು ಸಹಕರಿಸಿದರು.

Advertisement

ಗದ್ದೆಯಲ್ಲಿ ಬೆಂಕಿ ವಿಸ್ತಾರಗೊಳ್ಳುತ್ತಾ ಹೋಗು ತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಸಿಬಂದಿ ವಿದ್ಯುತ್‌ ಕಡಿತ ಮಾಡಿದ್ದು, ಸಂಜೆ ಬೆಂಕಿ ಹತೋಟಿಗೆ ಬಂದ ಬಳಿಕ ವಿದ್ಯುತ್‌ ಸಂಪರ್ಕವನ್ನು ಜೋಡಿಸಿದ್ದಾರೆ. ಈ ಭಾಗದಲ್ಲಿ ಪ್ರತೀ ವರ್ಷ ಬೇಸಗೆ ಕಾಲದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಕಳೆದ ವಾರವೂ ಮಧ್ಯರಾತ್ರಿ ಬೆಂಕಿ ಅವಘಡ ಸಂಭವಿಸಿತ್ತು. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next