ಶಿರ್ವ: ಬೆಳ್ಳೆ ಗ್ರಾ.ಪಂ. ವ್ಯಾಪ್ತಿಯ ಕಟ್ಟಿಂಗೇರಿ ಗ್ರಾಮದ ರಸ್ತೆ, ನೀರು ಸರಬರಾಜು, ದಾರಿದೀಪದ ಅವ್ಯವಸ್ಥೆ, ಸ್ಥಗಿತಗೊಂಡ ಬಸ್ ಸಂಚಾರ ಮತ್ತಿತರ ಹಲವಾರು ಸಮಸ್ಯೆಗಳಿದ್ದು,ಅಭಿವೃದ್ಧಿಯಲ್ಲಿ ಕಟ್ಟಿಂಗೇರಿ ಗ್ರಾಮವನ್ನು ಕಡೆಗಣಿಸಿದ್ದಕ್ಕಾಗಿ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ಸಲುವಾಗಿ ಕಟ್ಟಿಂಗೇರಿ ವಾರ್ಡ್ 1 ರ ಮತಗಟ್ಟೆ 104ರ ಮತದಾರರ ಚುನಾವಣೆ ಬಹಿಷ್ಕಾರ ಸಭೆಯು ಎ. 2 ರಂದು ಸಂಜೆ ಕಟ್ಟಿಂಗೇರಿ ಅಕ್ಷರ ಕರಾವಳಿ ಅಂಗನವಾಡಿ ಬಳಿ ನಡೆಯಿತು.
ಕಟ್ಟಿಂಗೇರಿ ಗ್ರಾಮದ ಅಕ್ಷರ ಕರಾವಳಿ ರಸ್ತೆಯು ತೀರಾ ದುಸ್ಥಿತಿಯಲ್ಲಿದ್ದು ಸುಮಾರು 10 ವರ್ಷಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಸ್ಪಂದನೆ ಸಿಗಲಿಲ್ಲ. 2 ಕಿ. ಮಿ. ಉದ್ದದ ಕಟ್ಟಿಂಗೇರಿ ಅಕ್ಷರ ಕರಾವಳಿ ರಸ್ತೆ ಹಾಗೂ ಅದರಲ್ಲಿರುವ 2 ಸೇತುವೆಗಳ ದುಸ್ಥಿತಿಯಿಂದ ಕಳೆದ 4 ವರ್ಷಗಳಿಂದ ಬಸ್ ಸಂಚಾರ ಸ್ಥಗಿತಗೊಂಡು ಜನರು ಪರದಾಡುತ್ತಿದ್ದಾರೆ. ಅಲ್ಲದೆ 1 ಕಿ.ಮೀ.ಉದ್ದದ ಕುಮೆರೊಟ್ಟು ರಸ್ತೆ ಹಾಗೂ ಮೂಲಭೂತ ಸೌಕರ್ಯಗಳಾದ ನೀರು,ದಾರಿದೀಪ ಮತ್ತಿತರ ಸಮಸ್ಯೆಗಳು ಮತದಾನ ಬಹಿಷ್ಕಾರಕ್ಕೆ ಕಾರಣವಾಗಿದೆ.ಈ ಬಗ್ಗೆ ಜಿಲ್ಲಾಡಳಿತ,ಜಿಲ್ಲಾ ಚುನಾವಣಾಧಿಕಾರಿ, ತಾಲೂಕು ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಬೆಳ್ಳೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ರಂಜಿನಿ ಹೆಗ್ಡೆ, ಬೆಳ್ಳೆ ಸಿಎ ಬ್ಯಾಂಕ್‌ನ ಅಧ್ಯಕ್ಷ ಬೆಳ್ಳೆ ಶಿವಾಜಿ ಎಸ್. ಸುವರ್ಣ, ಮಾಜಿ ತಾ.ಪಂ. ಅಧ್ಯಕ್ಷ ಕಟ್ಟಿಂಗೇರಿ ದೇವದಾಸ ಹೆಬ್ಟಾರ್ ಮತ್ತು ವಾರ್ಡ್ ನಿವಾಸಿ,ಪುಣೆಯ ಉದ್ಯಮಿ ಮಹೇಶ್ ಹೆಗ್ಡೆ ಕಟ್ಟಿಂಗೇರಿ ಗ್ರಾಮದ ಸಮಸ್ಯೆಗಳ ಬಗ್ಗೆ ಮಾತನಾಡಿದರು.
ಗ್ರಾಮದ ಸಮಸ್ಯೆಗಳು ಪರಿಹಾರವಾಗಿ ಬಸ್ ಸಂಚಾರ ಪ್ರಾರಂಭಗೊಳ್ಳದೆ ಕಟ್ಟಿಂಗೇರಿ ವಾರ್ಡ್ 1ರ ಗ್ರಾಮಸ್ಥರು ಮುಂದಿನ ಯಾವುದೇ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ ಎಂದು ಒಂದು ಸಾಲಿನ ನಿರ್ಣಯವನ್ನು ಕೈಗೊಳ್ಳಲಾಯಿತು.
ಮಾಜಿ ತಾಪಂ. ಸದಸ್ಯೆ ಸುಜಾತಾ ಎಸ್. ಸುವರ್ಣ,ಗ್ರಾ.ಪಂ ಸದಸ್ಯ ಸದಾನಂದ ಸಫಳಿಗ, ವಾರ್ಡ್‌ನ ಸುಮಾರು 150 ಕ್ಕೂ ಹೆಚ್ಚು ಮತದಾರರು ಭಾಗವಹಿಸಿದ್ದರು.