ಪಕ್ಷಗಳಿಂದ ಅಭ್ಯರ್ಥಿಗಳ ಘೋಷಣೆಯಾಗಿದ್ದರೂ ಈಗ ಮತ್ತೆ ಕೇಳಿ ಬರುತ್ತಿರುವ ಕ್ಷೇತ್ರ ಹಾಗೂ ಪಕ್ಷ ಅದಲು-ಬದಲು ಮಾತು ಹೊಸ ಗೊಂದಲ ಸೃಷ್ಟಿಮಾಡಿವೆ.
Advertisement
ಕಡೆಯ ಕ್ಷಣದಲ್ಲಿ ಯಾವುದೇ ಅನಿರೀಕ್ಷಿತ ಬೆಳವಣಿಗೆಗಳು ನಡೆದುಟಿಕೆಟ್ ಬದಲಾಗದೆ ಅಣ್ಣಾಸಾಹೇಬ ಜೊಲ್ಲೆ ಹೆಸರು ಅಂತಿಮವಾದರೆ
ಮತ್ತು ಕಾಂಗ್ರೆಸ್‌ನಿಂದ ಪ್ರಕಾಶ ಹುಕ್ಕೇರಿಯೇ ಸ್ಪರ್ಧಿಸುವುದು ಖಚಿತ
ವಾದರೆ ಕ್ಷೇತ್ರದ ರಾಜಕಾರಣ ಹಿಂದೆಂದೂ ಕಾಣದಂತಹ ಕಾದಾಟಕ್ಕೆ ಸಾಕ್ಷಿಯಾಗಲಿದೆ. ಸದ್ಯಕ್ಕಂತೂ ಟಿಕೆಟ್ ವಂಚಿತ ರಮೇಶ ಕತ್ತಿ ಹಾಗೂ
ಅವರ ಸಹೋದರ ಶಾಸಕ ಉಮೇಶ ಕತ್ತಿ ಮುನಿಸು ಶಮನವಾಗಿಲ್ಲ. ಬದಲಾಗಿ ಅಸಲಿ ರಾಜಕಾರಣದ ಆಟ ಆರಂಭವಾಗಲಿದೆ ಎಂಬ ಮಾತುಗಳು ಕೃಷ್ಣಾ -ಘಟಪ್ರಭಾ ನದಿ ತೀರದ ಕ್ಷೇತ್ರಗಳಲ್ಲಿ ಕೇಳಿಬರುತ್ತಿವೆ.
ಬಿಟ್ಟುಕೊಟ್ಟು ಪ್ರಕಾಶ ಹುಕ್ಕೇರಿ ಬೆಳಗಾವಿಯಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಚರ್ಚೆಗಳು ನಡೆದಿವೆ. ಇದು ನಿಜವೇ ಆಗಿದ್ದರೆ ಆದಕ್ಕೆ ಜಿಲ್ಲಾ ಉಸ್ತುವಾರಿಸಚಿವ ಸತೀಶ ಜಾರಕಿಹೊಳಿ ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದೇ ಕುತೂಹಲ.
ತಮಗೆ ಬಿಜೆಪಿ ಟಿಕೆಟ್ ಸಿಗುವುದು ಅನುಮಾನ ಎಂಬುದನ್ನು ಮೊದಲೇ
ಅರಿತಿದ್ದ ರಮೇಶ ಕತ್ತಿ ಹಾಗೂ ಉಮೇಶ ಕತ್ತಿ ಈಗಾಗಲೇ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಜತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದ್ದು ಇದು ಜಿಲ್ಲಾ ರಾಜಕೀಯದಲ್ಲಿ
ಹೊಸ ಸಂಚಲನ ಮೂಡಿಸಿದೆ.
Related Articles
ಟಿಕೆಟ್ ಕೈತಪ್ಪಿದ ನಂತರ ತಮ್ಮ ಆಪ್ತರ ಜತೆ ಸಭೆಗಳನ್ನು ನಡೆಸುತ್ತಿರುವ ಕತ್ತಿ ಸಹೋದರರು ಸದ್ಯಕ್ಕೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ತಮ್ಮ ಗುಟ್ಟು ಬಿಟ್ಟು ಕೊಡುವುದಿಲ್ಲ. ಆದರೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ
ಹೋಗುವುದು ಅನುಮಾನ. ಹೋದರೂ ನೆಪಮಾತ್ರಕ್ಕೆ ಎನ್ನಲಾಗುತ್ತಿದೆ. ಮುಖ್ಯವಾಗಿ ಬಿಜೆಪಿ ಚಿಕ್ಕೋಡಿ ಲೋಕಸಭಾ ಕ್ಷೇತ್ರವನ್ನು ಗೆಲ್ಲಬೇಕಾದರೆ
ಹುಕ್ಕೇರಿ ಹಾಗೂ ಯಮಕನಮರಡಿ ಕ್ಷೇತ್ರಗಳು ನಿರ್ಣಾಯಕ. ಇಲ್ಲಿ ಅತ್ಯಧಿಕ ಲೀಡ್ ಪಡೆಯಲು ಕತ್ತಿ ಸಹೋದರರ ಬೆಂಬಲ ಬೇಕೇ ಬೇಕು. ಆದರೆ ಈಗಿನ ಸ್ಥಿತಿಯಲ್ಲಿ ಜೊಲ್ಲೆ ಅವರಿಗೆ ಕತ್ತಿ ಸಹೋದರರ ಸಂಪೂರ್ಣ ಬೆಂಬಲ ಸಿಗುವುದು ಕಷ್ಟ ಎನ್ನುತ್ತಿವೆ ಬಿಜೆಪಿ ಮೂಲಗಳು.
Advertisement
ಈ ಮಧ್ಯೆ ಅಣ್ಣಾಸಾಹೇಬ ಜೊಲ್ಲೆ ಹಾಗೂ ಅವರ ಪತ್ನಿ ಮತ್ತು ಶಾಸಕಿ ಶಶಿಕಲಾ ಜೊಲ್ಲೆ ಶನಿವಾರ ಬೆಲ್ಲದಬಾಗೇವಾಡಿಗೆ ತೆರಳಿ ಶಾಸಕಉಮೇಶ ಕತ್ತಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ರಮೇಶ ಕತ್ತಿ ಮಾತ್ರ ಇದೆಲ್ಲದರಿಂದ ದೂರ
ಉಳಿದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕತ್ತಿ ಕುಟುಂಬದ ನಿಲುವು: ಟಿಕೆಟ್ ವಂಚಿತ ಕತ್ತಿ ಕುಟುಂಬದ ಮುಂದಿನ ನಡೆ ಈಗ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ. ಅವರ ನಿರ್ಧಾರ ರಾಜ್ಯ
ರಾಜಕಾರಣದಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ರಾಜಕೀಯದಲ್ಲಿ ಮಹತ್ತರ ಬದಲಾವಣೆ ತರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಹೀಗಾಗಿ ಈಗಿನ ಲೆಕ್ಕಾಚಾರದ ಪ್ರಕಾರ ಕತ್ತಿ ಸಹೋದರರು ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ದಡದ ಮೇಲೆ ಕಾಲಿಟ್ಟಿದ್ದಾರೆ. ಕತ್ತಿಯವರು ಬಿಜೆಪಿಯಿಂದ ಹೊರಬಂದು ಜೆಡಿಎಸ್ ಸೇರಿದರೂ ಅಚ್ಚರಿ ಇಲ್ಲ ಎಂಬ
ಮಾತುಗಳು ಕೇಳುತ್ತಿವೆ. ಜೆಡಿಎಸ್‌ಗೆ ಉ.ಕ.ದಲ್ಲಿ ಬಲವಾದ ನಾಯಕರು ಇಲ್ಲ. ಈ ಹಿಂದೆ ಪಕ್ಷದಲ್ಲಿದ್ದ ಉಮೇಶ ಕತ್ತಿ ಹಾಗೂ ಬಾಲಚಂದ್ರ
ಜಾರಕಿಹೊಳಿ ಬಿಟ್ಟುಹೋದ ನಂತರ ಜೆಡಿಎಸ್ ಈ ಭಾಗದಲ್ಲಿ ಚೇತರಿಸಿಕೊಂಡಿಲ್ಲ. ಉಮೇಶ ಕತ್ತಿ ಮೂಲತಃ ಜನತಾ ಪರಿವಾರದವರು.
ದೇವೇಗೌಡ ಹಾಗೂ ಕುಮಾರಸ್ವಾಮಿ ಜತೆ ಉತ್ತಮ ಸಂಬಂಧ ಹೊಂದಿದವರು. ಇದೇ ಕಾರಣದಿಂದ ಅವರಿಗೆ ಉತ್ತರ ಕರ್ನಾಟಕದ
ನಾಯಕತ್ವ ಕೊಟ್ಟರೂ ಅಚ್ಚರಿ ಇಲ್ಲ ಎನ್ನುವ ಮಾತುಗಳು ಅವರ ಬೆಂಬಲಗರಿಂದ ಕೇಳಿಬಂದಿವೆ. ಚಿಕ್ಕೋಡಿಗೆ ರಮೇಶ, ಬೆಳಗಾವಿಗೆ ಪ್ರಕಾಶ ರಮೇಶ ಕತ್ತಿಗೆ ಟಿಕೆಟ್ ಕೈತಪ್ಪಿದ ನಂತರ ಚಿಕ್ಕೋಡಿ ಭಾಗದ ಕಾಂಗ್ರೆಸ್ ನಾಯಕರು ಮೌನವಾಗಿದ್ದಾರೆ. ಇದರಿಂದ ತಮಗೆ ಅನುಕೂಲವಾಗಲಿದೆ ಎಂಬುದು ಅವರ ವಿಶ್ವಾಸ. ಆದರೆ ರಮೇಶ ಕತ್ತಿ ಕಾಂಗ್ರೆಸ್‌ಗೆ ಬರುವ ಸಾಧ್ಯತೆಯಿದ್ದು ಚಿಕ್ಕೋಡಿಯಿಂದಲೇ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ. ರಾಜಕೀಯದಲ್ಲಿ ಯಾವುದೂ
ಅಸಾಧ್ಯವಲ್ಲ. ಪಕ್ಷದ ಹೈಕಮಾಂಡ್ ನಿರ್ಧಾರ ಮಾಡಿದರೆ ಕೊನೆಯ ಘಳಿಗೆಯಲ್ಲಿ ಏನು ಬೇಕಾದರೂ ಆಗಬಹುದು. ಆದರೆ ಇದೆಲ್ಲವೂ ರಮೇಶ ಕತ್ತಿ ಅವರ ಹೇಳಿಕೆಯ ಮೇಲೆ ಅವಲಂಬನೆಯಾಗಿದೆ. ಒಂದು ತಿಂಗಳಿಂದ ರಮೇಶ ಕತ್ತಿ ಕಾಂಗ್ರೆಸ್‌ಗೆ ಬರುತ್ತಾರೆ ಎಂಬ ಸುದ್ದಿ ಇದೆ. ಇದನ್ನು ಅಲ್ಲಗೆಳೆಯುವಂತಿಲ್ಲ ಎಂದು ಚಿಕ್ಕೋಡಿ ಕಾಂಗ್ರೆಸ್ ನಾಯಕರೇ ಹೇಳಿರುವುದು ಈ ಬೆಳವಣಿಗೆಗೆ ಪುಷ್ಟಿ ನೀಡಿದೆ. ಹೈಕಮಾಂಡ್ ಹೇಳಿದರೆ ರಮೇಶ ಕತ್ತಿ ಚಿಕ್ಕೋಡಿಯಿಂದ ಹಾಗೂ ಪ್ರಕಾಶ ಹುಕ್ಕೇರಿ ಬೆಳಗಾವಿಯಿಂದ ಸ್ಪರ್ಧೆ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆದಿರುವ ಸಾಧ್ಯತೆ ಇದೆ. ಆಗ ನಾವೂ ಸಹ ಅನಿವಾರ್ಯವಾಗಿ ಇದನ್ನು ಒಪ್ಪಿಕೊಳ್ಳಲೇಬೇಕು ಎಂದು ಕಾಂಗ್ರೆಸ್ ಮುಖಂಡರು ಹೇಳಿದರು. ● ಕೇಶವ ಆದಿ