ಮೊಳಕಾಲ್ಮೂರು: ತಾಲೂಕಿನ ಕಾಟನಾಯಕನಹಳ್ಳಿ ಗ್ರಾಮದಲ್ಲಿ 2 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವುದರಿಂದ ಆ ಗ್ರಾಮವನ್ನು 2 ಕಂಟೇನ್‌ಮೆಂಟ್ ಝೋನ್‌ಗಳಾಗಿ ಮಾಡಲಾಗಿದೆ ಎಂದು ಕೋವಿಡ್-19ನ ತಾಲೂಕು ನೋಡಲ್ ಅಧಿಕಾರಿ ಡಿ. ಚಿದಾನಂದಪ್ಪ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತ್ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಕಾಟನಾಯಕನಹಳ್ಳಿ ಗ್ರಾಮದಲ್ಲಿ ಪತ್ತೆಯಾದ ಇಬ್ಬರು ಕೋವಿಡ್ ಪಾಸಿಟಿವ್ ಪ್ರಕರಣದ ಇಬ್ಬರು ವ್ಯಕ್ತಿಗಳು ಬೆಂಗಳೂರಿನ ಕೆ.ಆರ್. ಮಾರ್ಕೆಟ್‌ನಲ್ಲಿ ಹಣ್ಣಿನ ವ್ಯಾಪಾರಿಗಳಾಗಿದ್ದರು. ಇವರು ಜೂ. 24 ರಂದು ಈ ಗ್ರಾಮಕ್ಕೆ ಬಂದಿದ್ದರು. ಇವರ ಕೋವಿಡ್ ಪ್ರಕರಣದ ಐಡಿ ನಂ. 4883 ಮತ್ತು 4885 ಆಗಿದೆ. 200 ಮೀಟರ್ ಅಂತರದಲ್ಲಿರುವ ಮನೆಗಳಲ್ಲಿ ವಾಸಿಸುವ ಜನರಿಗೆ ಸಮೀಕ್ಷಾ ಕಾರ್ಯ ಮಾಡಲು 6 ತಂಡಗಳಾಗಿ ವಿಂಗಡಿಸಲಾಗಿದೆ.
ಮುಂದಿನ 28 ದಿನಗಳಲ್ಲಿ ಸಮೀಕ್ಷೆ ಮಾಡಲಾಗುವುದು. ಈ ಸಮೀಕ್ಷೆ ಮಾಡುವಾಗ ಜ್ವರ, ಕೆಮ್ಮು, ಶೀತ ಮತ್ತು ತೀವ್ರ ತರ ಉಸಿರಾಟದ ತೊಂದರೆಯುಳ್ಳ 60 ವರ್ಷ ಮೇಲ್ಪಟ್ಟವರ ಮಾಹಿತಿಯನ್ನು ಪಡೆದು ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗುವುದು. ಕೋವಿಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಸಂಪರ್ಕ ಹೊಂದಿರುವವರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗುವುದೆಂದು ತಿಳಿಸಿದರು.
ತಹಶೀಲ್ದಾರ್ ಎಂ. ಬಸವರಾಜ್ ಮಾತನಾಡಿ, ಗ್ರಾಮಕ್ಕೆ ರಾಸಾಯನಿಕ ಔಷಧ ಸಿಂಪರಣೆ ಮಾಡಲಾಗುವುದು. ಈ ಗ್ರಾಮದ ಸುತ್ತ ಬ್ಯಾರಿಕೇಡ್ ಅಳವಡಿಸಿ ಜನರಿಗೆ ದಿನನಿತ್ಯ ಬಳಸುವ ಹಾಲು ತರಕಾರಿ ಇತರೆ ಅಗತ್ಯ ವಸ್ತುಗಳನ್ನು ಪ್ರತಿದಿನ ವಿತರಣೆ ಮಾಡಲು ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಆಡಳಿತದಿಂದ ಸೌಲಭ್ಯವನ್ನು ಒದಗಿಸಲಾಗುವುದು. ಗ್ರಾಮದ ಜನರು ಕಡ್ಡಾಯವಾಗಿ ಮನೆಯಲ್ಲಿಯೇ ಇರಬೇಕು. ಗ್ರಾಪಂನಿಂದ 3,000 ಮಾಸ್ಕ್ಗಳನ್ನು ವಿತರಿಸಲಾಗುವುದು. ವಲಸೆ ಬಂದವರನ್ನು ಹೋಂ ಕ್ವಾರಂಟೈನ್ ಮಾಡಲಾಗುವುದೆಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಪದ್ಮಾವತಿ ಮಾತನಾಡಿ, ತಾಲೂಕಿನಲ್ಲಿ ಕೋವಿಡ್-19 ಪ್ರಕರಣಗಳು ಕಂಡು ಬಂದಿರುವುದರಿಂದ ಗ್ರಾಮಗಳಲ್ಲಿ ಆಶಾ ಕಾರ್ಯಕರ್ತೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪ್ರತಿನಿತ್ಯ ಸಮೀಕ್ಷೆ ಮಾಡಿ ಐಎಲ್‌ಐ, ಸ್ಯಾರಿಗಳ ಬಗ್ಗೆ ವರದಿ ನೀಡಬೇಕಾಗಿದೆ. ಪಟ್ಟಣದಲ್ಲಿ 10 ತಂಡಗಳಾಗಿ 2,850 ಮನೆಗಳಿಗೆ 5 ದಿನಗಳಲ್ಲಿ ಭೇಟಿ ನೀಡಿ ಸಮೀಕ್ಷೆ ಕಾರ್ಯವನ್ನು ಮುಗಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಪಿಎಸ್‌ಐ ಎಂ.ಕೆ. ಬಸವರಾಜ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಚ್. ಕಾಂತರಾಜ್, ತಾಪಂ ಸಹಾಯಕ ನಿರ್ದೇಶಕ ಸದಾಶಿವ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಟಿ. ಗುರುಮೂರ್ತಿ, ಆರ್.ಆರ್. ತಂಡದ ಶ್ರೀನಿವಾಸ್, ವೈ. ತಿಪ್ಪೇಸ್ವಾಮಿ, ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಣ್ಣ, ಶಿರಸ್ತೇದಾರ ಏಳುಕೋಟಿ ಮತ್ತಿತರರು ಭಾಗವಹಿಸಿದ್ದರು.