Advertisement

ತಂದೆ- ತಾಯಿಯನ್ನು ನಿರ್ಲಕ್ಷಿಸಿದ್ರೆ ಸಂಬಳಕ್ಕೆ ಬೀಳುತ್ತೆ ಕತ್ರಿ!

03:45 AM Feb 09, 2017 | Harsha Rao |

ಗುವಾಹಟಿ: “ತಂದೆ- ತಾಯಿ ಕಣ್ಮುಂದೆ ಇರುವ ದೇವರು’ ಎನ್ನುವುದು ನಂಬಿಕೆ. ವಯಸ್ಸಾದಂತೆ ಆ ಹಿರಿಯರನ್ನೇ ನಿರ್ಲಕ್ಷಿಸುವ ಪ್ರವೃತ್ತಿ ಎಲ್ಲೆಡೆ ಪಿಡುಗಿನಂತೆ ಆವರಿಸಿದ್ದು, ದೂರದ ಅಸ್ಸಾಂ ರಾಜ್ಯವನ್ನೂ ಅದು ಬಿಟ್ಟಿಲ್ಲ. ಅಲ್ಲಿನ ಸರ್ಕಾರಿ ಉದ್ಯೋಗಿಗಳು ಇನ್ನು ಮುಂದೆ ಹಿರಿಯ ತಂದೆ- ತಾಯಿಯನ್ನು ನಿರ್ಲಕ್ಷಿಸಿದರೆ ಅವರ ಮಾಸಿಕ ಸಂಭಾವನೆಗೆ ಕತ್ತರಿ ಬೀಳಲಿದೆ!

Advertisement

ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ ಮಂಡಿಸಿದ 2017- 18ರ ಬಜೆಟ್‌ನಲ್ಲಿ ದೇಶಕ್ಕೆ ಮಾದರಿ ಆಗುವಂಥ ಈ ಅಂಶ ಸೇರಿಕೊಂಡಿದೆ. ಅಲ್ಲದೆ, ಸರ್ಕಾರಿ ಉದ್ಯೋಗಿಗಳ ವಲಯದಲ್ಲಿ ದೊಡ್ಡ ಪಿಡುಗಾಗಿದ್ದ ತಂದೆ- ತಾಯಿ ನಿರ್ಲಕ್ಷ್ಯಕ್ಕೆ ಈ ಮೂಲಕ ಅವರು ಬ್ರೇಕ್‌ ಕೊಟ್ಟಿದ್ದಾರೆ. ಅಲ್ಲದೆ, ಸಾರ್ವಜನಿಕ ವಲಯಕ್ಕೆ ಸೇರಿದ ಯಾವುದೇ ಅಂಗಸಂಸ್ಥೆಯಲ್ಲಿ ಇಂಥ ಪ್ರಕರಣ ದಾಖಲಾದರೂ ಅವರ ಸಂಬಳಕ್ಕೆ ಕತ್ತರಿ ಬೀಳಲಿದೆ.

ಯಾಕೆ ಈ ನೀತಿ?: ಹೆತ್ತ ತಂದೆ- ತಾಯಿಯನ್ನು ನಿರ್ಲಕ್ಷಿಸಿ, ಬೀದಿಗೆ ತಳ್ಳುವ ಪ್ರಕರಣಗಳು 2016ರಲ್ಲಿ ಹೆಚ್ಚಾಗಿದ್ದು, ವಾರಕ್ಕೆ ಎರಡು ಮೂರು ಪ್ರಕರಣಗಳು ಸಚಿವರ ಕಿವಿಗೆ ಬೀಳುತ್ತಿತ್ತು. ಇದರಲ್ಲಿ ಸರ್ಕಾರಿ ಔದ್ಯೋಗಿಕ ಕುಟುಂಬಗಳ ಪ್ರಕರಣಗಳೇ ಹೆಚ್ಚಾಗಿದ್ದರಿಂದ ಆಡಳಿತರೂಢ ಬಿಜೆಪಿ ಸರ್ಕಾರ ಈ ಹೊಸ ನೀತಿಯನ್ನು ಜಾರಿಗೊಳಿಸಿದೆ. ಅಲ್ಲದೆ, ಈಶಾನ್ಯ ವಲಯ ರಾಜ್ಯಗಳಲ್ಲಿ ಅದರಲ್ಲೂ ಅಸ್ಸಾಂನ ಬೀದಿಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಇತರೆ ರಾಜ್ಯಗಳಿಗಿಂತ ಅಧಿಕವಿದ್ದು, ಈ ಮೂಲಕ ಯುವಸಮೂಹಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಲು ಅಸ್ಸಾಂ ಸರ್ಕಾರ ಮುಂದಾಗಿದೆ.

ಭಾರತ ಯುವಕರ ರಾಜ್ಯ ಎನ್ನುವುದು ನಿಜ. ಆದರೆ, 2050ರ ವೇಳೆಗೆ ದೇಶದ ಶೇ.20 ಮಂದಿ 60 ವರ್ಷ ದಾಟಿದವರೇ ಇರುತ್ತಾರೆ. ಈಗಾಗಲೇ ಕುಟುಂಬದ ಯುವಕರಿಗೆ ಹೊರೆ ಆಗಬಾರದೆಂದು ಸರ್ಕಾರಗಳು ಮಾಸಿಕ ವೃದ್ಧಾಪ್ಯ ವೇತನ ನೀಡುತ್ತಿವೆ. ಇದರ ಹೊರತಾಗಿಯೂ ಅಮಾನವೀಯ ಘಟನೆಗಳು ನಡೆದು, ವೃದ್ಧರನ್ನು ಬೀದಿಗೆ ತಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ವೃದ್ಧರ ಸಂಖ್ಯೆ ಇನ್ನೂ ಹೆಚ್ಚಳ ಕಾಣುವುದರಿಂದ ಈಗಿನ ಪೀಳಿಗೆಗೆ ಹಿರಿಯರ ಆರೈಕೆಯನ್ನು ಕರ್ತವ್ಯ ಎಂಬಂತೆ ಮನದಟ್ಟು ಮಾಡಲು ಈ ನೀತಿ ಸಹಕಾರಿ ಆಗಲಿದೆ ಎನ್ನುವುದು ಕುಟುಂಬ ಕಲ್ಯಾಣ ವಿಶ್ಲೇಷಕರ ಅಭಿಪ್ರಾಯ.

– ಅಸ್ಸಾಂ ಸರ್ಕಾರಿ ಉದ್ಯೋಗಿಗಳಿಗೆ ಹೊಸ ನೀತಿ
– ಬಜೆಟ್‌ನಲ್ಲಿ ವಿತ್ತ ಸಚಿವ ಹಿಮಂತ ಬಿಸ್ವಾ ಶರ್ಮಾ

Advertisement
Advertisement

Udayavani is now on Telegram. Click here to join our channel and stay updated with the latest news.

Next