Advertisement

ಕಟ್ಲ- ಕಾರ್ಗೋಗೇಟ್‌: ಜನವರಿಯಿಂದ ಕಾಂಕ್ರೀಟ್‌ ಕಾಮಗಾರಿ

08:06 PM Dec 04, 2021 | Team Udayavani |

ಸುರತ್ಕಲ್‌: ಮಹಾನಗರ ಪಾಲಿಕೆ ವ್ಯಾಪ್ತಿಯ ಸುರತ್ಕಲ್‌ ವಿಭಾಗೀಯ ವ್ಯಾಪ್ತಿಗೆ ಬರುವ ಕಟ್ಲ ಗಣೇಶಪುರ ದವರೆಗೆ ರಸ್ತೆಯನ್ನು ಪಾಲಿಕೆಗೆ ಹಸ್ತಾಂತರಿಸಲಾಗಿದ್ದು, ಪೆರ್ಮುದೆ, ಬಜಪೆಗೆ ರಾಜ್ಯ ರಸ್ತೆಗೆ ಸಂಪರ್ಕ ಮಾಡುವ ರಸ್ತೆಯನ್ನು ಕಾಂಕ್ರೀಟ್‌ ಕಾಮಗಾರಿ ಮೂಲಕ ರಸ್ತೆಯ ಹೊಂಡ-ಗುಂಡಿಗೆ ಮುಕ್ತಿ ನೀಡಲು ಯೋಜನೆ ತಯಾರಾಗಿದೆ.

Advertisement

ಲೋಕೋಪಯೋಗಿ, ಎಸ್‌ಎಡಿಪಿ ಅನುದಾನ ಸಹಿತ ಮೂರು ಹಂತದಲ್ಲಿ ಯೋಜನೆ ರೂಪಿಸ ಲಾಗಿದ್ದು, ಸುಮಾರು ಒಟ್ಟು 40 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

ಈಗಾಗಲೇ ಸುರತ್ಕಲ್‌ ಆಸ್ಪತ್ರೆ ಮುಂಭಾಗ ದಿಂದ ಸೇತುವೆ ವರೆಗೆ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಇದು ಪಾಲಿಕೆಅಧೀನದ ರಸ್ತೆಯಾಗಿದೆ. ಬಳಿಕ ರಾಜ್ಯ ಹೆದ್ದಾರಿಯ ಕಾಮಗಾರಿ ಮೊದಲ ಹಂತದಲ್ಲಿ 3.5 ಕಿ.ಮೀ. ಎರಡು ಲೇನ್‌ ರಸ್ತೆ ಕಾಂಕ್ರೀಟ್‌ ಕಾಮಗಾರಿಗೊಳ್ಳಲಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಜನವರಿಯಲ್ಲಿ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಎರಡನೇ ಹಂತದಲ್ಲಿ ವಿಸ್ತರಣೆ, ಚರಂಡಿ ಸಹಿತ ಮೂಲಸೌಕರ್ಯದ ಜತೆಗೆ ಕಾಮಗಾರಿ ನಡೆಯಲಿದೆ.

ಈ ಭಾಗದಲ್ಲಿ ಎಂಆರ್‌ಪಿಎಲ್‌, ಎಚ್‌ಪಿಸಿಎಲ್‌ ಸಹಿತ ಬೃಹತ್‌ ಕಂಪೆನಿಗಳ ಘನ ವಾಹನಗಳು ನಿತ್ಯ ಓಡಾಟ ನಡೆಸುತ್ತಿವೆ. ಪಾಲಿಕೆಗೆ ತಾಗಿಕೊಂಡಂತೆ ಬಾಳ ಗ್ರಾ.ಪಂ. ಇದ್ದು, ವಸತಿ ಬಡಾವಣೆ, ಶಾಲೆ, ದೇವಸ್ಥಾನ, ಚರ್ಚ್‌, ಮಸೀದಿ ಎಲ್ಲವೂ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಇದೆ. ಹೆಚ್ಚಿನ ಜನಸಂಚಾರ, ವಾಹನ ಸಂಚಾರ ಪರಿಗಣಿಸಿ ದ್ವಿಪಥ ರಸ್ತೆಯಾಗಿ ಇದನ್ನು ಅಭಿವೃದ್ಧಿಗೊಳಿ

ಸಲು ನೀಲಿ ನಕಾಶೆ ರೂಪಿಸಿದ್ದು, ಮಹತ್ವದ ಯೋಜನೆಯೆಂದು ಪರಿಗಣಿಸಲ್ಪಟ್ಟಿದೆ. 2ನೇ ಹಂತದಲ್ಲಿ ಚತುಃಷ್ಪಥ ರಸ್ತೆಗೆ ಬೇಕಾದ ಯೋಜನೆ ತಯಾರಾಗಿದ್ದು, ಇದರಲ್ಲಿ ಫುಟ್‌ ಪಾತ್‌ ಸಹಿತ ಸಕಲ ಮೂಲಸೌಲಭ್ಯಇರಲಿವೆ.

Advertisement

ಮಂಗಳಪೇಟೆಯಿಂದ ತಾಳಿಪಾಡಿ ರಸ್ತೆ ರಾಜ್ಯ ಹೆದ್ದಾರಿಯ ಕೈಯ್ಯಲ್ಲಿದ್ದು ಎಂಆರ್‌ಪಿಎಲ್‌ ಅನ್ನು ಸುತ್ತು ಬಳಸಿ ಬಜಪೆಗೆ ಸಂಪರ್ಕದ ರಸ್ತೆಯಾಗಿದೆ.

ದಶಕದ ಬೇಡಿಕೆ:

ಸುರತ್ಕಲ್‌, ಚೊಕ್ಕಬೆಟ್ಟು, ಕೃಷ್ಣಾಪುರ ಸಹಿತ ಸುತ್ತಲಿನ ರಸ್ತೆಗಳು ವಿಸ್ತರಣೆಗೊಂಡು ಕಾಂಕ್ರೀಟ್‌ ಕಾಮಗಾರಿ ಆದಾಗ ಈ ರಸ್ತೆ ಯನ್ನೂ ಅಭಿವೃದ್ಧಿಪಡಿಸಬೇಕೆಂಬ ಕೂಗು ಕೇಳಿ ಬಂದಿತ್ತು. 2016ರಲ್ಲಿ ರಸ್ತೆಯ ವಿಸ್ತರಣೆಗೆ ಮುಂದಾಗಿದ್ದರೂ ಅನುದಾನದ ಕೊರತೆಯಿಂದ ಸಾಧ್ಯವಾಗಿರಲಿಲ್ಲ. ಮೀಸಲು ಅನುದಾನವಿಲ್ಲದೆ ಲೋಕೋಪಯೋಗಿ ಇಲಾಖೆ ಯೋಜನೆ ಕೈಬಿಟ್ಟಿತ್ತು. ಘನ ವಾಹನ ಓಡಾಟ, ಮಳೆಯಿಂದಾಗಿ ರಸ್ತೆ ಪ್ರತೀ ವರ್ಷ ಹೊಂಡ- ಗುಂಡಿಗಳಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ತಾತ್ಕಾಲಿಕ ತೇಪೆ ಕಾರ್ಯಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಲಾಗುತ್ತಿತ್ತು.

ಹಿಂದೆ ಈ ಯೋಜನೆಗೆ ಯಾವುದೇ ಹಣವನ್ನು ಮೀಸಲಿಡದೆ 50 ಕೋಟಿ ಹಣದಲ್ಲಿ ಗುತ್ತಿಗೆ ಆಧಾರಿತವಾಗಿ ಮಾಡುವ ಯೋಜನೆಯಾಗಿತ್ತು. ಬಳಿಕ ಗುತ್ತಿಗೆದಾರರು ಮುಂದೆ ಬಾರದೆ ಸಾಧ್ಯವಾಗಿಲ್ಲ. ಇದೀಗ ಲೋಕೋಪಯೋಗಿ ಇಲಾಖೆಯ ಮೂಲಕ ಅನುದಾನ ಕ್ರೋಡೀಕರಿಸಿ ಸುಸಜ್ಜಿತ ಚತುಷ್ಪಥ ರಸ್ತೆ ನಿರ್ಮಾಣದ ಯೋಜನೆಯಿದೆ. ಟ್ಯಾಂಕರ್‌ ಟ್ರಕ್‌ ಓಡಾಟ ಹೆಚ್ಚಿದ್ದು ಇದರ ಅನಿವಾರ್ಯತೆಯಿದೆ ಎನ್ನುತ್ತಾರೆ ಶಾಸಕ ಡಾ| ಭರತ್‌ ಶೆಟ್ಟಿ ವೈ. ಅವರು.

ಯೋಜನೆ ಸಿದ್ಧಗೊಂಡಿದೆ:

ರಸ್ತೆ ಕಾಂಕ್ರೀಟ್‌ ಕಾಮಗಾರಿಗೆ ಬೇಕಾದ ಯೋಜನೆ ತಯಾರಾಗಿದೆ.  ಜನವರಿಯಲ್ಲಿ ಕಾಮಗಾರಿ ಆರಂಭಿಸಲಾಗುವುದು. ಮೊದಲ ಹಂತದಲ್ಲಿ 3.5 ಕಿ.ಮೀ., ಉಳಿದಂತೆ ರಸ್ತೆ ವಿಸ್ತರಣೆ, ಇತರ ಸೌಲಭ್ಯ ವನ್ನು ಎರಡು ಹಂತಗಳಲ್ಲಿ ಪೂರ್ಣಗೊಳಿಸ ಲಾಗುವುದು.-ಯಶವಂತ್‌, ಎಇ, ಲೋಕೋಪಯೋಗಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next