Advertisement

ನೇಪಾಲದ ಹೊಸ ನಕ್ಷೆಗೆ ನಾಳೆ ಕಾನೂನು ಬಲ ; ಭಾರತದ ಭೂಪ್ರದೇಶ ಒಳಗೊಂಡ ವಿವಾದಿತ ನಕ್ಷೆ

11:59 PM Jun 08, 2020 | Hari Prasad |

ಹೊಸದಿಲ್ಲಿ: ಭಾರತದ ಭೂ ಭಾಗಗಳನ್ನು ಏಕಪಕ್ಷೀಯವಾಗಿ ತನ್ನದ್ದೆಂದು ತೋರಿಸಿಕೊಳ್ಳಲು ಯತ್ನಿಸುವ ವಿವಾದಿತ ನಕ್ಷೆಗೆ ಕಾನೂನಾತ್ಮಕ ಸಮ್ಮತಿ ನೀಡಲು ನೇಪಾಲ ಇನ್ನೊಮ್ಮೆ ಮುಂದಾಗಿದೆ.

Advertisement

ಭಾರತದ ಭೂಪ್ರದೇಶವನ್ನೊಳಗೊಂಡ ನೇಪಾಳದ ವಿವಾದಿತ ನಕ್ಷೆಗೆ ಕಾನೂನಾತ್ಮಕ ಸ್ಥಾನಮಾನ ನೀಡಲು ಎರಡನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಜೂ.9 ರಂದು ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅಲ್ಲಿನ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ.

ಈಗಾಗಲೇ ವಿಪಕ್ಷಗಳ ಬೆಂಬಲದೊಂದಿಗೆ ಮೇ 31ರಂದು ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಆದರೆ ಅನುಮೋದನೆಗೊಂಡಿರಲಿಲ್ಲ.

ಭಾರತದ ಭೂಭಾಗವನ್ನು ಏಕಪಕ್ಷೀಯವಾಗಿ ತನ್ನದೆಂದು ನಕ್ಷೆಯಲ್ಲಿ ಘೋಷಿಸಿಕೊಂಡಿರುವ ನೇಪಾಲ, ಉತ್ತರಖಂಡದ ಕಾಲಪಾನಿ, ಲಿಪುಲೇಖ್‌ ಹಾಗೂ ಲಿಂಪಿಯಾಧುರ ಮೇಲೆ ಸ್ವತಂತ್ರ ಕಾನೂನು ನಿಯಮಾವಳಿ ಹೇರುವ ಸಾಧ್ಯತೆ ಇದೆ.

ತಿಂಗಳ ಪ್ರಕ್ರಿಯೆ: ಹೊಸ ನಕ್ಷೆ ಅಂಗೀಕಾರಗೊಳ್ಳಲು ನೇಪಾಳ ಇನ್ನೂ ಒಂದು ತಿಂಗಳು ಕಾಯಬೇಕು. ಸಂಸತ್ತಿನಲ್ಲಿ ಮಸೂದೆ ಮಂಡಿಸಿದ ಬಳಿಕ, ಆ ಸಂಬಂಧ ತಿದ್ದುಪಡಿಗೆ ಸಾರ್ವಜನಿಕರಿಗೂ ಅವಕಾಶ ನೀಡಲಾಗುತ್ತದೆ. ಮಸೂದೆ ಮಾರ್ಪಡಿಸುವ ಕುರಿತು ಜನತೆ ಸಂಸತ್ತಿನ ಕಾರ್ಯದರ್ಶಿಗೆ ಪತ್ರ ಬರೆದು ಸೂಚಿಸಬಹುದು. ಸಂಸತ್‌ ಅದನ್ನು ಮತ್ತೆ ಚರ್ಚೆಗೊಳಪಡಿಸಿ, ಮಸೂದೆ ಅಂಗೀಕರಿಸಬೇಕಾಗುತ್ತದೆ.

Advertisement

ಭಾರತದ ಜತೆ ಮಾತುಕತೆ: ನೇಪಾಲವು ಭಾರತದೊಂದಿಗೆ ವಿದೇಶಾಂಗ ಕಾರ್ಯದರ್ಶಿ ಮಟ್ಟದಲ್ಲಿ ವಿಡಿಯೊ ಕಾನ್ಫರೆನ್ಸ್‌ ನಡೆಸಿದೆ ಎಂದೂ ವರದಿಯಾಗಿದೆ. ತನ್ನ ಹೊಸ ನಕ್ಷೆಯನ್ನು ಭಾರತ ಕಡೇ ಕ್ಷಣದಲ್ಲಾದರೂ ಒಪ್ಪುತ್ತದೆಂಬ ಹುಸಿ ಭರವಸೆ ನೇಪಾಲದ್ದು. ಒಂದು ವೇಳೆ ಭಾರತ ಒಪ್ಪಿದರೆ, ಜೂ.9ರಂದು ಎರಡನೇ ಸಂವಿಧಾನ ತಿದ್ದುಪಡಿ ಮಸೂದೆ ಮಂಡನೆ ಓಲಿ ಸರಕಾರಕ್ಕೆ ಇನ್ನಷ್ಟು ಸುಲಭವಾಗುತ್ತದೆ.

ಆದರೆ, ಓಲಿ ಸರಕಾರದ ಈ ನಡೆಯನ್ನು ಭಾರತ ಒಪ್ಪುವುದಿಲ್ಲ ಎನ್ನುವುದು ಇಲ್ಲಿನ ನೇಪಾಲದ ಉನ್ನತಾಧಿಕಾರಿಗಳಿಗೆ ಸ್ಪಷ್ಟವಾಗಿದೆ. ನೆರೆ ರಾಷ್ಟ್ರದೊಂದಿಗೆ ಕನಿಷ್ಠ ಮಾತುಕತೆಯನ್ನೂ ನಡೆಸದೆ ನೇಪಾಳ ಏಕಪಕ್ಷೀಯವಾಗಿ ತೀರ್ಮಾನಿಸಿದೆ. ಇದು ನಕ್ಷೆ ವಿವಾದವನ್ನು ಇನ್ನಷ್ಟು ಜಟಿಲ ಹಂತಕ್ಕೆ ಒಯ್ಯಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next