Advertisement

ಅಶಿಸ್ತಿನ ವರ್ತನೆ, ಮೇಳದ ಅವಹೇಳನಕ್ಕಾಗಿ ಭಾಗವತರಿಗೆ ಅವಕಾಶ ನಿರಾಕರಣೆ: ಕಲ್ಲಾಡಿ

11:49 AM Nov 25, 2019 | Team Udayavani |

ಕಟೀಲು: ಒಂದು ವರ್ಷದಿಂದ ಕಟೀಲು ಯಕ್ಷಗಾನ ಮೇಳದ ಸಂಪ್ರದಾಯ ಗಳಿಗೆ ಅಗೌರವ ತೋರಿದ್ದು, ಕಲಾವಿದನಾಗಿ ಪರಂಪರೆ, ಮೇಳದ ನಿಯಮಗಳನ್ನು ಧಿಕ್ಕರಿಸಿದ ಅಶಿಸ್ತಿನ ವರ್ತನೆಗಳಿಗಾಗಿ ಪ್ರಸ್ತುತ ವರ್ಷದಲ್ಲಿ ಪಟ್ಲ ಸತೀಶ್‌ ಶೆಟ್ಟಿ ಅವರಿಗೆ ಮೇಳದ ತಿರುಗಾಟದಲ್ಲಿ ಭಾಗವತಿಕೆಗೆ ಅವಕಾಶ ನಿರಾಕರಿಸಲಾಗಿದೆ ಎಂದು ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿ ಹೇಳಿದರು.

Advertisement

ಕಟೀಲು ಯಕ್ಷಗಾನ ಮೇಳದ ಪ್ರಸ್ತುತ ವಿವಾದದ ಬಗ್ಗೆ ರವಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪತ್ತನಾಜೆಯ ಕೊನೆಯ ಸೇವೆಯಾಟದ ಬಳಿಕ ಶುಕ್ರವಾರ ನಡೆದ ಪ್ರಸ್ತುತ ವರ್ಷದ ಆರಂಭಿಕ ಸೇವೆಯಾಟದ ವರೆಗೆ ಪಟ್ಲ ಸತೀಶ್‌ ಶೆಟ್ಟಿ ಅವರು ನನ್ನನ್ನು ಭೇಟಿಯಾಗಿಲ್ಲ. ಯಜಮಾನನಿಗೆ ಗೌರವ ನೀಡುವ ಸೌಜನ್ಯವನ್ನು ಕೂಡ ಇರಿಸಿಕೊಳ್ಳದ ಅವರು ಮೇಳದ ಬಂಡಾಯ ಕಲಾವಿದರ ಪರವಾಗಿ ಮತ್ತು ಮೇಳಗಳು ಏಲಂ ಆಗುವ ಪರವಾಗಿ ಕೆಲಸ ಮಾಡುತ್ತಿದ್ದಾರೆ. ನಾನು ನಡೆದು ಕೊಂಡದ್ದರಲ್ಲಿ ತಪ್ಪಿದ್ದರೆ ಅದನ್ನು ಅವರು ಸಾಬೀತುಪಡಿಸಲಿ. ಭಾಗವತಿಕೆಗೆ ಅವಕಾಶ ಇಲ್ಲದಿರುವ ಬಗ್ಗೆ ಸೂಚನೆ ನೀಡಿಯೇ ಅವರನ್ನು ದೂರವಿರಿಸಿದ್ದೇವೆ. ಈ ಬಗ್ಗೆ ಕಟೀಲಿನ ದೇವಿಯ ಮುಂದೆ ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿ ಹೇಳಿದರು.

ಕ್ರಮಕ್ಕೆ ಸೂಚಿಸಿದ್ದೆವು
ಆನುವಂಶಿಕ ಮೊಕ್ತೇಸರ ದೇಗುಲದ ಆನುವಂಶಿಕ ಮೊಕ್ತೇಸರ ಸನತ್‌ಕುಮಾರ್‌ ಶೆಟ್ಟಿ ಕೊಡೆತ್ತೂರು ಗುತ್ತು ಮಾತನಾಡಿ, ಕಳೆದ ವರ್ಷದಿಂದ ಪಟ್ಲ ಸತೀಶ್‌ ಶೆಟ್ಟಿ ಅವರು ಕಟೀಲು ಮೇಳದ ಬಗ್ಗೆ ನೀಡಿದ ಅವಹೇಳನಕಾರಿ ಹೇಳಿಕೆಗಳು ಮತ್ತು ಅವರ ಮೇಳವಿರೋಧಿ ಚಟುವಟಿಕೆಗಳ ಬಗ್ಗೆ ಭಕ್ತರಿಂದ ಬಹಳಷ್ಟು ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಅಡಳಿತ ಮಂಡಳಿಯ ವತಿಯಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಂಚಾಲಕರಿಗೆ ಸೂಚಿಸಿದ್ದೆವು. ತಿರುಗಾಟ ಚಾಲ್ತಿಯಲ್ಲಿರುವಾಗಲೇ ಪಟ್ಲ ಸತೀಶ್‌ ಶೆಟ್ಟಿ ಅವರು ರವಿವಾರ ಮುಂಬಯಿಯ ಕಾರ್ಯಕ್ರಮವೊಂದರಲ್ಲಿ ಪೂರ್ವ ನಿರ್ಧಾರದಂತೆ ಭಾಗವಹಿಸಿದ್ದಾರೆ. ಮೇಳದಿಂದ ಅನುಮತಿಯನ್ನು ಪಡೆದಿಲ್ಲ. ಇದು ಅವರೇ ಮೇಳವನ್ನು ತ್ಯಜಿಸುವ ನಿರ್ಧಾರವನ್ನು ಮಾಡಿಕೊಂಡಿದ್ದರು ಎಂಬುದನ್ನು ಸೂಚಿಸುತ್ತದೆ ಎಂದರು.

ದೇಗುಲದ ಅರ್ಚಕರ ಪರವಾಗಿ ಹರಿನಾರಾಯಣ ಆಸ್ರಣ್ಣ ಮಾತನಾಡಿ, ಆಸ್ರಣ್ಣ ಮತ್ತು ಕಲ್ಲಾಡಿ ಮನೆತನಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ನಡೆಯುತ್ತಿದ್ದು, ಇದು ಸರಿಯಲ್ಲ. ಪ್ರಥಮ ಸೇವೆಯಾಟವನ್ನು ಆಸ್ರಣ್ಣ ಬಂಧುಗಳು ವೀಕ್ಷಿಸುವ ಸಂಪ್ರದಾಯವಿಲ್ಲ. ಆದರೂ ಪ್ರಕರಣದಲ್ಲಿ ಆಸ್ರಣ್ಣನವರ ಕೈವಾಡ ಇದೆ ಎಂದು ಬಿಂಬಿಸಲಾಗುತ್ತಿದೆ. ಭಾಗವತಿಕೆಗೆ ಅವಕಾಶ ಇಲ್ಲ ಎಂಬುದು ತಿಳಿದಿದ್ದರೂ ಪಟ್ಲ ಸತೀಶ್‌ ಶೆಟ್ಟಿ ಅವರು ಅನುಕಂಪ ಸೃಷ್ಟಿಸುವುದಕ್ಕಾಗಿ ರಂಗಸ್ಥಳಕ್ಕೆ ಏಕಾಏಕಿ ಪ್ರವೇಶಿಸಿ, ಭಾಗವತಿಕೆಗೆ
ಕುಳಿತುಕೊಳ್ಳುವ ನಾಟಕವಾಡಿದ್ದು, ಇದು ಪೂರ್ವ ನಿಯೋಜಿತ ಎಂಬ ಅನುಮಾನ ಮೂಡುತ್ತಿದೆ. ಮೇಳದ ಸಂಚಾಲಕರು ತನ್ನ
ನಿರ್ಧಾರ ಕೈಗೊಳ್ಳಲು ಸ್ವತಂತ್ರರು ಎಂದರು.

Advertisement

ದೇಗುಲದ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಕಟೀಲಿನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ , ಸದಾನಂದ ಆಸ್ರಣ್ಣ, ಸುಧೀರ್‌ ಶೆಟ್ಟಿ ಕೊಡೆತ್ತೂರುಗುತ್ತು, ಬಿಪಿನ್‌ ಪ್ರಸಾದ್‌ ಕೊಡೆತ್ತೂರು ಗುತ್ತು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next