ಕಟೀಲು : ಪುರಾಣ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ದೇವಳದ ಮೂಲಸ್ಥಾನ ಕುದ್ರವಿನಲ್ಲಿ ಭೂಮಿಯಲ್ಲಿ ದೇಗುಲದ ಸಿಬಂದಿಗಳೇ ಸೇರಿ ಕೊರೊನಾ ಲಾಕ್ ಡೌನ್ ಸಂದರ್ಭ ಭತ್ತದ ಕೃಷಿ ಮಾಡಿದ್ದು, ಬೆಳೆ ಯಶಸ್ವಿಯಾಗಿದೆ.
ಲಾಕ್ ಡೌನ್ ಸಂದರ್ಭ ಭಕ್ತರಿಗೆ ಪ್ರವೇಶ ಇರಲಿಲ್ಲ. ಪರಿಣಾಮ ಭೋಜನ ಶಾಲೆ, ಕಚೇರಿಯಲ್ಲಿ ಸೀಮಿತ ಸಂಖ್ಯೆಯ ಸಿಬಂದಿಗಳು ಬಂದರೂ ಅವರಿಗೆ ಹೇಳಿಕೊಳ್ಳುವಂತಹ ಕೆಲಸವಿರಲಿಲ್ಲ. ಸುಮ್ಮನೆ ಕೂತು ಹೋಗುವ ಬದಲು ಸಮಯದ ಸದುಪಯೋಗ ಮಾಡುವ ದೃಷ್ಟಿಯಿಂದ ಹುಟ್ಟಿಕೊಂಡ ಯೋಚನೆ ಭತ್ತದ ಬೆಳೆ. ಬ್ರಹ್ಮಕಲಶೋತ್ಸವ ಸಂದರ್ಭ ನಾಗಮಂಡಲ ನಡೆದ ಚಪ್ಪರದ ಬಳಿ ಇದ್ದ ಕಾಲಿ ಸ್ಥಳದಲ್ಲಿ ದೇಗುಲದ ಸಿಬಂದಿಗಳೇ ಸೇರಿ, ಉತ್ತರು. ನೇಜಿ ನೆಟ್ಟರು. ಇದೀಗ ಭತ್ತದ ಕಟಾವು ಮಾಡಿ, ಭತ್ತವನ್ನು ಬೇರ್ಪಡಿಸಿದರು. ನಾಲ್ಕು ಕಳಸೆಯಷ್ಟು ಭತ್ತ ಬೆಳೆದು ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲ ಮತ್ತೆ ಸುಗ್ಗಿ ಬೆಳೆಗೆ ತಯಾರಾಗಿದ್ದಾರೆ.
ಇದನ್ನೂ ಓದಿ:ಪೊಲೀಸ್ ಇಲಾಖೆ ರೀತಿ ಅರಣ್ಯ ಇಲಾಖೆಯಲ್ಲೂ ಮೀಸಲು ಪಡೆ
ಇಲ್ಲಿ ಬೆಳೆದ ತೆನೆಯನ್ನು ಧೇಗುಲದ ಕೊರಳ ಹಬ್ಬಕ್ಕೆ ತೆನೆಗೆ ಬಳಸಲಾಗಿದೆ. ಈಗ ಬೆಳೆದಿರುವ ಭತ್ತವನ್ನು ದೀಪಾವಳಿಯ ಧಾನ್ಯದ ಪೂಜೆಗೆ ಉಪಯೋಗಿಸಿ, ದೇವಸ್ಥಾನದ ನೈವೇದ್ಯಕ್ಕೆ ಉಪಯೋಗಿಸಲಾಗುತ್ತದೆ ಎನ್ನುತ್ತಾರೆ ದೇಗುಲದ ಪ್ರಬಂಧಕ ತಾರಾನಾಥ ಶೆಟ್ಟಿ. ಸಣ್ಣ ಭೂಮಿಯಲ್ಲಿ ಸ್ವಲ್ಪ ಮಟ್ಟಗೆ ಕೃಷಿ ಮಾಡಿರುವುದು ದೊಡ್ಡ ಸಾಧನೆಯೇನಲ್ಲ. ಆದರೆ ದೇವಸ್ಥಾನದಲ್ಲಿ ಕೊರಳಹಬ್ಬಕ್ಕೆ, ಧಾನ್ಯದ ಪೂಜೆಗೆ ಭತ್ತವನ್ನು ನಾವೇ ಬೆಳೆಸಿದ್ದು ಮತ್ತು ಇದು ನೈವೇದ್ಯಕ್ಕೂ ಬಳಕೆಯಾಗುವುದು ನಮಗೆ ಖುಷಿಕೊಟ್ಟಿದೆ. ಇದನ್ನೂ ಇನ್ನೂ ಮುಂದುವರಿಸುತ್ತೇವೆ ಎನ್ನುತ್ತಾರೆ ಸಿಬಂದಿಗಳು.
ಈಗ ಬೆಳೆದಿರುವ ಕಜೆ ಜಯ ಭತ್ತದ ಬೀಜವನ್ನು ಮಿತ್ತಬೆ„ಲು ಪುರುಷೋತ್ತಮ ಕೋಟ್ಯಾನ್ ನೀಡಿದ್ದು, ಮುಂದಿನ ಸುಗ್ಗಿ ಬೆಳೆಗೆ ಪಾರಂಪರಿಕ ಅತಿಕಾರ(ಸತ್ಯದ ಬೆಳೆ)ದ ಬೀಜವನ್ನೂ ನೀಡಿದ್ದಾರೆ. ಭೋಜನಾಲಯದಲ್ಲಿ ಬಡಿಸುವ, ಕಚೇರಿಯಲ್ಲಿ ಕೆಲಸ ಮಾಡುವ ಸಿಬಂದಿಗಳು ಬ್ರಹ್ಮಕಲಶೋತ್ಸವ ಸಂದರ್ಭ ಶ್ರಮದಾನದ ಮೂಲಕ ಸ್ವತ್ಛತೆಯ ಕಾರ್ಯದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಇದೀಗ ಭತ್ತದ ಕೃಷಿಯಲ್ಲೂ ಖುಷಿಪಟ್ಟಿದ್ದಾರೆ.