ಪಡುಪಣಂಬೂರು: ಕಟೀಲು ಕ್ಷೇತ್ರದ ಪುಣ್ಯ ಕಾರ್ಯಕ್ಕೆ ಮೂಲ್ಕಿ ಸೀಮೆಯ ಜನತೆಯು ಪರಸ್ಪರ ಕೈ ಜೋಡಿಸಬೇಕು. ಎಲ್ಲ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಕ್ತವಾಗಿ ಸ್ವಯಂಸ್ಫೂರ್ತಿಯಿಂದ ಭಾಗವಹಿಸೋಣ. ಹೊರೆ ಕಾಣಿಕೆಯ ಸಲ್ಲಿಕೆ ಕಾರ್ಯಕ್ರಮವನ್ನು ಶ್ರದ್ಧೆಯಿಂದ ನಡೆಸಬೇಕು ಎಂದು ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ಹೇಳಿದರು.
ಪಡುಪಣಂಬೂರು ಮೂಲ್ಕಿ ಅರಮನೆಯ ಧರ್ಮ ಚಾವಡಿಯಲ್ಲಿ ನಡೆದ ಕಟೀಲು ಕ್ಷೇತ್ರಕ್ಕೆ ಸಲ್ಲಿಕೆಯಾಗಲಿರುವ ಹೊರೆಕಾಣಿಕೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಪಡುಪಣಂಬೂರಿನ ಆಸುಪಾಸಿನ ಗ್ರಾಮಸ್ಥರು ಮೂಲ್ಕಿ ಅರಮನೆಯಲ್ಲಿ ಹಾಗೂ ತೋಕೂರು ಗ್ರಾಮದವರು ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನದಲ್ಲಿ ಜ. 23ರೊಳಗೆ ತಲುಪಿಸಬೇಕು ಎಂದು ನಿರ್ಧರಿಸಿ, ಜ. 24ರಂದು ಬಪ್ಪನಾಡು ದೇಗುಲದಿಂದ ಹೊರಡುವ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸುವ ಬಗ್ಗೆ ನಿರ್ಧರಿಸಲಾಯಿತು.
ಹೊರೆಕಾಣಿಕೆಯಲ್ಲಿ ಅಕ್ಕಿ, ತೆಂಗಿನಕಾಯಿ, ಸಕ್ಕರೆ, ಬೆಲ್ಲ, ತುಪ್ಪ, ಎಣ್ಣೆ, ಸೀಯಾಳ, ಬಾಳೆಹಣ್ಣು, ದವಸ ಧಾನ್ಯಗಳನ್ನು ಮಾತ್ರ ಸಂಗ್ರಹಿಸಿ ನೀಡುವುದೆಂದು ಸೂಚನೆ ನೀಡಲಾಯಿತು.
ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ಭುಜಂಗ ಎಂ. ಶೆಟ್ಟಿ, ಜನಾರ್ದನ ಪಡುಪಣಂಬೂರು, ನ್ಯಾಯವಾದಿ ಜಿ. ಚಂದ್ರಶೇಖರ್, ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್‌ದಾಸ್, ಸದಸ್ಯ ಸಂತೋಷ್ ಕುಮಾರ್, ಹರಿಪ್ರಸಾದ್, ಮೂಲ್ಕಿ ಅರಮನೆಯ ಗೌತಮ್ ಜೈನ್, ಕದಿಕೆ ಮಸೀದಿಯ ಅಧ್ಯಕ್ಷ ಸಾಹುಲ್ ಹಮೀದ್ ಕದಿಕೆ, ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರಿದಾಸ್ ಭಟ್, ತೋಕೂರು ಯುವಕ ಸಂಘದ ಅಧ್ಯಕ್ಷ ಹೇಮನಾಥ್ ಅಮೀನ್, ನವೀನ್‌ಕುಮಾರ್, ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ನ್ಪೋರ್ಟ್ಸ್ ಕ್ಲಬ್‌ನ ಗೌರವಾಧ್ಯಕ್ಷ ನಾರಾಯಣ ಜಿ.ಕೆ., ಎಸ್. ಕೋಡಿ ಶ್ರೀದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ವಿಲಾಸಿನಿ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು. ಮೂಲ್ಕಿ ಅರಮನೆಯಲ್ಲಿ ಕಟೀಲು ಕ್ಷೇತ್ರದ ಹೊರೆಕಾಣಿಕೆಯ ಬಗ್ಗೆ ಸಭೆ ನಡೆಯಿತು.