Advertisement

ಕಟೀಲು: ಪ್ಲಾಸ್ಟಿಕ್‌ ಮುಕ್ತ ಬ್ರಹ್ಮಕಲಶೋತ್ಸವ

12:24 AM Jan 04, 2020 | mahesh |

ಕಟೀಲು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜ. 22ರಿಂದ ಫೆಬ್ರವರಿ 3ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ದೇವಸ್ಥಾನ ಸಮಿತಿ ಮತ್ತು ಆಡಳಿತ ಮಂಡಳಿ ಮುಂದಾಗಿದ್ದು ಈ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಲು ಯೋಜನೆಯನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ.

Advertisement

ದೇವಸ್ಥಾನ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯಿಂದ ಪ್ರಚಾರಾರ್ಥವಾಗಿ ಮುದ್ರಿಸಿರುವ ಎಲ್ಲ ಬ್ಯಾನರ್‌ಗಳೂ ಬಟ್ಟೆಯದ್ದಾಗಿದ್ದು, ಇದು ಬಟ್ಟೆಯ ಬ್ಯಾನರ್‌, ಪ್ಲಾಸ್ಟಿಕ್‌ ಬಳಸದಿರೋಣ ಎಂಬ ಸ್ಲೋಗನ್‌ನ್ನು ಕೂಡ ಹಾಕಲಾಗಿದೆ. ಫ್ಲೆಕ್ಸ್‌ ಬ್ಯಾನರ್‌ ಬದಲು ಬಟ್ಟೆಯ ಬ್ಯಾನರನ್ನೇ ಬಳಸಿ ಎಂದು ಭಕ್ತರನ್ನು ಕೂಡ ವಿನಂತಿಸಲಾಗಿದೆ.

ಸ್ಟೀಲ್‌ ಬಟ್ಟಲು ಬಳಕೆಗೆ ನಿರ್ಧಾರ
ಊಟ ಹಾಗೂ ಉಪಾಹಾರಕ್ಕೆ ಸ್ಟೀಲ್‌ ಬಟ್ಟಲನ್ನು ಬಳಸಲು ನಿರ್ಧರಿಸಲಾಗಿದ್ದು, ನೀರು ಹಾಗೂ ಕಾಫಿ, ಚಾ, ಪಾನೀಯಗಳಿಗೂ ಸ್ಟೀಲ್‌ ಹಾಗೂ ಕಾಗದದ ಲೋಟೆಗಳನ್ನೇ ಬಳಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ದಾನಿಗಳೂ ಮುಂದೆ ಬಂದಿದ್ದು, ಹತ್ತು ಸಾವಿರಕ್ಕೂ ಮಿಕ್ಕಿದ ಬಟ್ಟಲುಗಳನ್ನು ಅಷ್ಟೇ ಸಂಖ್ಯೆಯ ಲೋಟಗಳನ್ನು ವ್ಯವಸ್ಥೆಗೊಳಿಸಲಾಗುತ್ತಿದೆ.

ಇನ್ನು ಪ್ಲಾಸ್ಟಿಕ್‌ ಚೀಲಗಳನ್ನು ಬಳಸದೆ ಬಟ್ಟೆಯ ಚೀಲಗಳನ್ನೇ ಬಳಸಲು ಮುತುವರ್ಜಿ ವಹಿಸಲಾಗಿದೆ. ಪಂಚಕಜ್ಜಾಯಕ್ಕೂ ಪ್ಲಾಸ್ಟಿಕ್‌ ಲಕೋಟೆಯ ಬದಲು ಕಾಗದದ ಲಕೋಟೆಗಳನ್ನು ಬಳಸಲು ದೇವಸ್ಥಾನ ಮುಂದಾಗಿದೆ.

ತೀರ್ಥದ ಬಾಟಲಿ ಹಾಗೂ ತ್ರಿಮಧುರ ಪ್ರಸಾದವನ್ನು ಉತ್ತಮ ದರ್ಜೆಯ ಪ್ಲಾಸ್ಟಿಕ್‌ ಬಾಟಲಿಯಲ್ಲಿ ಕೊಡಲಾಗುತ್ತಿದ್ದು, ಪರ್ಯಾಯ ವ್ಯವಸ್ಥೆಗೆ ಚಿಂತನೆ ನಡೆದಿದೆ. ಇನ್ನು ಅಲಂಕಾರಕ್ಕಾಗಿ ಹಾಕಲಾಗುವ ಬಂಟಿಂಗ್ಸ್‌ ಬಟ್ಟೆಯದ್ದೇ ಆಗಿರುವಂತೆ ಸಮಿತಿ ಸೂಚಿಸಿದೆ.

Advertisement

ಪ್ಲಾಸ್ಟಿಕ್‌ ರಹಿತ ಬ್ರಹ್ಮಕಲಶೋತ್ಸವ
ಸಾಧ್ಯವಾದಷ್ಟು ಪ್ಲಾಸ್ಟಿಕ್‌ ಮುಕ್ತ ಬ್ರಹ್ಮಕಲಶೋತ್ಸವವನ್ನಾಗಿಸಲು ಪ್ರಯತ್ನ ಸಾಗಿದೆ. ದ್ವಾರ ಮುಂತಾದ ಅಲಂಕಾರಿಕ ವಸ್ತುಗಳಲ್ಲೂ ಪ್ಲಾಸ್ಟಿಕ್‌ ರಹಿತ ವಸ್ತುಗಳನ್ನು ಬಳಸುವಂತೆ ಭಕ್ತರನ್ನು ವಿನಂತಿಸಲಾಗಿದೆ.

ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ
ದೇವಸ್ಥಾನದಲ್ಲಿ ಈಗಾಗಲೇ ಪ್ರಸಾದ ಪಂಜಕಜ್ಜಾಯಕ್ಕೆ ಹಾಗೂ ಪ್ರಸಾದ ವಿತರಣೆ ಬಟ್ಟೆಯ ಚೀಲ ಹಾಗೂ ಕುಂಕುಮ ಪ್ರಸಾದಕ್ಕೂ ಕಾಗದದ ಲಕೋಟೆಯನ್ನು ಬಳಸಲಾಗುವುದು. ಭೋಜನ ಶಾಲೆಗೆ 2,000 ಊಟದ ಬಟ್ಟಲು ಉಪಯೋಗಿಸುವ ನಿಟ್ಟಿನಲ್ಲಿ ಅತ್ಯಾಧುನಿಕವಾದ ತಟ್ಟೆ, ಬಟ್ಟಲು ತೊಳೆಯುವ ಯಂತ್ರವನ್ನು ತರಿಸಲಾಗುವುದು. ಒಟ್ಟಿನಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಲಾಗುವುದು.
 -ಹರಿನಾರಾಯಣದಾಸ ಆಸ್ರಣ್ಣ , ಅರ್ಚಕರು

Advertisement

Udayavani is now on Telegram. Click here to join our channel and stay updated with the latest news.

Next