Advertisement

ಕಟೀಲು ಜಾತ್ರೆ ಮಹೋತ್ಸವ; ಅವಭೃಥದ ಅಗ್ನಿಕೇಳಿ

07:32 AM Apr 23, 2019 | Team Udayavani |

ಕಟೀಲು: ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆಯ ಕೊನೆಯ( ಆರಾಟ) ದಿನ ಅನಾದಿಕಾಲದಿಂದಲೂ ನಡೆದು ಬಂದ ಪದ್ಧತಿಯಂತೆ ಭಕ್ತಿಯ ಸಂಕೇತವಾದ ಸೂಟೆದಾರ ರವಿವಾರ ರಾತ್ರಿ ನಡೆಯಿತು.

Advertisement

ದೇವರು ಎಕ್ಕಾರು ತನಕ ಕಟ್ಟೆ ಪೂಜೆಗೆ ಹೋಗಿ ಹಿಂದೆ ಬರುವ ಸಂದರ್ಭದಲ್ಲಿ ಶಿಬರೂರಿನಿಂದ ಕೊಡಮಣಿತ್ತಾಯ ದೈವ ಹಾಗೂ ದೇವಿ ಭೇಟಿಯಾದ ಬಳಿಕ ರಥಾರೋಹಣ ನಡೆದ ಬಳಿಕ ನೇರವಾಗಿ ಜಲಕದಕಟ್ಟೆಗೆ ಜಲಕಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಜಲಕವಾದ ಬಳಿಕ ದೇವಸ್ಥಾನಕ್ಕೆ ಸಂಬಂಧಪಟ್ಟ ಅತ್ತೂರು, ಕೊಡೆತ್ತೂರು ಗ್ರಾಮದವರು ಈ ಸೂಟೆದಾರ ಅವಭೃಥದ ಅಗ್ನಿಕೇಳಿಯಲ್ಲಿ ಭಾಗವಹಿಸುತ್ತಾರೆ.

ಸೂಟೆದಾರದಲ್ಲಿ ಪಾಲ್ಗೊಳ್ಳುವವರು ವ್ರತಧಾರಿಗಳಾಗಿರಬೇಕು. ಧ್ವಜಾರೋಹಣದ ದಿನದಿಂದ ಸೂಟೆದಾರದ ತನಕ ಕೇವಲ ಒಂದು ಹೊತ್ತು ಊಟ ಮಾಡಬೇಕು, ಮೀನು, ಮಾಂಸ, ಮಧ್ಯಪಾನ ಸೇವನೆ ಮಾಡುವಂತಿಲ್ಲ. ಇದು ಹಿರಿಯರಿಂದ ನಡೆದು ಬಂದ ಕಟ್ಟುಪಾಡು. ರಾತ್ರಿ ಜಲಕಕ್ಕೆ ಹೋದ ದೇವರು ಸ್ನಾನ ಮಾಡುವ ಕೆರೆಯಲ್ಲಿ ಸೂಟೆದಾರದಲ್ಲಿ ಭಾಗವಹಿಸುವ ಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲಿ ಬರುತ್ತಾರೆ. ಜಲಕದ ಕಟ್ಟೆ ಮೆದಾನದಲ್ಲಿ ರಕ್ತೇಶ್ವರೀ ಸನ್ನಿಧಾನವಿದ್ದು, ಅಲ್ಲಿನ ದೀಪಕ್ಕೆ ಸೂಟೆಯನ್ನು ಹಚ್ಚಿ ಸೂಟೆದಾರ ಆರಂಭವಾಗುತ್ತದೆ. ಅಲ್ಲಿಂದ ಕಟೀಲು ಬೀದಿಗೆ ಬರುವ ತನಕ ಸೂಟೆದಾರ ನಡೆಯುತ್ತದೆ. ಮತ್ತೆ ರಥಬೀದಿಯಲ್ಲಿ ಸುಮಾರು 400ಕ್ಕೂ ಹೆಚ್ಚು ಮಂದಿ ಸೂಟೆದಾರದಲ್ಲಿ ಪಾಲ್ಗೊಳ್ಳುತ್ತಾರೆ. ಸೂಟೆದಾರವಾದ ಬಳಿಕ ದೇವಸ್ಥಾನದಲ್ಲಿ ದೊಡ್ಡ ಹಂಡೆಯಲ್ಲಿ ತೀರ್ಥ ಮಾಡಿ ಇಟ್ಪಿರುತ್ತಾರೆ. ಅದರಲ್ಲಿ ಸ್ನಾನ ಮಾಡುವ ಕ್ರಮ ಇಂದಿಗೂ ನಡೆದು ಬರುತ್ತಿದೆ. ಬೆಂಕಿಯಾಟದಲ್ಲಿ ಭಾಗಿ ಯಾದವರಿಗೆ ಗಾಯವಾದಲ್ಲಿ ಈ ತೀರ್ಥದಲ್ಲಿ ಮಿಂದು ಬಂದರೆ ವಾಸಿಯಾಗುತ್ತಿದೆ ಎಂಬ ನಂಬಿಕೆ ಇದೆ.

ಬಳಿಕ ಅಲ್ಲಿನ ಗ್ರಾಮದ ಭಕ್ತರಿಗೆ, ವ್ರತಧಾರಿಗಳಿಗೆ ಪ್ರಸಾದ ನೀಡಲಾಗುತ್ತಿದೆ. ದೇವರು ಕಟ್ಟೆ ಪೂಜೆ ಆದ ಬಳಿಕ ಅಲ್ಲಿ ಬಲಿಯಾಗಿ ಧ್ವಜಾವರೋಹಣ ನಡೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next