ಲಾಹೋರ್: ಬ್ರಿಟನ್ ನ ರಾಜ ಮನೆತನದ ಪ್ರಿನ್ಸ್ ವಿಲಿಯಮ್ಸ್ ಮತ್ತು ಪತ್ನಿ ಕೇಟ್ ಪಾಕಿಸ್ಥಾನದ ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಸಂಭ್ರಮಿಸಿದರು. ಲಾಹೋರ್ ನ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಬ್ರಿಟನ್ ಪ್ರಿನ್ಸ್ ಮತ್ತು ಪ್ರಿನ್ಸೆಸ್ ಕ್ರಿಕೆಟ್ ಆಡಿದರು.
ಪ್ರಿನ್ಸ್ ವಿಲಿಯಮ್ ಸಿಕ್ಸ್ ಬಾರಿಸಿ ಸಂಭ್ರಮಿಸಿದರೆ, ಪತ್ನಿ ಕೇಟ್ ಆಡಿದ ಆರು ಎಸೆತಗಳಲ್ಲಿ ಎರಡು ಬಾರಿ ಕ್ಯಾಚ್ ನೀಡಿದರು. ಆದರೂ ಸಂಭ್ರಮದಿಂದಲೇ ಆಡಿದ ಕೇಟ್, ತಾನು ಕ್ರಿಕೆಟ್ ಅಭಿಮಾನಿ ಎಂದರು.
ಮಕ್ಕಳೊಂದಿಗೆ ಬೆರೆತ ಕೇಟ್, ತಾನು ಟೆನ್ನಿಸ್ ಮತ್ತು ಈಜುವುದನ್ನು ಇಷ್ಟಪಡುತ್ತೇನೆ ಎಂದರು. ಆದರೆ ಪ್ರಿನ್ಸ್ ವಿಲಿಯಮ್ ತಾನು ಶಾಲಾ ದಿನಗಳಲ್ಲಿ ಯಾವುದೇ ಕ್ರೀಡೆಗಳಲ್ಲಿ ಭಾಗವಹಿಸಿಲ್ಲ ಎಂದು ತಮ್ಮ ಬಾಲ್ಯದ ನೆನಪನ್ನು ಮೆಲುಕು ಹಾಕಿದರು.
ಮಕ್ಕಳ ಬೆಳವಣಿಗೆಯ ಭಾಗವಾದ ಕ್ರೀಡೆಯನ್ನು ಪ್ರೋತ್ಸಾಹಿಸುವ ಬ್ರಿಟಿಷ್ ಕೌನ್ಸಿಲ್ ನ ದೋಸ್ತಿ ಕಾರ್ಯಕ್ರಮದಲ್ಲಿ ಈ ಮಕ್ಕಳು ಭಾಗವಹಿಸುತ್ತಿದ್ದಾರೆ.
ಪಾಕ್ ನ ಕೆಲ ಕ್ರಿಕೆಟ್ ಆಟಗಾರರು, ಮಾಜಿ ಆಟಗಾರ ವಾಕರ್ ಯೂನಸ್ ಈ ರಾಯಲ್ ದಂಪತಿಯೊಂದಿಗೆ ಭಾಗವಹಿಸಿದರು.
150 ಅನಾಥರಿಗೆ ಮನೆ ವಿತರಿಸಿದ ರಾಜ ದಂಪತಿ, ನಂತರ ಬರ್ತ್ ಡೇ ಪಾರ್ಟಿಯೊಂದರಲ್ಲಿ ಭಾಗವಹಿಸಿದರು. ಕುಟುಂಬವೆಂದರೇನು ಎಂಬುದು ನಮಗೀಗ ತಿಳಿಯಿತು ಎಂದು ಕೇಟ್ ತಮ್ಮ ಭಾಷಣದಲ್ಲಿ ಹೇಳಿದರು.