Advertisement

ಕಟಪಾಡಿ: 820 ಚದರ ಅಡಿಗಳಲ್ಲಿ 220 ಗಿಡಗಳ ಮಿಯಾವಾಕಿ ವನ  

10:40 PM Jun 04, 2020 | Sriram |

ಕಟಪಾಡಿ: ದಕ್ಷಿಣ ಕರ್ನಾಟಕದ ಪ್ರಥಮ ಮಿಯಾವಾಕಿ ಅರಣ್ಯವಾಗಿ ಕಟಪಾಡಿ ಪೊಸಾರ್‌ ನಿವಾಸಿ ಕೆ. ಮಹೇಶ್‌ ಶೆಣೈ 820 ಚದರ ಅಡಿಯಲ್ಲಿ 220 ವಿವಿಧ ತಳಿಯ ಸ್ಥಳೀಯ ಮರದ ಗಿಡಗಳನ್ನು ಬೆಳೆಸಿ ಮಾದರಿಯಾಗಿದ್ದಾರೆ.

Advertisement

ಪರಿಸರ ಮಾಲಿನ್ಯ, ಅಂತರ್‌ಜಲವೃದ್ಧಿ, ಹೆಚ್ಚುತ್ತಿರುವ ಭೂಮಿಯ ತಾಪಮಾನದ ನಿಯಂತ್ರಣ, ಜೀವ ವೈವಿಧ್ಯಗಳಿಗೆ ಆಸರೆಯಾಗಿ ಈ ಮಿಯಾವಾಕಿ ಕಾಡು ತನ್ನದೇ ಕೊಡುಗೆ ನೀಡುತ್ತಿದೆ.

ಕಟಪಾಡಿ ಮಹೇಶ್‌ ಶೆಣೈ ಪೊಸಾರಿನ ಗುರುಕೃಪಾದಲ್ಲಿ ಒಂದು ಮೀಟರ್‌ ಅಂತರವನ್ನು ಕಾಪಾಡಿಕೊಂಡು ಸಾಗುವಾನಿ, ಬಾದಾಮಿ, ಹೊಂಗೆ ಸಹಿತ 11 ವಿವಿಧ ವರ್ಗದ 220 ಗಿಡಗಳನ್ನು ನೆಟ್ಟಿದ್ದಾರೆ. ಗಿಡಗಳು ವೇಗವಾಗಿ ಮತ್ತು ದಟ್ಟವಾಗಿ ಬೆಳೆದು ನಿಲ್ಲುವುದೇ ಮಿಯಾವಾಕಿ ಕಾಡಿನ ಹಿರಿಮೆ. ಹಿರಿಯರ ನೆನಪಿಗಾಗಿ ಗಣಪತಿ ವನ ಎಂದು ಮಹೇಶ್‌ ಶೆಣೈ ಹೆಸರಿಟ್ಟಿದ್ದಾರೆ.

ಏನಿದು ಮಿಯಾವಾಕಿ ಕಾಡು?
ಮಿಯಾವಾಕಿ ವಿಧಾನವು ಪಂಜಾಬ್‌, ಮುಂಬಯಿ, ಬೆಂಗಳೂರು ಮುಂತಾದ ಕಡೆಗಳಲ್ಲಿ ಅತ್ಯಂತ ಜನಪ್ರಿಯ. ಈ ವಿಧಾನದ ಮೂಲಕ ಕಡಿಮೆ ಸ್ಥಳದಲ್ಲಿ ಖಾಸಗಿ ಅರಣ್ಯ ನಿರ್ಮಿಸಬಹುದಾಗಿದೆ. ಕೇವಲ ಎರಡು, ಮೂರು ಸೆಂಟ್ಸ್‌ ಜಾಗದಲ್ಲಿ 220ರಿಂದ 400 ಗಿಡಗಳನ್ನು ಬೆಳೆಯಬಹುದು. ಇದರಲ್ಲಿ ಎರಡು ಹಂತಗಳಿದ್ದು ಮೊದಲನೇ ಹಂತದಲ್ಲಿ ಗಿಡ ನೆಡಲು ಬೇಕಾಗುವಂತಹ ಮಣ್ಣಿನ ಪದರವನ್ನು ರಚಿಸುವುದು ಮತ್ತು ಎರಡನೇ ಹಂತದಲ್ಲಿ ಸಸಿಗಳನ್ನು ನೆಡುವುದು ಎಂದು ಮಹೇಶ್‌ ಶೆಣೈ ಮಾಹಿತಿ ನೀಡಿದ್ದಾರೆ.

ಅರಣ್ಯದ ವಿಶೇಷತೆ
ಇದು ದಕ್ಷಿಣ ಕರ್ನಾಟಕದ ಪ್ರಥಮ ಮಿಯಾವಾಕಿ ಅರಣ್ಯವಾಗಿದ್ದು, 820 ಚದರ ಅಡಿಯಲ್ಲಿ 220 ಸ್ಥಳೀಯ ಸಸಿಗಳು ನೆಟ್ಟಿದ್ದೇನೆ. ಎಲ್ಲ ತರಹದ ಗಿಡಗಳು ಒಂದೇ ಸಮನೆ ಆಕಾಶಕ್ಕೆ ಮುಖ ಮಾಡಿ ಬೆಳೆದು ನಿಲ್ಲುವುದೇ ಈ ಮಿಯಾವಾಕಿ ಅರಣ್ಯದ ವಿಶೇಷತೆ ಎಂದು ಮಹೇಶ್‌ ಹೇಳುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next