Advertisement

ಕುಸಿದ ಬಾವಿಗೆ ಕಾಯಕಲ್ಪ ಕಲ್ಪಿಸಿದ ಕಟಪಾಡಿ ಗ್ರಾಮ ಪಂಚಾಯತ್‌

12:29 AM Oct 17, 2019 | Team Udayavani |

ಕಟಪಾಡಿ: ಅಚ್ಚಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕುಸಿದು ಅಪಾಯಕಾರಿ ಸ್ಥಿತಿ ಯಲ್ಲಿದ್ದ ಕುಸಿದ ಬಾವಿಗೆ ಕಟಪಾಡಿ ಗ್ರಾ.ಪಂ. ಹೆಚ್ಚಿನ ಮುತುವರ್ಜಿಯಿಂದ ಕಾಯಕಲ್ಪ ಕಲ್ಪಿಸಲಾಗಿದೆ.

Advertisement

ಶಾಲಾವರಣದೊಳಗೆ ಶಾಲಾ ಕೊಠಡಿಗಳ ಪಕ್ಕದಲ್ಲಿಯೇ ಇದ್ದ ಈ ಬಾವಿ ಮಳೆಯ ತೀವ್ರತೆಗೆ ಕುಸಿತಕ್ಕೊಳಗಾಗಿ ಅಪಾಯಕಾರಿ ಸ್ಥಿತಿಯಲ್ಲಿತ್ತು. ಬಾವಿಯ ಕಟ್ಟೆಯೂ ಕುಸಿಯುತ್ತಿತ್ತು. ನಿತ್ಯ ಬಳಸುವ ಈ ಬಾವಿಯಿಂದಾಗಿ ಶಾಲಾ ಮಕ್ಕಳಿಗೆ ಅಸುರಕ್ಷತೆ ಕಾಡುತ್ತಿತ್ತು. ಅಪಾಯದ ಸೂಚನೆಯನ್ನು ನೀಡುತ್ತಿರುವ ಬಗ್ಗೆ ಉದಯವಾಣಿಯು ವಿಸ್ತೃತವಾದ ವರದಿಯನ್ನು ಪ್ರಕಟಿಸಿತ್ತು.

ಕಟಪಾಡಿ ಗ್ರಾ.ಪಂ. ವ್ಯಾಪ್ತಿಯ ಮೂಡಬೆಟ್ಟು ಗ್ರಾಮದಲ್ಲಿರುವ ಏಕೈಕ ಸರಕಾರಿ ಕನ್ನಡ ಮಾಧ್ಯಮ ಶಾಲೆ ಇದಾಗಿದೆ. ಸರಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಮುಂದಡಿ ಇರಿಸಿದ ಕಟಪಾಡಿ ಗ್ರಾಮ ಪಂಚಾಯತ್‌ ವಾರ್ಡು ಸದಸ್ಯರಾದ ರಾಜೇಶ್‌ ಪೂಜಾರಿ ಹೆಚ್ಚಿನ ಮುತುವರ್ಜಿ ವಹಿಸಿದ್ದು, ಸುಭಾಶ್‌ ಬಲ್ಲಾಳ್‌, ಪ್ರತಿಭಾ ಸುವರ್ಣ ಅವರು ಹೆಚ್ಚಿನ ಕಾಳಜಿ ವಹಿಸಿ ವಿದ್ಯಾರ್ಥಿಗಳಿಗೆ ಮೂಲಸೌಕರ್ಯದ ಜತೆಗೆ ಸುರಕ್ಷತೆಯನ್ನೂ ಒದಗಿಸಬೇಕೆಂಬ ಆದ್ಯತೆಯ ಮೇರೆಗೆ ಪಂಚಾಯತ್‌ ಅನುದಾನವನ್ನು ಬಳಸಿಕೊಂಡು ದುಃಸ್ಥಿತಿಯಲ್ಲಿದ್ದ ಈ ಬಾವಿಯನ್ನು ಸುಸ್ಥಿತಿಗೆ ತಂದಿರುತ್ತಾರೆ.

ಕಳೆದ 2018ರ ಸಾಲಿನ ಮಳೆಗಾಲದಲ್ಲಿ ಈ ಶಾಲೆಯ ಆವರಣಗೋಡೆಯು ನೆರೆಯ ಹಾವಳಿಯಿಂದ ಕುಸಿದು ಬಿದ್ದು ಸಾಕಷ್ಟು ಹಾನಿ ಸಂಭವಿಸಿತ್ತು. ಇದರೊಂದಿಗೆ ಶೌಚಾಲಯದ ಭಾಗ ಮತ್ತು ಬಾವಿಯ ಕಟ್ಟೆ, ಒಳಗೂ ಕುಸಿತ ಕಂಡು ಬಂದಿತ್ತು. ಜಿ.ಪಂ. ಸದಸ್ಯರ ಅನುದಾನದಿಂದ ಈ ಶಾಲೆಯ ಆವರಣ ಗೋಡೆಯು ಮತ್ತೆ ಎದ್ದು ನಿಂತಿದೆ. ಆದರೆ ಬಾವಿ ದುರಸ್ತಿ ಕಂಡಿರಲಿಲ್ಲ.

ಮುಖ್ಯೋಪಾಧ್ಯಾಯಿನಿ ಶಾಲಾ ಭೌತಿಕ ಆವಶ್ಯಕತೆಗಳನ್ನು ಪೂರೈಸಬೇಕೆಂಬ ಮನವಿಯನ್ನು ಕಟಪಾಡಿ ಗ್ರಾಮ ಪಂಚಾಯತ್‌ಗೆ, ಕಾಪು ಕ್ಷೇತ್ರದ ಶಾಸಕರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರವನ್ನು ಬರೆದು ನವೀಕರಣ ಅಥವಾ ದುರಸ್ತಿ ಕಾರ್ಯದ ಬಗ್ಗೆ ಸಹಕರಿಸುವಂತೆ ಕೋರಿಕೊಂಡಿದ್ದರು.

Advertisement

1.25 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ
ಇದೀಗ 14ನೇ ಹಣಕಾಸು ಯೋಜನೆಯಡಿ ಸುಮಾರು 1.25 ಲಕ್ಷ ರೂ. ಅನುದಾನ ಬಳಸಿಕೊಂಡು ಕುಡಿಯುವ ನೀರಿನ ಬಾವಿಯ ಒಳಗಡೆ ಕುಸಿದಿರುವ ಕಲ್ಲುಗಳ ಮರು ಜೋಡಣೆ ಹಾಗೂ ಬಾವಿಯ ಕಟ್ಟೆಯನ್ನು ಸುಸಜ್ಜಿತಗೊಳಿಸುವ ಮೂಲಕ ವಿದ್ಯಾರ್ಥಿ ವೃಂದ, ಶಾಲಾ ಶಿಕ್ಷಕ ವೃಂದ, ಹೆತ್ತವರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿದೆ.

ಮನವಿಗೆ ಸ್ಪಂದನೆ
ಶಾಲಾ ಬಾವಿಯ ದುರಸ್ತಿಯ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಗ್ರಾ.ಪಂ., ಕ್ಷೇತ್ರದ ಶಾಸಕರಲ್ಲಿ ಮನವಿಯನ್ನು ಮಾಡಿಕೊಳ್ಳಲಾಗಿತ್ತು. ಇದೀಗ ಕಟಪಾಡಿ ಗ್ರಾ.ಪಂ. ಸ್ಪಂದಿಸಿ ಬಾವಿಯನ್ನು ಸುಸಜ್ಜಿತಗೊಳಿಸಿದ್ದಾರೆ.
-ಶಕುಂತಳಾದೇವಿ, ಮುಖ್ಯೋಪಾಧ್ಯಾಯಿನಿ, ಅಚ್ಚಡ ಸ.ಹಿ.ಪ್ರಾ. ಶಾಲೆ

ಆತಂಕ ನಿವಾರಣೆ
ಶಾಲಾ ಮಕ್ಕಳ ಸುರಕ್ಷೆಯ ಹಿತದೃಷ್ಟಿ ಯಿಂದ ಕುಸಿದು ಅಪಾಯದ ಸ್ಥಿತಿಯಲ್ಲಿದ್ದ ಬಾವಿಯನ್ನು ಪಂ. ವಾರ್ಡು ಸದಸ್ಯರ ಸಹಕಾರದಿಂದ ದುರಸ್ತಿಗೊಳಿಸಲಾಗಿದೆ. 14ನೇ ಹಣಕಾಸು ಯೋಜನೆಯಡಿ 1.25 ಲಕ್ಷ ರೂ. ಅನುದಾನ ಬಳಸಿಕೊಂಡು ಬಾವಿಯನ್ನು ದುರಸ್ತಿಗೊಳಿಸಿ ಅಪಾಯದ ಆತಂಕವನ್ನು ನಿವಾರಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಶಾಲೆಯ ರಜೆಯ ಸಂದರ್ಭ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ.
– ರಾಜೇಶ್‌ ಪೂಜಾರಿ,
ಸದಸ್ಯ, ಕಟಪಾಡಿ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next