Advertisement

2011ನೇ ಸಾಲಿನ ಕೆಎಎಸ್‌ ನೇಮಕ: ನೇಮಕಾತಿ ಆದೇಶ ನೀಡಲು ಕೆಎಟಿ ಆದೇಶ

10:11 PM Apr 21, 2022 | Team Udayavani |

ಬೆಂಗಳೂರು: ಕರ್ನಾಟಕ ನಾಗರಿಕ ಸೇವೆಗಳ (2011ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರ್‌ಗಳ ಆಯ್ಕೆ ಮತ್ತು ನೇಮಕಾತಿ ಸಿಂಧುಗೊಳಿಸುವಿಕೆ) ಕಾಯ್ದೆ-2022 ಅನುಸಾರ 2011ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಯ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬಹುದು. ಆದರೆ, ಅದು ನ್ಯಾಯಮಂಡಳಿಯ ಅಂತಿಮ ನಿರ್ಧಾರಕ್ಕೆ ಒಳಪಡಲಿದೆ ಎಂದು ಕರ್ನಾಟಕ ಆಡಳಿತ ನ್ಯಾಯಮಂಡಳಿ ಹೇಳಿದೆ.

Advertisement

ಕಾಯ್ದೆಗೆ ತಡೆ ನೀಡಬೇಕು ಮತ್ತು ನೇಮಕಾತಿ ಆದೇಶ ನೀಡದಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಂಗ ಸದಸ್ಯ ನಾರಾಯಣ ಹಾಗೂ ಆಡಳಿತಾತ್ಮಕ ಸದಸ್ಯ ಎನ್‌. ಶಿವಶೈಲಂ ಅವರಿದ್ದ ಪೀಠ ಗುರುವಾರ ಈ ಆದೇಶ ನೀಡಿತು.

ಅರ್ಜಿಯ ವಿಚಾರಣೆ ವೇಳೆ ಸರಕಾರದ ಪರ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಅರುಣ್‌ ಶ್ಯಾಮ್‌, ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ವಿಭಾಗೀಯ ನ್ಯಾಯ ಪೀಠ ವಜಾಗೊಳಿಸಿದೆ ಎಂದು ಕೆಎಟಿ ಗಮನಕ್ಕೆ ತಂದರು.

ಅದನ್ನು ಪರಿಗಣಿಸಿದ ಕೆಎಟಿ ಪೀಠ, ಕಾಯ್ದೆಯ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ಕಾಯ್ದೆ ಜಾರಿಗೆ ತಡೆ ನೀಡಬೇಕೆಂಬ ಅರ್ಜಿದಾರರ ಮಧ್ಯಾಂತರ ಮನವಿಯನ್ನು ನಿರಾಕರಿಸಿತು. ಅಲ್ಲದೆ ಕಾಯ್ದೆಯ ಅನುಸಾರ ಸರಕಾರ ನೇಮಕಾತಿ ಆದೇಶ ನೀಡಬಹುದು. ಆದರೆ, ನೇಮಕಾತಿ ಆದೇಶ ಈ ಅರ್ಜಿ ಸಂಬಂಧ ಕೆಎಟಿ ಕೈಗೊಳ್ಳುವ ಅಂತಿಮ ನಿರ್ಧಾರಕ್ಕೆ ಒಳಪಟ್ಟಿರಲಿದೆ ಎಂದು ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next