Advertisement

Kasturi Rangan Report: ಬಾಧಿತ ಹಳ್ಳಿಗಳಿಗೆ ಪ್ಯಾಕೇಜ್‌ಗೆ ಕೇಂದ್ರಕ್ಕೆ ಮನವಿ

01:32 AM Sep 20, 2024 | Team Udayavani |

ಬೆಂಗಳೂರು: ಕಸ್ತೂರಿ ರಂಗನ್‌ ವರದಿ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಬಾಧಿತ ಜಿಲ್ಲೆಗಳ ಜನಪ್ರತಿನಿಧಿಗಳ ಜತೆಗೆ ಸರಕಾರ ಗುರುವಾರ ಮಹತ್ವದ ಸಭೆ ನಡೆಸಿತು.

Advertisement

16,114 ಚದರ ಕಿ.ಮೀ. ಪರಿಸರ ಸೂಕ್ಷ್ಮ ಅರಣ್ಯ ಪ್ರದೇಶವನ್ನು ಈಗಾಗಲೇ ಸಂರಕ್ಷಿಸಲಾಗಿದ್ದು, ಈ ಮಿತಿಗೆ ಒಳಪಟ್ಟು ಕಸ್ತೂರಿ ರಂಗನ್‌ ವರದಿ ಸಮ್ಮತಿಸಬಹುದು.

ಅಲ್ಲದೆ ಸರಕಾರ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂಬ ಸಲಹೆಯನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ನೀಡಿದ್ದಾರೆ.

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕುರಿತಂತೆ ಕೇಂದ್ರ ಸರಕಾರ ಆ.2ರಂದು 6ನೇ ಅಧಿಸೂಚನೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಸರಕಾರ ಈ ಮಾಸಾಂತ್ಯದೊಳಗಾಗಿ (ಸೆ. 27) ತನ್ನ ನಿಲುವನ್ನು ಕೇಂದ್ರಕ್ಕೆ ಸಲ್ಲಿಸಬೇಕಿದೆ. ಈ ಹಿನ್ನೆಲೆಯಲ್ಲಿ 11 ಜಿಲ್ಲೆಗಳ ಜನಪ್ರತಿನಿಧಿಗಳ ಜತೆಗೆ ಸರಕಾರ ಸಭೆ ನಡೆಸಿದೆ.

ವಿಶೇಷ ಪ್ಯಾಕೇಜ್‌
ಸಭೆಯ ಬಳಿಕ ಅರಣ್ಯ ಸಚಿವ ಈಶ್ವರ ಖಂಡ್ರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಇರುವ 16,114 ಚ.ಕಿ.ಮೀ. ಪ್ರದೇಶಕ್ಕೆ ಅಂಗೀಕಾರ ನೀಡಿದರೂ ಈ ಪ್ರದೇಶದಲ್ಲಿರುವ 1,576 ಗ್ರಾಮಗಳ ಜನರ ಜೀವನೋಪಾಯಕ್ಕೆ ಅನಾನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂಬ ಒತ್ತಾಯ ಮಾಡಬಹುದೆಂದು ನಾನು ಸಲಹೆ ನೀಡಿದ್ದೇನೆ. ಆದಾಗಿಯೂ ಸಂಪುಟ ಉಪಸಮಿತಿ ಸಭೆಯಲ್ಲಿ ಚರ್ಚಿಸಿ, ಸಿಎಂ ಸಿದ್ದರಾಮಯ್ಯರ ಅವಗಾಹನೆಗೆ ತಂದು ಒಂದು ಮಧ್ಯಮ ಮಾರ್ಗದಲ್ಲಿ ವಿವಾದ ಬಗೆಹರಿಸಿಕೊಳ್ಳುವ ಪ್ರಯತ್ನ ನಡೆಸೋಣ ಎಂದು ಆಶಯ ವ್ಯಕ್ತಪಡಿಸಿದರು.

Advertisement

ಈಗಾಗಲೇ ರಾಜ್ಯದಲ್ಲಿ 16,114 ಚ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ ಇದ್ದು, ಇನ್ನು ಹೆಚ್ಚಳ ಮಾಡಿದರೆ ಅರಣ್ಯದಂಚಿನ ಜನರ ಬದುಕೇ ದುಸ್ತರವಾಗುತ್ತದೆ. ಹೀಗಾಗಿ ಬಫ‌ರ್‌ ವಲಯವನ್ನು ಶೂನ್ಯಕ್ಕೆ ತರಬೇಕು ಎಂದು ಹಲವು ಜನಪ್ರತಿನಿಧಿಗಳು ಸಲಹೆ ನೀಡಿದ್ದಾರೆ. ಹಾಲಿ ಇರುವ 16,114 ಚ.ಕಿ.ಮೀ. ಮಿತಿಗೆ ನಾವು ಸಮ್ಮತಿಸಿದರೆ ಶೂನ್ಯ ಬಫ‌ರ್‌ ಆಗುತ್ತದೆ. ಆದರೆ ಕಸ್ತೂರಿ ರಂಗನ್‌ ಸಮಿತಿ ವರದಿಯಲ್ಲಿ ರಾಜ್ಯದಲ್ಲಿ 20,668 ಚದರ ಕಿ.ಮೀ. ಪರಿಸರ ಸೂಕ್ಷ್ಮ ವಲಯ ಗುರುತಿಸಲಾಗಿದೆ. ಈ ಬಗ್ಗೆ ಭೌತಿಕ ಸರ್ವೇ ನಡೆಸಿದರೆ ಈ ಪ್ರದೇಶ ಇನ್ನೂ ಹೆಚ್ಚಳವಾಗಲಿದೆ ಎಂಬ ಅಭಿಪ್ರಾಯವನ್ನೂ ಜನಪ್ರತಿನಿಧಿಗಳು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಜನರನ್ನು ಒಕ್ಕಲೆಬ್ಬಿಸುವುದು ಬೇಡ: ಸಭೆ ಅಭಿಪ್ರಾಯ
ತಲೆಮಾರುಗಳಿಂದ ಅರಣ್ಯ ಪ್ರದೇಶದಲ್ಲೇ ಜೀವಿಸುತ್ತಿರುವವರನ್ನು ಒಕ್ಕಲೆಬ್ಬಿಸುವುದು ಸೂಕ್ತವಲ್ಲ. ಅವರಿಗೆ ಬೇರೆ ಕಡೆ ಪುನರ್ವಸತಿ ಕಲ್ಪಿಸಿದರೂ ಅವರು ಅಲ್ಲಿಗೆ ಹೋಗುವುದಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಹೀಗಾಗಿ ಮಂಗಳವಾರದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಚಿಂತನ ಮಂಥನ ನಡೆಸಲಾಗುವುದು. ಮರು ಸರ್ವೇ ನಡೆಸುವಂತೆಯೂ ಅಭಿಪ್ರಾಯ ವ್ಯಕ್ತವಾಗಿದ್ದು, ಸಮಯ ಬಂದರೆ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಎಂದು ಸಚಿವರು ತಿಳಿಸಿದರು.

ಕಸ್ತೂರಿ ರಂಗನ್‌ ವರದಿ ಜಾರಿಗೂ ಮುನ್ನ ಮರು ಸರ್ವೇ ನಡೆಸಬೇಕು. ವರದಿ ಜಾರಿಯಾದರೆ ಪಟ್ಟಾ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸುವುದಕ್ಕೆ ಕಷ್ಟವಾಗುತ್ತದೆ. ಯಾವುದೇ ಕಾರಣಕ್ಕೂ ವರದಿಯನ್ನು ಈಗಿನ ಸ್ವರೂಪದಲ್ಲಿ ಒಪ್ಪಬಾರದು. ಈ ಸಂಬಂಧ ಕೇಂದ್ರ ಸರಕಾರಕ್ಕೆ ನಿಯೋಗ ಕರೆದೊಯ್ಯಬೇಕು. ಸುಪ್ರೀಂ ಕೋರ್ಟ್‌ನಲ್ಲಿ ಈ ಬಗ್ಗೆ ರಾಜ್ಯದ ಪರ ವಾದ ಮಂಡಿಸುವುದಕ್ಕೆ ವಕೀಲರನ್ನು ನಿಯೋಜಿಸಬೇಕು.
– ವಿ. ಸುನಿಲ್‌ ಕುಮಾರ್‌, ಮಾಜಿ ಸಚಿವ

ಕಾಡಿನ ಜತೆಗೆ ಈ ಭಾಗದಲ್ಲಿ ಮಾನವ ವಸತಿಯೂ ಇದೆ. ಕಾಡಂಚಿನ ಹಾಗೂ ಕಾಡಿನಲ್ಲಿ ವಾಸವಿರುವ ಜನರಿಂದಲೇ ಅರಣ್ಯ ಭೂಮಿ ಉಳಿದಿದೆ. ಈ ವರದಿ ಜಾರಿಯಾದರೆ ಜನಜೀವನ ದುಸ್ತರವಾಗುತ್ತದೆ.
– ಆರಗ ಜ್ಞಾನೇಂದ್ರ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next