Advertisement
ಆದರೂ ಅವರ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆ ಎಂಬ ಪ್ರಶ್ನೆ ಎದುರಾಗಬಹುದು. ಅವರಿಗೀಗ ವಯಸ್ಸು 85. ಈ ವಯಸ್ಸಲ್ಲಿ ಹೊಸ ಸಿನಿಮಾವೊಂದನ್ನು ನಿರ್ದೇಶಿಸಲು ಅಣಿಯಾಗಿದ್ದಾರೆ. ಅದರಲ್ಲೂ 22 ವರ್ಷಗಳ ಬಳಿಕ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ ಅನ್ನೋದೇ ಈ ಹೊತ್ತಿನ ಸುದ್ದಿ. ಭಗವಾನ್ ಅವರ ಹಲವು ಪ್ರಥಮಗಳು ಇಲ್ಲಿವೆ. ಆ ಕುರಿತು ಅವರದೇ ಮಾತುಗಳಲ್ಲಿ ಒಂದಷ್ಟು ಹೇಳಿಕೊಂಡಿದ್ದಾರೆ.
Related Articles
Advertisement
ಎಲ್ಲರಿಗೂ ಇನ್ನೊಂದು ಪ್ರಶ್ನೆ ಮೂಡಬಹುದು. ಆಗಿನ ಕಾಲವೇ ಬೇರೆ, ಈಗಿನ ಕಾಲವೇ ಬೇರೆ, ಈಗಿನ ಟ್ರೆಂಡ್‌ಗೆ ತಕ್ಕಂತಹ ಕಥೆ, ಮೇಕಿಂಗ್ ಇರುತ್ತಾ, ಭಗವಾನ್ ಅವರಿಂದ ಅದು ಸಾಧ್ಯನಾ ಅಂತ. ನಾನು ನಟನೆ ಶಾಲೆಯ ಪ್ರಾಂಶುಪಾಲನಾಗಿದ್ದಾಗಲೇ, ಅಪ್‌ಡೇಟ್ ಆಗಿದ್ದೆ. ಅಷ್ಟಕ್ಕೂ ಆಗಿನ ಅನುಭವ, ಈಗಿನ ಪರಿಶ್ರಮ ಸೇರಿಸಿಕೊಂಡು “ಆಡುವ ಗೊಂಬೆ’ ಚಿತ್ರವನ್ನು ಕಲರ್‌ಫುಲ್ ಆಗಿ ಕಟ್ಟಿಕೊಡುವ ಪ್ರಯತ್ನ ಮಾಡ್ತೀನಿ. ಯಾರಿಗೂ ಅನುಮಾನ ಬೇಡ. ಚಿತ್ರರಂಗ ಬದಲಾಗಿದೆ, ಅದಕ್ಕೆ ತಕ್ಕಂತೆ ತಂತ್ರಜ್ಞಾನವೂ ಮುಂದೆ ಬಂದಿದೆ.
ನನ್ನ ಪ್ರಕಾರ, ಸಿನಿಮಾದ ಅಪ್ರೋಚ್ ಒಂದೇ ಆಗಿದ್ದರೂ, ಕಂಟೆಂಟ್ ವಿಭಿನ್ನವಾಗಿರಬೇಕು. ಆಗ ಸಾಂಸಾರಿಕ ಕಥಾ ಚಿತ್ರಗಳೇ ಬರುತ್ತಿದ್ದವು. ಆಗ ಬೇರೆ ಮಾಧ್ಯಮ ಇರಲಿಲ್ಲ. ಜನರಿಗೆ ಚಿತ್ರರಂಗ ಆಕರ್ಷಣೆಯಾಗಿತ್ತು. ಆದರೆ, ಈಗ ಬೇಕಾದಷ್ಟು ಬದಲಾವಣೆಯಾಗಿದೆ. ಕೈಯಲ್ಲೇ ಜಗತ್ತನ್ನು ನೋಡಬಹುದಾದ ತಂತ್ರಜ್ಞಾನವಿದೆ. ಆ ವೇಗಕ್ಕೆ ನಾನು ಹೊಂದಿಕೊಳ್ಳಬೇಕು, ಹೊಂದಿಕೊಂಡಿದ್ದೇನೆ ಕೂಡ. ಈಗಿನ ಟ್ರೆಂಡ್ ಬಗ್ಗೆ ಗೊತ್ತು. ಕಥೆಯಲ್ಲಿ ಮಾರ್ಡನ್ ಅಂಶವಿಟ್ಟು, ಮನರಂಜನೆಗೆ ಏನೆಲ್ಲಾ ಬೇಕೋ ಅದನ್ನೆಲ್ಲಾ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇನೆ.
ಎಲ್ಲಾ ಪ್ರಯತ್ನ ನನ್ನ ಕಡೆಯಿಂದ ಆಗುತ್ತೆ. ಆದರೆ, ಅಭಿಮಾನಿ ದೇವರುಗಳು ಕೊಡುವ ಫಲಿತಾಂಶವನ್ನು ಒಪ್ಪಲೇಬೇಕು. ಈಗಿನ ಟ್ರೆಂಡ್‌ಗೆ ತಕ್ಕ ಸಿನ್ಮಾ ಮಾಡ್ತೀನಾ?: ಮೊದಲೇ ಹೇಳಿದಂತೆ, ಒಂದು ಸಿನಿಮಾದ ವಿಧಾನ ಒಂದೇ ರೀತಿ ಇರುತ್ತೆ. ಆದರೆ, ಆ ವಿಧಾನದಲ್ಲಿ ಈಗಿನ ಕಾಲದ ಬದಲಾವಣೆ ಇರಬೇಕಷ್ಟೆ. ನಾನು ಮೊದಲಿನಿಂದಲೂ ತುಂಬ ಶಿಸ್ತುಬದ್ಧನಾಗಿ ಕೆಲಸ ಮಾಡಿಕೊಂಡು ಬಂದವನು. ಈಗಲೂ ಅದೇ ಬದ್ಧತೆಯೊಂದಿಗೆ ಕೆಲಸ ಮಾಡುವ ಆತ್ಮವಿಶ್ವಾಸವಿದೆ. ಅಷ್ಟೇ ಎನರ್ಜಿಯೂ ನನ್ನಲ್ಲುಂಟು.
ಆಗ ಗೆಳೆಯ ದೊರೆ ನನ್ನೊಂದಿಗಿದ್ದರು. ಅವರಿಲ್ಲ ಎಂಬ ನೋವು ನನ್ನನ್ನು ಸದಾ ಕಾಡುವುದುಂಟು. 50 ವರ್ಷಗಳ ಕಾಲ ನಮ್ಮಿಬ್ಬರ ಬಂಧ ಅನುಬಂಧದ ಬಗ್ಗೆ ಏನು ಹೇಳಿದರೂ ಸಾಲದು. ರಾಜಕುಮಾರ್, ದೊರೆ ಮತ್ತು ನಾನು ಒಟ್ಟಿಗೆ ಸೇರಿ ಮಾಡಿದ ಚಿತ್ರಗಳು ಇಂದಿಗೂ ದಾಖಲೆಯಾಗಿ ಉಳಿದಿವೆ. ಈಗ ನನ್ನೊಂದಿಗೆ ಆ ಇಬ್ಬರೂ ಇಲ್ಲ. ಆದರೆ, ಅವರ ವ್ಯಕ್ತಿತ್ವ, ಆದರ್ಶಗಳಿವೆ. ಇಲ್ಲಿ ಇನ್ನೊಂದು ವಿಷಯ ಹೇಳಲೇಬೇಕು. ನಾನು ಇಷ್ಟು ವರ್ಷಗಳ ಬಳಿಕ “ಆಡುವ ಗೊಂಬೆ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದೇನೆ.
ಹಳಬ ನಿರ್ದೇಶಕ, ಈಗಿನ ಟ್ರೆಂಡ್‌ಗೆ ಸಿನಿಮಾವನ್ನು ಕಟ್ಟಿಕೊಡಲು ಸಾಧ್ಯವೇ ಎಂಬ ಪ್ರಶ್ನೆ ನನ್ನನ್ನು ಯಾವತ್ತೂ ಕಾಡಿಲ್ಲ. ಯಾಕೆಂದರೆ, ನಾನು ತುಂಬಾ ವಿಶ್ವಾಸದಲ್ಲಿದ್ದೇನೆ. ಒಂದು ಚಿತ್ರವನ್ನು ಜನರಿಗೆ ಇಷ್ಟವಾಗುವಂತೆ ಹೇಗೆ ಕೊಡಬೇಕೆಂಬ ಸೆನ್ಸ್ ಇದೆ. ನನ್ನ ಚಿತ್ರದ ಬಗ್ಗೆ ಹೇಳ್ಳೋದಾದರೆ, ಇಲ್ಲೊಂದು ವಿಶೇಷವಿದೆ. ಅದು “ಕಸ್ತೂರಿ ನಿವಾಸ’ ಚಿತ್ರದ “ಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು …’ ಎಂಬ ಹಾಡು. ಆ ಹಾಡಿನ ಒಂದು ಸಾಲನ್ನು ಈ ಚಿತ್ರದಲ್ಲಿ ಬಳಸುತ್ತಿದ್ದೇನೆ. ಹಾಗಂತ, ಅದೇ ಫ್ಲೇವರ್ ಇರಲ್ಲ.
ಆದರೆ, “ಕಸ್ತೂರಿ ನಿವಾಸ’ ಚಿತ್ರದ ಥೀಮ್ ಇಲ್ಲೂ ಇದೆ. ಬಯಸೋದು ಒಂದು, ದೈವ ಬಗೆಯೋದು ಇನ್ನೊಂದು ಎಂಬ ಅಂಶ ಈ ಚಿತ್ರದ ಹೈಲೈಟ್. “ಆಡಿಸೋನು ಮೇಲೆ ಕುಂತೋನೆ …’ ಎಂಬ ಅಡಿಬರಹ ಎಲ್ಲವನ್ನೂ ಹೇಳುತ್ತೆ. ಚಿತ್ರದ ನಾಯಕ ಒಂದು ಕೆಲಸಕ್ಕೆ ಮುಂದಾಗುತ್ತಾನೆ. ಅದು ಎಷ್ಟೇ ಪ್ರಯತ್ನ ಪಟ್ಟರೂ ಕೈ ಗೂಡಲ್ಲ. ಆಮೇಲೆ ಏನಾಗುತ್ತೆ ಅನ್ನೋದೇ ಕಥೆ. ಈಗಿನ ಯುವಪೀಳಿಗೆಯ ಆಸೆ, ಆಕಾಂಕ್ಷೆಗಳು ಕೈಗೂಡದೇ ಇದ್ದಾಗ ಅವರು ತೆಗೆದುಕೊಳ್ಳುವ ನಿರ್ಧಾರಗಳು ಹೇಗಿರುತ್ತವೆ, ಏನೆಲ್ಲಾ ಮಾಡಬೇಕು ಎಂಬ ಸಂದೇಶ ಇಲ್ಲಿದೆ.
ಸಂಚಾರಿ ವಿಜಯ್ ನಾಯಕರಾದರೆ, ನಿರೂಷಾ, ರಿಷಿತಾ ಮತ್ತು ಸೀಮಾಗೌಡ ನಾಯಕಿಯರು. ಅನಂತ್‌ನಾಗ್ ಇಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಸುಧಾ ಬೆಳವಾಡಿ ಸೇರಿದಂತೆ ಇತರರು ಚಿತ್ರದಲ್ಲಿದ್ದಾರೆ. ಇನ್ನು, ಆಗ ಸಾವಿರ, ಲಕ್ಷಗಳಲ್ಲೇ ಪರಿಪೂರ್ಣವಾಗಿ ಚಿತ್ರಗಳು ತಯಾರಾಗುತ್ತಿದ್ದವು. ಈಗ ಮಾತೆತ್ತಿದ್ದರೆ, ಕೋಟಿ ಬಜೆಟ್ ಅಂತಾರೆ. ಹಾಗಂತ, ಈ ಚಿತ್ರಕ್ಕೆ ಕೋಟಿಗಟ್ಟಲೆ ಹಣ ಹಾಕಿಸಲ್ಲ. ಒಂದು ಸಣ್ಣ ಬಜೆಟ್‌ನಲ್ಲೇ ಕಥೆಗೆ ಏನೆಲ್ಲಾ ಬೇಕೋ ಅದನ್ನು ಪೂರೈಸಿ, ಒಳ್ಳೆಯ ಚಿತ್ರ ಕೊಡುವ ತವಕ ನನ್ನದು.
ಹಾಗಾದರೆ, ಇದು ಭಗವಾನ್ ಜಾನರ್ ಸಿನಿಮಾನಾ ಎಂಬ ಪ್ರಶ್ನೆಗೆಲ್ಲಾ “ಆಡುವ ಗೊಂಬೆ’ ಬರೋವರೆಗೆ ಕಾಯಬೇಕು. ಒಂದಂತೂ ಗ್ಯಾರಂಟಿ ಕೊಡ್ತೀನಿ. ಕುಟುಂಬ ಸಮೇತ ಬಂದು ನೋಡುವ ಚಿತ್ರ ಇದಾಗಲಿದೆ. ನವೆಂಬರ್ 2ರಿಂದ ಶುರುವಾಗಿ, ಡಿಸೆಂಬರ್5 ಕ್ಕೆ ಮುಗಿಯಲಿದೆ. ಡಿ.31ರ ಒಳಗೆ ಸೆನ್ಸಾರ್ ಮಾಡಿಸಿ, ಮುಂದಿನ ವರ್ಷ ಬಿಡುಗಡೆ ಮಾಡುವ ಯೋಚನೆ ಇದೆ. ಎಲ್ಲರಲ್ಲೂ ಒಂದು ಪ್ರಶ್ನೆ, ಅಚ್ಚರಿ ಇದ್ದೇ ಇದೆ. ಅದನ್ನು ಸಾಬೀತುಪಡಿಸುವೆ …