Advertisement

ಎಸ್‌ಎಂಇ ಆರ್ಥಿಕ ಸಮಸ್ಯೆಗಳ ಪರಿಹಾರಕ್ಕೆ ಕಾಸಿಯಾ ಒತ್ತಾಯ

09:57 AM Apr 27, 2020 | Sriram |

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಶೇ. 40ರಷ್ಟು ಉದ್ಯಮಗಳು ಚಟುವಟಿಕೆ ಸ್ಥಗಿತಗೊಳಿಸಿ ಮುಚ್ಚುವ ಸ್ಥಿತಿಗೆ ತಲುಪಿವೆ. ಕೂಡಲೇ ಮುಖ್ಯಮಂತ್ರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್‌.ರಾಜು ಆಗ್ರಹಿಸಿದ್ದಾರೆ.

Advertisement

ಸೂಕ್ಷ್ಮ, ಸಣ್ಣ ಕೈಗಾರಿಕೆಗಳು ಆರ್ಥಿಕ, ಕಾರ್ಮಿಕರು, ವಿದ್ಯುತ್‌, ಜಿಎಸ್‌ಟಿ ಸಮಸ್ಯೆಗಳಿಂದ ನಲುಗುತ್ತಿದ್ದು, ಶೇ. 40ರಷ್ಟು ಕೈಗಾರಿಕೆಗಳು ಮುಚ್ಚುವ ಸ್ಥಿತಿಗೆ ತಲುಪಿವೆ. ಹಾಗಾಗಿ ಕೂಡಲೇ ಸಭೆ ಕರೆದು ಸಮಸ್ಯೆಗಳ ಪರಿಹಾರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಅವಧಿ ವಿಸ್ತರಣೆಗೆ ಮನವಿ
ಎಫ್‌ಐಆರ್‌ಸಿ ಬಿಲ್‌ ಪಾವತಿ ಕಾಲಾವಕಾಶ ವಿಸ್ತರಿಸಬೇಕು. ಅವಧಿ ಸಾಲ, ಓವರ್‌ ಡ್ರಾಫ್ಟ್‌, ಒಸಿಸಿಗೆ ಸಂಬಂಧಪಟ್ಟಂತೆ ಪ್ರಕ್ರಿಯೆ/ ಡಾಕ್ಯುಮೆಂಟೇಷನ್‌ ಶುಲ್ಕ ಮನ್ನಾ ಇಲ್ಲವೆ ಇಳಿಕೆ ಮಾಡಬೇಕು. ಪ್ಯಾಕಿಂಗ್‌ ಕ್ರೆಡಿಟ್‌ ಅವಧಿ ಯನ್ನು 30 ದಿನಗಳಿಂದ 180 ದಿನಗಳಿಗೆ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಜ.1ರಿಂದ ಪೂರ್ವಾ ನ್ವಯವಾಗುವಂತೆ ಎಲ್‌. ಸಿ./ ಬಿ.ಜಿ. ಮೇಲಿನ ಕಮಿಷನ್‌ ಇಳಿಕೆ, ದುಡಿಮೆ ಬಂಡವಾಳ ಸಹಿತ ಮುಂದೂಡಲ್ಪಟ್ಟ ಅವಧಿ ಸಾಲ ಪಾವತಿ, ಇಎಂಐ, ಬಡ್ಡಿ ಸಂಬಂಧ ಘೋಷಿಸಲಾದ ವಿನಾಯಿತಿಯನ್ನು ಯಥಾಸ್ಥಿತಿಗೆ ಮರಳುವ ದಿನದಿಂದ ನಿಗದಿತ ಅವಧಿಗೆ ವಿಸ್ತರಿಸಬೇಕು ಎಂದು ಕೋರಿದ್ದಾರೆ.

ಸರಕುಗಳ ಆಮದಿನ ಮೇಲಿನ ಹೆಚ್ಚುವರಿ ದಂಡ ಮನ್ನಾ, ಎಸ್‌ಎಂಇ ವಲಯದ ಉದ್ಯಮಿಗಳಿಗೆ ಅವಧಿ ಸಾಲ/ ಒಡಿ/ ಸಿಸಿ ಮೇಲಿನ ಬಡ್ಡಿಯನ್ನು 3 ತಿಂಗಳ ಕಾಲ ಮನ್ನಾ, ಅನುತ್ಪಾದಕ ಸಾಲ ಪ್ರಮಾಣದ ಮಾನದಂಡಗಳ ಉದಾರೀಕರಣ ಮತ್ತು ಎಸ್‌ಎಂಇಗಳ ಹಣಕಾಸು ಸಮಸ್ಯೆಗಳನ್ನು ಪರಿಹರಿಸಲು ಎಲ್ಲ ಬ್ಯಾಂಕ್‌ಗಳು ಸಹಾಯಕೇಂದ್ರ ತೆರೆಯಲು ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.

Advertisement

ವಿದ್ಯುತ್‌ ಮಾಸಿಕ ಶುಲ್ಕ ಮನ್ನಾಕ್ಕೆ ಆಗ್ರಹ
ಎಲ್ಲ ವರ್ಗಗಳ ಉದ್ಯಮಿಗಳಿಗೆ 2020ರ ಮಾರ್ಚ್‌ನಿಂದ ಒಂದು ವರ್ಷ ಕಾಲ ನಿಗದಿತ ಮಾಸಿಕ ಶುಲ್ಕ ಮನ್ನಾ, ವಿದ್ಯುತ್‌ ಬಳಕೆ ಆಧಾರದ ಮೇಲೆ ಬಿಲ್‌ ಮೊತ್ತ ಸಂಗ್ರಹ, ಹೆಚ್ಚಳ ವಾಗಲಿರುವ 3 ಎಂಎಂಡಿ ಪಾವತಿಯನ್ನು 6 ತಿಂಗಳವರೆಗೆ ತಾತ್ಕಾಲಿಕವಾಗಿ ತಡೆ, ಎಲ್‌. ಟಿ.- 5 ಮತ್ತು ಎಚ್‌. ಟಿ. – ಎ ವರ್ಗದಡಿ ವಿದ್ಯುತ್‌ ಶುಲ್ಕ ಕಡಿಮೆ ಮಾಡಬೇಕು ಎಂದರು.

ಎಸ್‌ಎಂಇ ವಲಯದ ಉದ್ಯಮಗಳಿಗೆ ವಿದ್ಯುತ್‌ ತೆರಿಗೆ/ ವಿಳಂಬ ಪಾವತಿ ಮೇಲಿನ ಬಡ್ಡಿ ಮನ್ನಾ, ಸ್ಲಾ$Âಬ್‌ ಗಣನೆಗೆ ತೆಗೆದುಕೊಳ್ಳದೆ ಏಕರೂಪ ವಿದ್ಯುತ್‌ ದರ ನಿಗದಿ, ಬಿಲ್‌ ಪಾವತಿಸದಿದ್ದರೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸದಂತೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಜಿಎಸ್‌ಟಿ ಸಲ್ಲಿಕೆ ದಿನಾಂಕ ವಿಸ್ತರಿಸಿ
ದಂಡ ಮತ್ತು ಬಡ್ಡಿ ವಿಧಿಸದೆ ಜಿಎಸ್‌ಟಿ- 9 ಎಬಿಸಿ ಸಲ್ಲಿಕೆ, ಇ-ಸರಕುಪಟ್ಟಿ ದಿನಾಂಕ ವಿಸ್ತರಣೆ, ಎಸ್‌ಎಂಇಗಳಿಗೆ ಮಾರ್ಚ್‌, ಎಪ್ರಿಲ್‌, ಮೇ ತಿಂಗಳಿಗೆ ಜಿಎಸ್‌ಟಿ ಪಾವತಿಯನ್ನು ದಂಡ ಮತ್ತು ಬಡ್ಡಿ ವಿಧಿಸದೆ 3 ತಿಂಗಳು ಮುಂದೂಡಬೇಕು. ಎಲ್ಲ ಬಗೆಯ ನೋಟಿಸ್‌ ಮತ್ತು ತೆರಿಗೆ ಸಂಬಂಧಿತ ಕ್ರಮ, ಪ್ರಕರಣಗಳನ್ನು 6 ತಿಂಗಳು ಮುಂದೂಡಬೇಕು ಎಂದು ಆರ್‌.ರಾಜು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next