Advertisement

ಜಿಎಸ್‌ಟಿ ಸಹಾಯವಾಣಿ ಆರಂಭಿಸಿದ ಕಾಸಿಯಾ

11:21 AM Jul 14, 2017 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಸ್ವಾಗತಾರ್ಹ. ಆದರೆ, ಅದರಲ್ಲಿನ ಗೊಂದಲಗಳು ಇನ್ನೂ ಬಗೆಹರಿದಿಲ್ಲ. ಈ ತೊಡಕುಗಳ ನಿವಾರಣೆಗೆ “ಜಿಎಸ್‌ಟಿ ಸಹಾಯವಾಣಿ’ ಆರಂಭಿಸಲಾಗುವುದು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್‌. ಹನುಮಂತೇಗೌಡ ತಿಳಿಸಿದರು. 

Advertisement

ಜಿಎಸ್‌ಟಿಯಲ್ಲಿ ಎಲ್ಲದಕ್ಕೂ ಒಂದೇ ರೂಪದ ತೆರಿಗೆ ಇರುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ವಾಸ್ತವವಾಗಿ ಒಂದೇ ಉತ್ಪನ್ನಕ್ಕೆ ಬೇರೆ ಬೇರೆ ರೂಪದ ತೆರಿಗೆ ವಿಧಿಸಲಾಗುತ್ತಿದೆ. ತೆರಿಗೆಗೆ ಸಂಬಂಧಿಸಿದ ದಾಖಲಾತಿಗಳನ್ನು ಅಪ್‌ಲೋಡ್‌ ಮಾಡುವಲ್ಲಿ, ಎಚ್‌ಎಸ್‌ಎನ್‌ ಸಂಖ್ಯೆ ನೀಡುವಿಕೆಯಲ್ಲಿ ಹಲವಾರು ಗೊಂದಲಗಳಿವೆ. ಈ ಹಿನ್ನೆಲೆಯಲ್ಲಿ ಸಹಾಯವಾಣಿ ತೆರೆಯಲು ನಿರ್ಧರಿಸಿದ್ದು, ಇದು ದಿನದ 24 ಗಂಟೆ ಕಾರ್ಯನಿರ್ವಹಿಸಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

ಸೌಲಭ್ಯಗಳೇ ಇಲ್ಲದ ಕಡೆ ಕೈಗಾರಿಕೆ ಸ್ಥಾಪನೆ ಹೇಗೆ?: ಅತಿ ಸಣ್ಣ ಕೈಗಾರಿಕೆಗಳಿಗೆ 99 ವರ್ಷ ಇದ್ದ ಲೀಸ್‌ ಪದ್ಧತಿಯನ್ನು ಸಡಿಲಿಸಿ, 2 ಎಕರೆವರೆಗೆ 10 ವರ್ಷ ಲೀಸ್‌ ಕಮ್‌ ಸೇಲ್‌ ಪದ್ಧತಿ ಜಾರಿ ಮಾಡಿರುವುದು ಕೈಗಾರಿಕೆಗಳ ಬೆಳವಣಿಗೆಗೆ ಪೂರಕ ನಿರ್ಧಾರ. ಆದರೆ, ಇದರ ಬೆನ್ನಲ್ಲೇ ಉದ್ಯಮಿಗಳು ಗ್ರಾಮಾಂತರ ಭಾಗಗಳಿಗೆ ತೆರಳುವಂತೆ ಸರ್ಕಾರ ಸೂಚಿಸುತ್ತಿದೆ. ವಿಚಿತ್ರವೆಂದರೆ ಗ್ರಾಮಾಂತರ ಭಾಗಗಳಲ್ಲಿ ಮೂಲಸೌಕರ್ಯಗಳೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ಎಲ್ಲಾ ಮಹಿಳಾ ಉದ್ಯಮಿಗಳಿಗೂ ರಿಯಾಯ್ತಿ ಕೊಡಿ: ಕಾಸಿಯಾ ಜಂಟಿ ಕಾರ್ಯದರ್ಶಿ ಲತಾ ಗಿರೀಶ್‌ ಮಾತನಾಡಿ, ಕೈಗಾರಿಕಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಮಹಿಳಾ ಉದ್ಯಮಿಗಳಿಗೆ ಸರ್ಕಾರ ನೀಡಿದ ವಿಶೇಷ ವಿನಾಯ್ತಿ ಮತ್ತು ರಿಯಾಯ್ತಿಗಳನ್ನು ಎಲ್ಲ ಮಹಿಳಾ ಉದ್ಯಮಿಗಳಿಗೂ ನೀಡಬೇಕು. ಈಗಾಗಲೇ ಈ ಸಂಬಂಧ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು. 

ಪ್ರಧಾನ ಕಾರ್ಯದರ್ಶಿ ಟಿ.ಎಸ್‌. ಉಮಾಶಂಕರ್‌, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿ ಬಜೆಟ್‌ನಲ್ಲಿ ಭರಪೂರ ಸೌಲಭ್ಯಗಳನ್ನು ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸನ್ಮಾನ ಮಾಡಲು ಕಾಸಿಯಾ ನಿರ್ಧರಿಸಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಸಿಯಾ ಖಜಾಂಚಿ ಕೆ.ಎನ್‌. ನರಸಿಂಹಮೂರ್ತಿ ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next