Advertisement

ಅಕೌಂಟ್‌ನಲ್ಲಿ ಕಾಸಿಲ್ಲದಿದ್ದರೂ ಭಾರಿ ದಂಡ; ಎಸ್‌ಬಿಐನಿಂದ ಹೊಸ ನಿಯಮ

03:50 AM Mar 04, 2017 | Team Udayavani |

ಮುಂಬೈ: ಅಪನಗದೀಕರಣದ ಬಳಿಕ ರಾಷ್ಟ್ರೀಕೃತ ಬ್ಯಾಂಕುಗಳು ಒಂದೊಂದೇ ನೀತಿ ಪ್ರಕಟಿಸುತ್ತಿವೆ. ಈಗ ಸರದಿ ಎಸ್‌ಬಿಐನದ್ದು. ನಿಮ್ಮದು ಎಸ್‌ಬಿಐ ಉಳಿತಾಯ ಖಾತೆ ಆಗಿದ್ದಲ್ಲಿ, ನೀವು ಮೆಟ್ರೋ ನಗರದಲ್ಲೇ ವಾಸಿಸುತ್ತಿದ್ದಲ್ಲಿ ಕನಿಷ್ಠ 5 ಸಾವಿರ ರೂ. ಠೇವಣಿ ಇಟ್ಟಿರಲೇಬೇಕು. ಇಲ್ಲದಿದ್ರೆ ದಂಡ ಪಕ್ಕಾ!

Advertisement

ಉಳಿತಾಯ ಖಾತೆಗಳ “ಮಾಸಿಕ ಸರಾಸರಿ ಮೊತ್ತ’ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಸ್‌ಬಿಐ ಈ ನೀತಿ ಜಾರಿ ತಂದಿದೆ. ಗ್ರಾಮೀಣ ಪ್ರದೇಶಕ್ಕೆ ಹೋಲಿಸಿದರೆ, ಮೆಟ್ರೋಪಾಲಿಟನ್‌ ನಗರಗಳಲ್ಲಿ ಈ ದಂಡದ ಮೊತ್ತ ಹೆಚ್ಚು! ಏ.1 ರಿಂದ ಈ ನೀತಿ ಜಾರಿಯಾಗಲಿದೆ. ಅದರಲ್ಲೂ ಅಂದಿನಿಂದಲೇ ಎಸ್‌ಬಿಐ ಜತೆಗೆ ಇತರೆ ಸಹವರ್ತಿ ಬ್ಯಾಂಕುಗಳು ವಿಲೀನವಾಗುತ್ತಿರುವುದರಿಂದ ಇದರ ಅಡ್ಡಪರಿಣಾಮ ತುಸು ಹೆಚ್ಚಾಗಿಯೇ ಇರಲಿದೆ.

ಎಷ್ಟು ದಂಡ?: ಮೆಟ್ರೋ ಸಿಟಿಯ ಗ್ರಾಹಕರ ಖಾತೆಯಲ್ಲಿ 5 ಸಾವಿರ ಮೊತ್ತ ಇರಲೇಬೇಕು. ಅದು ಶೇ.50ರಷ್ಟು ಕಡಿಮೆ ಆಯಿತೆಂದರೆ, 50 ರೂಪಾಯಿ ದಂಡದ ಜೊತೆಗೆ ಸೇವಾ ತೆರಿಗೆಯನ್ನೂ ಕಟ್ಟಬೇಕು. ಶೇ.50-70ರಷ್ಟು ಕಡಿಮೆ ಆಯಿತೆಂದರೆ, 75 ರೂ. ಮತ್ತು ಸೇವಾ ತೆರಿಗೆ ಕಟ್ಟಬೇಕು. ಒಂದು ವೇಳೆ ಶೇ.75ಕ್ಕಿಂತ ಹೆಚ್ಚು ಹಣ ತೆಗೆದರೆ 100 ರೂ. ಜತೆಗೆ ಸೇವಾ ತೆರಿಗೆಯನ್ನೂ ಪಾವತಿಸಬೇಕಾಗುತ್ತದೆ.

ನಗರಗಳಲ್ಲಿ ಸರಾಸರಿ ಠೇವಣಿ ಮೊತ್ತ 3 ಸಾವಿರ ರೂ., ಅರೆನಗರಗಳಲ್ಲಿ 2 ಸಾವಿರ ರೂ. ಮತ್ತು ಗ್ರಾಮಗಳಲ್ಲಿ 1 ಸಾವಿರ ರೂಪಾಯಿಗೆ ಮಿತಿಗೊಳಿಸಲಾಗಿದೆ. ಹಳ್ಳಿ ಪ್ರದೇಶಗಳ ಮಂದಿ ಈ ಮಿತಿ ಕಾಯ್ದುಕೊಳ್ಳಲು ವಿಫ‌ಲರಾದರೆ, ಮೇಲೆ ತಿಳಿಸಿದಂತೆ ಶೇಕಡಾವಾರು ಕ್ರಮದಲ್ಲಿ 20,30, 50 ರೂ. ಜತೆಗೆ ಸೇವಾ ತೆರಿಗೆಯನ್ನು ಕಟ್ಟಬೇಕು.

ಯಾಕೆ ಹೀಗೆ?: ಎಸ್‌ಬಿಐನಲ್ಲಿ ಈ ಹಿಂದೆಯೂ ಸರಾಸರಿ ಮೊತ್ತ ಕಾಯ್ದುಕೊಳ್ಳಲು ವಿಫ‌ಲರಾದರೆ ದಂಡನೀತಿ ಜಾರಿಯಲ್ಲಿತ್ತು. ಆದರೆ, 2012ರಲ್ಲಿ ಹೊಸ ಗ್ರಾಹಕರನ್ನು ಸೆಳೆಯಲು ಆ ನೀತಿಯನ್ನು ಕೈಬಿಟ್ಟಿತ್ತು. ಗ್ರಾಹಕರ ಹಣವನ್ನು ಆದಷ್ಟು ಬ್ಯಾಂಕ್‌ನಲ್ಲೇ ಇರುವಂತೆ ನೋಡಿಕೊಳ್ಳಲು ಬ್ಯಾಂಕ್‌ ಈ ನಿರ್ಧಾರಕ್ಕೆ ಬಂದಿದೆ. ಖಾತೆಯಲ್ಲಿ ಮೊತ್ತ ಇದ್ದಷ್ಟು ಬ್ಯಾಂಕಿಗೇ ಲಾಭವಾಗಲಿದೆ.

Advertisement

ದೇಶದಲ್ಲಿ ಒಟ್ಟಾರೆ 25 ಕೋಟಿ ಎಸ್‌ಬಿಐ ಉಳಿತಾಯಿ ಖಾತೆಗಳಿವೆ. ಸೊನ್ನೆ ಠೇವಣಿ ಇಟ್ಟುಕೊಂಡಿದ್ದರೂ ದಂಡ ವಿಧಿಸುತ್ತಿರಲಿಲ್ಲ. ಅಪನಗದೀಕರಣದ ವೇಳೆ ಸಾಕಷ್ಟು ಖಾತೆಗಳು ಸೃಷ್ಟಿಯಾಗಿದ್ದು, ಕನಿಷ್ಠ ಮೊತ್ತದ ಖಾತೆಗಳ ನಿರ್ವಹಣೆ ಬ್ಯಾಂಕಿಗೆ ಹೊರೆಯಾಗಿದೆ.

ಎಸ್‌ಬಿಐನಿಂದಲೂ ಹೆಚ್ಚುವರಿ ಶುಲ್ಕ
ಖಾಸಗಿ ಬ್ಯಾಂಕುಗಳಷ್ಟೇ ಅಲ್ಲ, ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್‌ಬ್ಯಾಂಕ್‌(ಎಸ್‌ಬಿಐ) ಕೂಡ ಏಪ್ರಿಲ್‌ ತಿಂಗಳಿಂದ ಹೆಚ್ಚುವರಿ ವಹಿವಾಟಿಗೆ ಶುಲ್ಕ ವಿಧಿಸಲು ಮುಂದಾಗಿದೆ. ತಿಂಗಳಿಗೆ 5ಕ್ಕಿಂತ ಹೆಚ್ಚು ಬಾರಿ ಎಟಿಎಂ ಅಥವಾ ಡೆಬಿಟ್‌ ಕಾರ್ಡ್‌ ವಹಿವಾಟು ನಡೆಸಿದರೆ, ತನ್ನ ಗ್ರಾಹಕರಿಗೆ ಹೆಚ್ಚುವರಿ 10 ರೂ.(ಸೇವಾ ತೆರಿಗೆ ಹೊರತುಪಡಿಸಿ) ಶುಲ್ಕ ವಿಧಿಸಲಿದೆ. ಬೇರೆ ಬ್ಯಾಂಕಿನ ಗ್ರಾಹಕರು 3 ಉಚಿತ ವಹಿವಾಟಿನ ಬಳಿಕದ ಟ್ರಾನ್ಸಾಕ್ಷನ್‌ಗೆ 20ರೂ. ಶುಲ್ಕ ಪಾವತಿಸಬೇಕು.

ಎಟಿಎಂನಲ್ಲಿ ಪಿನ್‌ ಚೇಂಜ್‌, ಬ್ಯಾಲೆನ್ಸ್‌ ಚೆಕ್‌ ಮಾಡಿದ್ರೂ ಹೆಚ್ಚುವರಿ ಶುಲ್ಕ
ನವದೆಹಲಿ
: ಬ್ಯಾಂಕುಗಳಲ್ಲಿ ಹೆಚ್ಚುವರಿ ವಹಿವಾಟಿಗಷ್ಟೇ ಅಲ್ಲ, ಬ್ಯಾಲೆನ್ಸ್‌ ಚೆಕ್‌ ಮಾಡಿದರೆ, ಪಿನ್‌ ಬದಲಾಯಿಸಿದರೆ, ಮಿನಿ ಸ್ಟೇಟ್‌ಮೆಂಟ್‌ ಪಡೆದರೆ, ಅದಕ್ಕೂ ನೀವು ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕು!

ಉಚಿತ ವಹಿವಾಟಿಗಿರುವ ಮಿತಿ ಮುಗಿದ ಬಳಿಕ ವಿತ್‌ಡ್ರಾ ಮತ್ತು ಠೇವಣಿಗೆ ಹೆಚ್ಚುವರಿಯಾಗಿ 150 ರೂ. ಶುಲ್ಕ ವಿಧಿಸುವುದಾಗಿ ಕೆಲವು ಖಾಸಗಿ ಬ್ಯಾಂಕುಗಳು ಘೋಷಿಸಿದ ಬೆನ್ನಲ್ಲೇ ಬ್ಯಾಂಕುಗಳು ವಿಧಿಸುತ್ತಿರುವ ಇನ್ನೂ ಕೆಲವು ಶುಲ್ಕಗಳ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಎಚ್‌ಡಿಎಫ್ಸಿ ಬ್ಯಾಂಕ್‌ 2014ರಿಂದಲೇ ತನ್ನ ಗ್ರಾಹಕರಿಗೆ ಇಂಥ ಶುಲ್ಕಗಳನ್ನು ವಿಧಿಸುತ್ತಾ ಬಂದಿರುವುದಾಗಿ “ಇಂಡಿಯಾ ಟುಡೇ’ ವರದಿ ಮಾಡಿದೆ. ಎಟಿಎಂನಲ್ಲಿ ಉಚಿತ 3 ವಹಿವಾಟುಗಳನ್ನು ನಡೆಸಿದ ಬಳಿಕ ಪ್ರತಿ ನಗದು ವಹಿವಾಟಿಗೂ ನಿಮ್ಮ ಖಾತೆಯಿಂದ ಹೆಚ್ಚುವರಿ 20 ರೂ. ಹಾಗೂ ನಗದೇತರ ವಹಿವಾಟಿಗೆ 8.50 ಪೈಸೆ ಕಡಿತಗೊಳ್ಳುತ್ತದೆ. ನಗದೇತರ ವಹಿವಾಟುಗಳು ಎಂದರೆ ಖಾತೆಯಲ್ಲಿ ಎಷ್ಟು ಹಣವಿದೆ (ಬ್ಯಾಲೆನ್ಸ್‌ ಚೆಕ್‌) ಎಂದು ನೋಡುವುದು, ಮಿನಿ ಸ್ಟೇಟ್‌ಮೆಂಟ್‌ ಪಡೆಯುವುದು, ಪಿನ್‌ ಬದಲಾಯಿಸುವುದು ಇತ್ಯಾದಿ.

ಮತ್ತೂಂದು ವಿಚಾರವೆಂದರೆ, 3 ಉಚಿತ ವಹಿವಾಟುಗಳೆಂದರೆ ಅದು ನಗದು ವಿತ್‌ಡ್ರಾ ಮಾಡುವುದಷ್ಟೇ ಅಲ್ಲ. ನೀವು ಸುಮ್ಮನೆ ಬ್ಯಾಲೆನ್ಸ್‌ ಚೆಕ್‌ ಮಾಡಿದ್ರೂ, ಪಿನ್‌ ಬದಲಾಯಿಸಿದ್ರೂ ಅದು ವಹಿವಾಟು ಎಂದೇ ಪರಿಗಣಿಸಲ್ಪಡುತ್ತದೆ. ಮೇಲೆ ಹೇಳಿರುವ ಶುಲ್ಕವೇ ಅಂತಿಮವಲ್ಲ. ಅದಕ್ಕೆ ತೆರಿಗೆಯೂ ಹೆಚ್ಚುವರಿಯಾಗಿ ಸೇರಿರುತ್ತದೆ.  ಈ ಎಲ್ಲ ಅಂಶಗಳನ್ನೂ ಎಚ್‌ಡಿಎಫ್ಸಿ ಬ್ಯಾಂಕಿನ ಎಟಿಎಂ ಶುಲ್ಕ ಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next