Advertisement
ಮಿಶ್ರ ಜೋಡಿಗೆ ಜಯಮಿಶ್ರ ಡಬಲ್ಸ್ ವಿಭಾಗದ ಆರಂಭಿಕ ಪಂದ್ಯದಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ- ಅಶ್ವಿನಿ ಪೊನ್ನಪ್ಪ ಜೋಡಿ ಥಾಯ್ಲೆಂಡ್‌ನ ವಾಂಗ್ ಚಿನ್ ಲಿನ್-ಲೀ ಚೈನ್ ಸಿನ್ ವಿರುದ್ಧ 21-16, 19-21, 21-14 ಗೇಮ್‌ಗಳ ಅಂತರದಿಂದ ಜಯಿಸಿದೆ. ಆರಂಭಿಕ ಗೇಮ್‌ನಲ್ಲಿ ಅತ್ಯುತ್ತಮ ಆಟವಾಡಿದ ಭಾರತದ ಜೋಡಿ 2ನೇ ಗೇಮ್‌ನಲ್ಲಿ ಮುಗ್ಗರಿಸಿತು. ಆದರೆ ಅಂತಿಮ ಗೇಮ್ ಅನ್ನು 7 ಅಂಕಗಳ ಅಂತರದಿಂದ ತಮ್ಮದಾಗಿಸಿಕೊಂಡು ದ್ವಿತೀಯ ಸುತ್ತಿಗೆ ಲಗ್ಗೆಯಿಟ್ಟರು.
ವನಿತಾ ಸಿಂಗಲ್ಸ್ ವಿಭಾಗದ ಪಂದ್ಯಗಳು ಬುಧವಾರ ಆರಂಭವಾಗಲಿದ್ದು, ಭಾರತದ ತಾರಾ ಶಟ್ಲರ್‌ಗಳಾದ ಸೈನಾ ನೆಹ್ವಾಲ್, ಪಿ.ವಿ. ಸಿಂಧು ಭಾಗವಹಿಸಲಿದ್ದಾರೆ. ಸತತ ಟೂರ್ನಿಗಳಲ್ಲಿ ಮುಗ್ಗರಿಸುತ್ತಿರುವ ಸಿಂಧುಗೆ ಮತ್ತೂಮ್ಮೆ ಸವಾಲು ಎದುರಾಗಿದೆ. ಆರಂಭಿಕ ಪಂದ್ಯದಲ್ಲಿ ಸಿಂಧು ಥಾಯ್ಲೆಂಡ್‌ನ ನಿತ್‌ಚಾವೊನ್ ಜಿಂಡಾಪೊಲ್ ಅವರನ್ನು ಎದುರಿಸಲಿದ್ದಾರೆ. ಸೈನಾ ನೆಹ್ವಾಲ್ ಜಪಾನ್‌ನ ಅಕಾನೆ ಯಮಗುಚಿ ಅವರ ವಿರುದ್ಧ ಆಡಲಿದ್ದಾರೆ. ವನಿತಾ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ- ಸಿಕ್ಕಿ ಎನ್. ರೆಡ್ಡಿ ಮೊದಲ ಪಂದ್ಯ ಆಡಲಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪಾರುಪಳ್ಳಿ ಕಶ್ಯಪ್ ತನ್ನ 2ನೇ ಪಂದ್ಯದಲ್ಲಿ ಇಂಡೋನೇಶ್ಯದ ಆ್ಯಂತೋನಿ ಸಿನಿಸುಖ ಗಿಟ್ಟಿಂಗ್ ಅವರನ್ನು ಎದುರಿಸಿದರೆ, ಕೆ. ಶ್ರೀಕಾಂತ್ ಆರಂಭಿಕ ಪಂದ್ಯದಲ್ಲಿ ಆತಿಥೇಯ ನಾಡಿನ ವಾಂಗ್ ವಿಂಗ್ ಕಿ ವಿನ್ಸೆಂಟ್ ಅವರ ವಿರುದ್ಧ ಆಡಲಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಾಯಿ ಪ್ರಣೀತ್. ಬಿ ಹಾಗೂ ಸಮೀರ್ ವರ್ಮ ಕೂಡ ಈ ಕೂಟದಲ್ಲಿ ಆಡುತ್ತಿದ್ದಾರೆ.