ನವದೆಹಲಿ:ಕೇಂದ್ರ ಸರ್ಕಾರವು ಜಮ್ಮು-ಕಾಶ್ಮೀರದಿಂದ ಆರ್ಟಿಕಲ್370 ಹಿಂಪಡೆದಿರುವುದೇ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಚೀನಾದ ಆಕ್ರಮಣಶೀಲತೆಗೆ ಕಾರಣ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯ ಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಈ ರೀತಿ ಚೀನಾದ ಪರ ವಹಿಸಿ ಮಾತನಾಡುವ ಮೂಲಕ ಅವರು ವಿವಾದಕ್ಕೆ ನಾಂದಿ ಹಾಡಿದ್ದಾರೆ.
2019ರಲ್ಲಿ ಕೇಂದ್ರ ಸರ್ಕಾರ ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ಹಾಗೂ 35ಎ ರದ್ದುಗೊಳಿಸಿ, ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿಸಿತ್ತು. ಈ ಬಗ್ಗೆ ಮಾತನಾಡುತ್ತಾ ಅಬ್ದುಲ್ಲಾ, “”ಚೀನಾ 370ನೇ ವಿಧಿ ರದ್ದತಿಯನ್ನು ಒಪ್ಪಿಯೇ ಇಲ್ಲ. ಹೀಗಾಗಿ, ಚೀನಾದ ಬೆಂಬಲದೊಂದಿಗೆ ಕಣಿವೆ ಪ್ರದೇಶದಲ್ಲಿ ಮತ್ತೆ ವಿಶೇಷ ಸ್ಥಾನಮಾನ ಮರುಸ್ಥಾಪಿಸುತ್ತೇವೆ.
ನಾನು ಯಾವತ್ತೂ ಚೀನಾ ಅಧ್ಯಕ್ಷರನ್ನು ಆಹ್ವಾನಿಸಲಿಲ್ಲ. ಮೋದಿಯವರೇ ಅವರನ್ನು ಆಹ್ವಾನಿಸಿ ಉಯ್ನಾಲೆ ಸವಾರಿ ಮಾಡಿದ್ದರು. ಇದಷ್ಟೇ ಅಲ್ಲದೇ ಜಿನ್‌ಪಿಂಗ್‌ರನ್ನು ಚೆನ್ನೈಗೂ ಕರೆ ದೊಯ್ದು ಜತೆಗೂಡಿಊಟ ಮಾಡಿದ್ದಾರೆ” ಎಂದೂ ಅಬ್ದುಲ್ಲಾ ಹೇಳಿದ್ದಾರೆ.
ತ್ರಿವಳಿ ತಲಾಖ್ ಪ್ರಶ್ನಿಸಿದ್ದ ಶಾಯರಾ ಬಾನೋ ಬಿಜೆಪಿಗೆ
ತ್ರಿವಳಿ ತಲಾಖ್‌ನ ಸಾಂವಿಧಾನಿಕ ಮಾನ್ಯತೆ ಪ್ರಶ್ನೆ ಮಾಡಿ ಸುಪ್ರೀಂಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದ ಶಾಯರಾ ಬಾನೋ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇವರು ಉತ್ತರಾಖಂಡದ ಉಧಮ್‌ಸಿಂಗ್ ನಗರ ಜಿಲ್ಲೆಯಕಾಶಿಪುರಕ್ಕೆ ಸೇರಿದವರು.
ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಅವರು, ಪಕ್ಷ ಹೊಂದಿರುವ ಪ್ರಗತಿಪರ ನೀತಿಗಳೇ ಪಕ್ಷ ಸೇರುವಂತೆ ಮಾಡಿತು. ತ್ರಿವಳಿ ತಲಾಖ್ ಅಸಾಂವಿಧಾನಿಕ ಎಂದು ಬಿಜೆಪಿ ಹೋರಾಟ ನಡೆಸಿತ್ತು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಎಂಬ ಮಾತಿನಿಂದ ಪ್ರೇರಣೆಗೊಂಡು ಬಿಜೆಪಿಗೆ ಸೇರಿದ್ದಾಗಿ ತಿಳಿಸಿದ್ದಾರೆ.