Advertisement
ಮಂಗಳವಾರ ಉಗ್ರ ಅಲ್ ಜವಾಹಿರಿ 14 ನಿಮಿಷದ ವೀಡಿಯೋ ಬಿಡುಗಡೆ ಮಾಡಿ ಭಾರತದ ವಿರುದ್ಧ ಜಿಹಾದ್ ಸಾರುವ ಬಗ್ಗೆ ಕರೆ ನೀಡಿದ್ದ. ಅದರ ಮರುದಿನವೇ, ಅಂದರೆ ಬುಧವಾರ ಕಾಶ್ಮೀರದಲ್ಲಿ ಸೇನೆ ಹಮ್ಮಿಕೊಂಡಿದ್ದ ನೇಮಕಾತಿ ಆಂದೋಲನದಲ್ಲಿ ಸಾವಿರಾರು ಕಾಶ್ಮೀರಿ ಯುವಕರು ಸೇನೆಗೆ ಸೇರಲು ಅತ್ಯುತ್ಸಾಹದಿಂದ ಮುಂದೆ ಬಂದಿದ್ದಾರೆ. ಜಮ್ಮು ಕಾಶ್ಮೀರದ ಬಾರಾಮುಲ್ಲಾದಲ್ಲಿ ಬುಧವಾರ ಆರಂಭವಾದ ನೇಮಕಾತಿ ಕ್ಯಾಂಪೇನ್ ಜು.16ರ ವರೆಗೂ ನಡೆಯಲಿದೆ.
ಭಾರತದ ಸೇನೆ ವಿರುದ್ಧ ಜೆಹಾದ್‌ಗೆ ಕರೆ
ಜುಲೈ 9ರಂದು 14 ನಿಮಿಷಗಳ ವೀಡಿಯೋ ಬಿಡುಗಡೆ ಮಾಡಿರುವ ಅಲ್ಖೈದಾ ಮುಖ್ಯಸ್ಥ ಅಲ್ ಜವಾಹಿರಿ, ಭಾರತದಲ್ಲಿ ಸೇನೆ ಮತ್ತು ಸರಕಾರದ ವಿರುದ್ಧ ದಾಳಿ ನಡೆಸುವಂತೆ ಕಾಶ್ಮೀರದ ಉಗ್ರ ಸಂಘಟನೆಗಳಿಗೆ ಸೂಚನೆ ನೀಡಿದ್ದ. ಈ ಸಂದರ್ಭದಲ್ಲಿ ಕಾಶ್ಮೀರ ಹೋರಾಟವು ಭಾರತದ ಸೇನೆ ಮತ್ತು ಸರಕಾರದ ಮೇಲೆ ದಾಳಿಯನ್ನೇ ಕೇಂದ್ರೀಕರಿಸಿರಬೇಕು. ಭಾರತದ ಆರ್ಥಿಕತೆ ಮತ್ತು ಮಾನವ ಸಂಪನ್ಮೂಲವನ್ನು ನಾಶ ಮಾಡಬೇಕು ಎಂದು ಜವಾಹಿರಿ ವಿಡಿಯೋದಲ್ಲಿ ಹೇಳಿದ್ದಾನೆ. ಪಾಕಿಸ್ಥಾನದ ಸರಕಾರ ಮತ್ತು ಸೇನೆಯನ್ನು ಅಮೆರಿಕದ ಬಾಲಬಡುಕರು ಎಂದು ಜರೆದಿರುವ ಜವಾಹಿರಿ, ಪಾಕಿಸ್ಥಾನದ ಕಾಶ್ಮೀರ ನೀತಿಯು ತಾಲಿಬಾನ್ ರೀತಿ ಇರಬೇಕು ಎಂದೂ ಹೇಳಿದ್ದಾನೆ. ಇನ್ನೊಂದೆಡೆ ಪಾಕಿಸ್ಥಾನ ಸೇನೆಯ ವಿರುದ್ಧ ಜವಾಹಿರಿ ಕಿಡಿ ಕಾರಿದ್ದಾನೆ. ಪಾಕಿಸ್ಥಾನವು ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡುವ ನಿಟ್ಟಿನಲ್ಲಿ ನಿರೀಕ್ಷಿತ ಕೆಲಸ ಮಾಡುತ್ತಿಲ್ಲ. ಅಫ್ಘಾನಿಸ್ಥಾನದಲ್ಲಿ ಅಮೆರಿಕದ ಮಾತು ಕೇಳಿಕೊಂಡು ಉಗ್ರರ ವಿರುದ್ಧ ಹೋರಾಟ ನಡೆಸುತ್ತಿದೆ. ಬಂಗಾಲವನ್ನೂ ಇದೇ ಸೇನೆ ಭಾರತಕ್ಕೆ ನೀಡಿತು. ಹೀಗಾಗಿ ಸೇನೆಯ ಮೇಲೆ ವಿಶ್ವಾಸ ಇಡಲಾಗದು ಎಂದು ಜವಾಹಿರಿ ಕಿಡಿಕಾರಿದ್ದಾನೆ.