ಜಮ್ಮು: ಕಾಶ್ಮೀರಿ ಪಂಡಿತರು ಕಾಶ್ಮಿರಕ್ಕೆ ವಾಪಸಾಗುವ ಸಂದರ್ಭದಲ್ಲಿ ಅವರನ್ನು ಯಾರೂ ತಡೆಯಲಾರರು ಮತ್ತು ಅವರು ಹಿಂದೂಗಳು ಮತ್ತು ಭಾರತದ ಭಕ್ತರಾಗಿಯೇ ವಾಪಸಾಗಲಿದ್ದಾರೆ ಎಂದು ಆರ್‌ಎಸ್‌ಎಸ್‌ನ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಜಮ್ಮುವಿನಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಉಗ್ರರ ಕಾರಣದಿಂದಾಗಿ ಕಾಶ್ಮೀರವನ್ನು ತೊರೆಯಬೇಕಾಯಿತು. ಆದರೆ, ಕಾಶ್ಮೀರಿ ಪಂಡಿತರು ವಾಪಸ್ ಬರುವಾಗ ಹಿಂದೂಗಳಾಗಿ ಮತ್ತು ಭಾರತದ ಭಕ್ತರಾಗಿ ವಾಪಸಾಗುತ್ತೇವೆ ಮತ್ತು ನಮ್ಮನ್ನು ಯಾರೂ ತಡೆಯಲಾರರು’ ಎಂದು ಹೇಳಿದ್ದಾರೆ.
“ಕಾಶ್ಮೀರಿ ಪಂಡಿತರು ಶೀಘ್ರದಲ್ಲಿಯೇ ತಮ್ಮ ಮೂಲ ನೆಲೆಗಳಿಗೆ ಹೋಗುವ ದಿನಗಳು ಸಮೀಪಿಸುತ್ತಿವೆ. ಅದು ಶೀಘ್ರವೇ ಈಡೇರಲಿ ಎಂದು ಹಾರೈಸುತ್ತೇನೆ’ ಎಂದು ಆಶಿಸಿದ್ದಾರೆ. ನಾಲ್ಕು ದಶಕಗಳಿಂದ ಪಂಡಿತ ಸಮುದಾಯದ ದೇಶದಲ್ಲಿಯೇ ಪರಕೀಯರಂತೆ ಬಾಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಿನಿಮಾಕ್ಕೆ ಮೆಚ್ಚುಗೆ:
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ “ದ ಕಾಶ್ಮೀರ್ ಫೈಲ್ಸ್’ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, 1990ರಲ್ಲಿ ಉಂಟಾಗಿದ್ದ ಘಟನೆಯನ್ನು ನೈಜವಾಗಿಯೇ ಚಿತ್ರಿಸಿದೆ ಎಂದು ಹೇಳಿದ್ದಾರೆ. ವಿಶೇಷ ಸ್ಥಾನಮಾನ ಸೇರಿದಂತೆ ಹಲವು ಕಠಿಣ ಹಾದಿಗಳನ್ನು ತೆಗೆದು ಹಾಕಿದಾಗ ಮಾತ್ರ ಕಾಶ್ಮೀರದಲ್ಲಿನ ಪರಿಸ್ಥಿತಿ ಸುಧಾರಿಸುವುದಾಗಿ ಹಿಂದೊಮ್ಮೆ ಹೇಳಿದ್ದೆ. ಇದೀಗ ಎಲ್ಲರ ಪ್ರಯತ್ನದಿಂದ ಅಂಥ ದಿನಗಳು ಶುರುವಾಗಿವೆ ಎಂದರು.