ಹೊಸದಿಲ್ಲಿ : ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು ಸ್ಥಳೀಯ ಕಾಶ್ಮೀರಿ ಕ್ರಿಕೆಟ್ ಕ್ಲಬ್ ಆ ಮೂಲಕ ಭಾರೀ ವಿವಾದವನ್ನು ಸೃಷ್ಟಿಸಿದೆ.
ಈ ವಿಡಿಯೋದಲ್ಲಿ ಸ್ಥಳೀಯ ಕಾಶ್ಮೀರಿ ಕ್ರಿಕೆಟ್ ತಂಡದ ಸದಸ್ಯರು ಪಾಕಿಸ್ಥಾನಿ ಕ್ರಿಕೆಟ್ ತಂಡದ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದು ಪಂದ್ಯಕ್ಕೆ ಮೊದಲು ಪಾಕ್ ರಾಷ್ಟ್ರ ಗೀತೆ ಹಾಡುವುದು ದಾಖಲಾಗಿದೆ.
ಈ ಪಂದ್ಯ ಎಪ್ರಿಲ್ 2ರಂದು ಗಂದರ್‌ಬಾಲ್‌ನಲ್ಲಿನ ವಾಯೀ ಮೈದಾನದಲ್ಲಿ ನಡೆದಿದೆ. ಅಂದು ಚೆನಾನಿ – ನಶ್ರೀ ಸುರಂಗವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಕಾಶ್ಮೀರಕ್ಕೆ ಬರುವವರಿದ್ದರು. ಮೋದಿ ಭೇಟಿಯನ್ನು ಪ್ರತಿಭಟಿಸಲು ಅಂದು ಪ್ರತ್ಯೇಕತಾವಾದಿಗಳು ಹರತಾಳಕ್ಕೆ ಕರೆ ನೀಡಿದ್ದರು. ಹಾಗಿದ್ದರೂ ಈ ಕ್ರಿಕೆಟ್ ಪಂದ್ಯ ಸಾಂಗವಾಗಿ ನಡೆದಿದೆ.
ಪಾಕ್ ಕ್ರಿಕೆಟ್ ತಂಡದ ಹಸಿರು ಸಮವಸ್ತ್ರ ಧರಿಸಿಕೊಂಡು ಪಾಕ್ ರಾಷ್ಟ್ರ ಗೀತೆ ಹಾಡಿದ ಈ ತಂಡಕ್ಕೆ ಬಾಬಾ ದರ್ಯಾ ಉದ್‌ದೀನ್ ಹೆಸರನ್ನು ಇರಿಸಲಾಗಿದೆ. ಬಾಬಾ ದರ್ಯಾ ಉದ್‌ದೀನ್ ಅವರು ಪ್ರಸಿದ್ಧ ಸಂತರಾಗಿದ್ದು ಅವರ ಹೆಸರಿನ ಪ್ರಾರ್ಥನಾ ಮಂದಿರವು ಗಂದರ್‌ಬಾಲ್‌ನಲ್ಲಿ ಇದೆ. ಈ ಪಂದ್ಯದ ಎದುರಾಳಿ ತಂಡದವರು ಬಿಳಿ ಸಮವಸ್ತ್ರ ಧರಿಸಿದ್ದರು.
ಪಂದ್ಯದ ಆರಂಭಕ್ಕೆ ಮುನ್ನ ವೀಕ್ಷಕ ವಿವರಣೆಕಾರನು ಮೈಕ್‌ನಲ್ಲಿ “ಈಗ ಗೌರವದ ಸಂಕೇತವಾಗಿ ಪಾಕಿಸ್ಥಾನೀ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ’ ಎಂದು ಘೋಷಿಸಿದ್ದಾನೆ. ಈ ಆಟದ ಮೈದಾನವು ಸ್ಥಳೀಯ ಪೊಲೀಸ್ ಠಾಣೆಗೆ ಹತ್ತಿರವೇ ಇದೆ.