ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಣಿವೆ ರಾಜ್ಯಕ್ಕೆ ಎರಡು ಹಂತದಲ್ಲಿ ಬರೋಬ್ಬರಿ 38 ಸಾವಿರ ಯೋಧರನ್ನು ನಿಯೋಜಿಸಲು ನಿರ್ಧರಿಸಿದೆ. ಈಗಾಗಲೇ 10 ಸಾವಿರ ಯೋಧರು ಕಣಿವೆ ಪ್ರದೇಶದಲ್ಲಿ ಭದ್ರತಾ ಕೆಲಸದಲ್ಲಿ ತೊಡಗಿದ್ದಾರೆ. ಉಳಿದ 28 ಸಾವಿರ ಯೋಧರ ಬಗ್ಗೆ ಕೇಂದ್ರ ಸರಕಾರ ಅಧಿಕೃತವಾಗಿ ಹೇಳಿಕೆ ನೀಡಲು ನಿರಾಕರಿಸುತ್ತಿದೆ. ಏತನ್ಮಧ್ಯೆ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಬೆದರಿಕೆಯ ಹಿನ್ನೆಲೆಯಲ್ಲಿ ಅಮರನಾಥ ಯಾತ್ರಾರ್ಥಿಗಳು, ಪ್ರವಾಸಿಗರು ಕೂಡಲೇ ರಾಜ್ಯವನ್ನು ಬಿಟ್ಟು ತೆರಳುವಂತೆ ಜಮ್ಮು-ಕಾಶ್ಮೀರ ಸರಕಾರ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರಲ್ಲಿ ಹಲವು ಪ್ರಶ್ನೆ, ಕುತೂಹಲ ಗರಿಗೆದರತೊಡಗಿದೆ. ಜಮ್ಮು ಕಾಶ್ಮೀರಕ್ಕೆ ಏಕಾಏಕಿ ಸಾವಿರಾರು ಮಂದಿ ಯೋಧರನ್ನು ನಿಯೋಜಿಸಲು ಕಾರಣ ಏನು, ಕಣಿವೆ ರಾಜ್ಯದಲ್ಲಿ ಏನಾಗುತ್ತಿದೆ ಎಂಬಿತ್ಯಾದಿ ಸಂಕ್ಷಿಪ್ತ ವಿವರ ಇಲ್ಲಿದೆ…
ಭದ್ರತೆ, ಕಾನೂನು ಸುವ್ಯವಸ್ಥೆಯಲ್ಲಿದ್ದ ಮೇಲೆ ಇಷ್ಟೊಂದು ಯೋಧರ ರವಾನೆ ಯಾಕೆ?
ಜಮ್ಮು-ಕಾಶ್ಮೀರದಲ್ಲಿನ ಭದ್ರತೆಯ ಪರಿಸ್ಥಿತಿ ಬಗ್ಗೆ ಜುಲೈ 24ರಂದು ರಾಜ್ಯಸಭೆಯಲ್ಲಿ ಕೇಂದ್ರದ ರಾಜ್ಯ ಖಾತೆ ಗೃಹ ಸಚಿವ ಜಿ.ಕೃಷ್ಣಾ ರೆಡ್ಡಿ ನೀಡಿರುವ ಮಾಹಿತಿ ಪ್ರಕಾರ, 2018ಕ್ಕಿಂತ ಈ ಬಾರಿ ಜಮ್ಮು-ಕಾಶ್ಮೀರದಲ್ಲಿ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಸುಧಾರಿಸಿದೆ ಎಂದು ತಿಳಿಸಿದ್ದರು.
ಗಡಿಯಲ್ಲಿ ಒಳನುಸುಳುವಿಕೆ ಶೇ.43ರಷ್ಟು ಕುಸಿತ ಕಂಡಿದೆ. ಸ್ಥಳೀಯರ ನೇಮಕಾತಿಯಲ್ಲಿಯೂ ಶೇ.40ರಷ್ಟು ಕುಸಿತವಾಗಿದೆ. ಉಗ್ರರ ಸಂಬಂಧಿತ ಘಟನೆಗಳು ಶೇ.28ರಷ್ಟು ಕುಸಿತವಾಗಿದೆ. ಶೇ.22ರಷ್ಟು ಉಗ್ರರನ್ನು ಹತ್ತಿಕ್ಕಲಾಗಿದೆ ಎಂದು ರೆಡ್ಡಿ ಅವರು ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದರು.
2019ರ ಜನವರಿಯಿಂದ ಜುಲೈ 14ರವರೆಗೆ ಜಮ್ಮು-ಕಾಶ್ಮೀರದಲ್ಲಿ 126 ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ರಾಜ್ಯದಲ್ಲಿ ಭದ್ರತೆ ಪರಿಸ್ಥಿತಿ ಸುಧಾರಿಸಿದ್ದರಿಂದ ಯೋಧರ ಸಂಖ್ಯೆಯನ್ನು ಕಡಿತಗೊಳಿಸುವ ಇಚ್ಛೆ ಹೊಂದಿರುವುದಾಗಿ ಕೇಂದ್ರ ಸರಕಾರ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರಕ್ಕೆ ಹೆಚ್ಚುವರಿಯಾಗಿ 38 ಸಾವಿರಕ್ಕೂ ಅಧಿಕ ಯೋಧರನ್ನು ನಿಯೋಜಿಸುವ ಕೇಂದ್ರದ ನಿರ್ಧಾರದ ಬಗ್ಗೆ ಕುತೂಹಲ ಮೂಡಿಸಲು ಕಾರಣವಾಗಿದೆ.
ಆಗಸ್ಟ್ 15ರಂದು ಕಣಿವೆ ರಾಜ್ಯದಲ್ಲಿ ಏನಾಗಬಹುದು?
*ಕೆಲವು ಮಾಹಿತಿ ಪ್ರಕಾರ, ಪಾಕಿಸ್ತಾನ ಬೆಂಬಲಿತ ಉಗ್ರರು ಭಾರೀ ಸಂಖ್ಯೆಯಲ್ಲಿ ನುಸುಳಲಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ ಕಣಿವೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಆದರೆ ಪಾಕಿಸ್ತಾನ ಪ್ರತಿಬಾರಿಯೂ ಉಗ್ರರನ್ನು ಗಡಿ ನಿಯಂತ್ರಣ ರೇಖೆಯ ಪ್ರದೇಶದಿಂದ ಕಣಿವೆ ರಾಜ್ಯಕ್ಕೆ ಕಳುಹಿಸುವ ಪ್ರಯತ್ನ ನಡೆಸುತ್ತಿರುವುದು ಹೊಸ ವಿಚಾರವಲ್ಲ ಎಂದು ವರದಿ ವಿವರಿಸಿದೆ.
* ಮತ್ತೊಂದು ಲೆಕ್ಕಚಾರದ ಪ್ರಕಾರ, ಈ ವರ್ಷದ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದಂದು ಜಮ್ಮು-ಕಾಶ್ಮೀರದ ಪ್ರತಿ ಪಂಚಾಯತ್ ನಲ್ಲೂ ತ್ರಿವರ್ಣ ಧ್ವಜ ಹಾರಿಸುವ ಸಿದ್ಧತೆ ನಡೆಸಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮಕೈಗೊಳ್ಳುತ್ತಿರುವುದಾಗಿ ತಿಳಿಸಿದೆ.
*ಸ್ವಾತಂತ್ರ್ಯ ದಿನಾಚರಣೆಯಂದು ದಾಳಿ ನಡೆಸುವುದನ್ನು ತಡೆಯಲು ಈಗಾಗಲೇ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಈಗಾಗಲೇ ಜಮ್ಮು ಕಾಶ್ಮೀರದಲ್ಲಿ 90 ಸಾವಿರ ಮಂದಿ ಕೇಂದ್ರ ಮೀಸಲು ಪಡೆ ಯೋಧರು ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ 38 ಸಾವಿರ ಯೋಧರನ್ನು ರವಾನಿಸಿದೆ. ಇದು ಆಗಸ್ಟ್ 15ರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಎಂದು ವರದಿ ವಿವರಿಸಿದೆ.
*ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸಿದ್ಧತೆ ನಡೆಸುತ್ತಿದೆ ಎಂಬುದಾಗಿಯೂ ವಿಶ್ಲೇಷಿಸಲಾಗುತ್ತಿದೆ.