Advertisement

ಕೋವಿಡ್ 19 ಕಾಟದ ನಡುವೆ ಉಗ್ರ ಸಂಚು

05:44 PM Apr 10, 2020 | Sriram |

ಹೊಸದಿಲ್ಲಿ: ಮನುಕುಲವೇ ಕೋವಿಡ್ 19 ಹೊಡೆತಕ್ಕೆ ತಲ್ಲಣಿಸಿ ಅದರ ವಿರುದ್ಧ ಹೋರಾಟದಲ್ಲಿ ತೊಡಗಿದ್ದರೆ ನೆರೆಯ ಪಾಕಿಸ್ಥಾನ ಮಾತ್ರ ತನ್ನ ಕುತ್ಸಿತ ಬುದ್ಧಿಗೆ ಅಂಟಿಕೊಂಡು ವಿಷಕಾರುವ ಕೆಲಸ ಮುಂದುವರಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶದ ಭದ್ರತಾ ಪಡೆಗಳು ಕೋವಿಡ್ 19ಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸ್ಥಳೀಯಾಡಳಿತಕ್ಕೆ ನೆರವಾಗುತ್ತಿರುವ ನಡುವೆ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕ್‌ ಮೂಲದ ಉಗ್ರ ಸಂಘಟನೆಗಳು ಲಾಂಚ್‌ ಪ್ಯಾಡ್‌ ಸಕ್ರಿಯಗೊಳಿಸಿವೆ.

Advertisement

ಈ ಉಗ್ರ ಸಂಘಟನೆಗಳು ಬರೋಬ್ಬರಿ 230 ಉಗ್ರರನ್ನು ಮುಂದಿನ ಕೆಲವು ವಾರ ಗಳು ಅಥವಾ ತಿಂಗಳಲ್ಲಿ ಭಾರತದೊಳಕ್ಕೆ ನುಸುಳಿಸಲು ಎಲ್ಲ ಸಿದ್ಧತೆ ನಡೆಸಿವೆ ಎಂಬ ಆಘಾತಕಾರಿ ಮಾಹಿತಿ ಈಗ ಹೊರಬಿದ್ದಿದೆ.

ಕಳೆದ ರವಿವಾರ ಸೇನಾ ಕಮಾಂಡೋ ಗಳಿಂದ ಹತ್ಯೆಯಾದ ಐವರು ಉಗ್ರರು ಇದೇ ರೀತಿ ಒಳನುಸುಳಿದ ಮೊದಲ ತಂಡದ ಸದಸ್ಯರು. ಲಾಂಚ್‌ ಪ್ಯಾಡ್‌ಗಳಲ್ಲಿ ಇನ್ನೂ ಬಹಳಷ್ಟು ಉಗ್ರರು ಭಾರತದೊಳಕ್ಕೆ ಪ್ರವೇಶಿಸಲು ಕಾಯುತ್ತಿದ್ದಾರೆ ಎಂದು ಜಮ್ಮು-ಕಾಶ್ಮೀರ ಪೊಲೀಸ್‌ ಮುಖ್ಯಸ್ಥ ದಿಲ್‌ಬಾಘ… ಸಿಂಗ್‌ ಮಾಹಿತಿ ನೀಡಿದ್ದಾರೆ.

ನುಸುಳಲು ಸಜ್ಜು
ಲಷ್ಕರ್‌, ಜೈಶ್‌-ಎ-ಮೊಹಮ್ಮದ್‌ ಮತ್ತು ಹಿಜ್ಬುಲ್‌ ಮುಜಾಹಿದೀನ್‌ಗೆ ಸೇರಿರುವ 160 ಉಗ್ರರು ಎಲ್‌ಒಸಿ ಮೂಲಕ ಒಳ ನುಸುಳಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಅಂತಾರಾಷ್ಟ್ರೀಯ ಗಡಿಯ ಜಮ್ಮು ವಲಯದಲ್ಲಿ ಸುಮಾರು 70 ಮಂದಿ ಸಶಸ್ತ್ರ ಮತ್ತು ತರಬೇತಾದ ಉಗ್ರರು ಬೇಲಿಯಿಲ್ಲದ ನದೀತೀರ ಮತ್ತು ನಾಲೆಗಳ ಮೂಲಕ ಒಳನುಸುಳಲು ಯೋಜನೆ ಹಾಕಿದ್ದಾರೆ ಎನ್ನಲಾಗಿದೆ. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಸಮಾನಿ-ಭಿಂಬೇರ್‌ ಮತ್ತು ದುಧಿ°ಯಾಲ್‌ ಲಾಂಚ್‌ ಪ್ಯಾಡ್‌ಗಳಲ್ಲಿ ಠಿಕಾಣಿ ಹೂಡಿರುವ ಜೈಶ್‌ ಉಗ್ರರು ಜಮ್ಮು-ಕಾಶ್ಮೀರದೊಳಕ್ಕೆ ನುಸುಳಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಹೇಗಾದರೂ ಒಳನುಸುಳಿ, ಕಣಿವೆ ರಾಜ್ಯದಲ್ಲಿ ರಕ್ತದೋಕುಳಿ ಹರಿಸಬೇಕು ಎನ್ನುವುದು ಈ ಉಗ್ರರ ಉದ್ದೇಶವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next