ಶೃಂಗೇರಿ: ಕಾಶ್ಮೀರದ ತಿತ್ವಾಲ್‌ನ ಶ್ರೀ ಶಾರದಾ ಪೀಠದ ದಕ್ಷಿಣಾ ಸಮಿತಿ ಸದಸ್ಯರು ಸಂಗ್ರಹಿಸಿದ ಅಯೋಧ್ಯೆಯಲ್ಲಿ ಸಮರ್ಪಿಸಲಿರುವ ಕಾಶ್ಮೀರದ ತ್ರಿವೇಣಿ ಸಂಗಮ ತಿತ್ವಾಪಾಣಿಯ ಗಂಗಾ, ಸರಸ್ವತಿ ಹಾಗೂ ಮಧುಮತಿ ನದಿಗಳ ಪವಿತ್ರ ಜಲಕುಂಭಕ್ಕೆ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ಪೂಜೆ ಸಲ್ಲಿಸಿದರು.
ಸಮಿತಿ ಸದಸ್ಯರು ಮಂಗಳವಾರ ಬೆಳಗ್ಗೆ ಶ್ರೀ ಶಾರದಾ ಪೀಠದ ಗುರುಭವನದಲ್ಲಿ ಉಭಯ ಜಗದ್ಗುರುಗಳಾದ ಶ್ರೀಭಾರತೀ ತೀರ್ಥ ಮಹಾಸ್ವಾಮೀಜಿ ಹಾಗೂ ವಿಧುಶೇಖರ ಸ್ವಾಮೀಜಿಗಳ ಆಶೀರ್ವಾದ ಪಡೆದು ಕಾಶ್ಮೀರದ ತ್ರಿವಳಿ ನದಿಯಿಂದ ತಂದ ಜಲದ ಬಗ್ಗೆ ವಿವರಿಸಿದರು.
ಕಾಶ್ಮೀರ ಶ್ರೀಶಾರದಾ ಪೀಠದ ರಕ್ಷಣಾ ಸಮಿತಿಯ ಸದಸ್ಯರಾದ ರವೀಂದರ್ ಪಂಡಿತ್, ಮಣಿಶ್ರೀ ಗಣೇಶ್, ಪಿ.ಟಿ.ವೆಂಕಟರಮಣನ್ ಮತ್ತು ಮಂಜುನಾಥ್ ಶರ್ಮ ಇದ್ದರು.
ಶ್ರೀ ಶಾರದಾ ಸರ್ವಜ್ಞ ಪೀಠ ಪಾಕ್‌ಸೇನೆಯಿಂದ ಅತಿಕ್ರಮಣ
ಈ ಸಂದರ್ಭ ಮಾತನಾಡಿದ ರವೀಂದರ್ ಪಂಡಿತ್, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿತ ಶ್ರೀ ಶಾರದಾ ಸರ್ವಜ್ಞ ಪೀಠವನ್ನು ಪಾಕ್ ಸೇನೆ ಅತಿಕ್ರಮಿಸಿದೆ. ಪೀಠದ ಒಂದು ಪಾರ್ಶ್ವ ಧ್ವಂಸ ಮಾಡಿದ್ದು, ಅಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಿಸುವುದರ ಮೂಲಕ ಶ್ರದ್ಧಾಕೇಂದ್ರವನ್ನು ಪ್ರವಾಸಿ ತಾಣ ಮಾಡುವ ಹುನ್ನಾರ ಮಾಡಿದೆ. ಈ ವಿಚಾರವಾಗಿ ಉಭಯ ರಾಷ್ಟ್ರಮಟ್ಟದಲ್ಲಿ ಇದಕ್ಕೆ ತಡೆ ಹಿಡಿಯುವಂತೆ ಶೃಂಗೇರಿ ಜಗದ್ಗುರುಗಳಲ್ಲಿ ವಿನಂತಿ ಮಾಡಲಾಗಿದೆ ಎಂದರು.
ತಿತ್ವಾಲ್‌ನಿಂದ 70 ಕಿ.ಮೀ. ದೂರದಲ್ಲಿರುವ ಪಾಕ್ ವಶದಲ್ಲಿರುವ ಸರ್ವಜ್ಞ ಪೀಠದ ಪಾರ್ಶ್ವವನ್ನು ಧ್ವಂಸ ಮಾಡಿದ್ದು, ಪಾಕ್ ಸೇನಾ ಧಿಕಾರಿ ಬ್ರಿಗೇಡಿಯರ್ ತನ್ವೀರ್ ಅಹಮದ್ ಹೊಸ ಕಟ್ಟಡವನ್ನು ನಿರ್ಮಿಸಿ ಉದ್ಘಾಟಿಸಿದ್ದಾರೆ. ಅಜಾದ್ ಕಾಶ್ಮೀರದ ಸುಪ್ರೀಂಕೋರ್ಟ್ ನಮ್ಮ ಸರ್ವಜ್ಞ ಪೀಠದ ಜಾಗವನ್ನು ಆಧ್ಯಾತ್ಮಿಕ ಮತ್ತು ಶ್ರದ್ಧಾಕೇಂದ್ರ ಎಂದು ಗುರುತಿಸಿದೆ. ಧಾರ್ಮಿಕ ವಿಧಿ- ವಿಧಾನ ಬಿಟ್ಟು ಬೇರೆ ಉದ್ದೇಶಕ್ಕೆ ಮಾರ್ಪಾಡು ಮಾಡಬಾರದು ಎಂದು 2018ರ ಜನವರಿಯಲ್ಲಿ ಆದೇಶ ಮಾಡಿದೆ. ನಿಯಂತ್ರಣ ರೇಖೆಯಿಂದ ಆಚೆಗೆ ಭೇಟಿ ನೀಡಲು ರಕ್ತ ಸಂಬಂಧಿ ಭಾರತೀಯರಿಗೆ ಮಾತ್ರ ಅವಕಾಶವಿದೆ. ಹಿಂದೂ ನಿವಾಸಿಗಳು ಇಲ್ಲಿ ಯಾರೂ ಇಲ್ಲದಿರುವುದರಿಂದ ಈ ಕಾನೂನನ್ನು ಮಾರ್ಪಾಡು ಮಾಡಬೇಕು. ಕರ್ತಾರ್‌ಪುರ ಕಾರಿಡಾರ್‌ನಂತೆ ಭಕ್ತರು ಇಲ್ಲಿ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ನಾವು ಉಭಯ ದೇಶಗಳ ನಾಗರಿಕ ಸಮಿತಿ ಮೂಲಕ ಮಾತುಕತೆ ಮಾಡಿಕೊಂಡು ಮುಂದುವರಿಯುತ್ತಿದ್ದೇವೆ. ಈ ಬಗ್ಗೆ ಭಾರತ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.