Advertisement

ಮೋದಿ, ಶಾ ಚಾಣಕ್ಯ ನಡೆ;ಕಲಂ 370ರ ರದ್ದತಿಗೆ ಕೇಂದ್ರ ಬಳಸಿದ್ದು ಆರ್ಟಿಕಲ್ 370(3) ಅಸ್ತ್ರ!

05:37 PM Aug 06, 2019 | Nagendra Trasi |

ನವದೆಹಲಿ:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಆರ್ಟಿಕಲ್(ಕಲಂ) 370ನೇ ವಿಧಿ ಮತ್ತು ಆರ್ಟಿಕಲ್ 35ಎ ರದ್ದುಗೊಳಿಸುವ ಐತಿಹಾಸಿಕ ನಿರ್ಣಯವನ್ನು ಅಮಿತ್ ಶಾ ರಾಜ್ಯಸಭೆಯಲ್ಲಿ ಮಂಡಿಸಿದ್ದರು. ಕುತೂಹಲದ ಸಂಗತಿ ಏನೆಂದರೆ ಕೇಂದ್ರ ಸರಕಾರ ದಿಢೀರನೆ ಕಲಂ 370 ಅನ್ನು ಹೇಗೆ ರದ್ದುಪಡಿಸಿತು..ಅದಕ್ಕೆ ಉಪಯೋಗಿಸಿದ ತಂತ್ರಗಾರಿಕೆ ಏನು? ಇದನ್ನು ಪ್ರಶ್ನೆ ಮಾಡಬಹುದಾ..ಸಂವಿಧಾನಬದ್ಧವಾಗಿ ಸರಿಯೇ ಎಂಬ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ ಅದು ಹೇಗೆ ಸಾಧ್ಯವಾಯ್ತು ಎಂಬ ವಿವರ ಇಲ್ಲಿದೆ…

Advertisement

ಆರ್ಟಿಕಲ್ 370 ಸೆಕ್ಷನ್ 3ರಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ರಾಷ್ಟ್ರಪತಿ ಯಾವ ಸಮಯದಲ್ಲಿ ಬೇಕಾದರೂ ನಿಷ್ಕ್ರಿಯಗೊಳಿಸಬಹುದು! ಈ ಕಲಂ ಆಧಾರದ ಹಿನ್ನೆಲೆಯಲ್ಲಿಯೇ ಏಪ್ರಿಲ್-ಮೇ ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ  ಬಹುಕಾಲದ ಬೇಡಿಕೆ ಕಲಂ 370 ವಿಧಿಯನ್ನು ರದ್ದುಪಡಿಸುವ ಭರವಸೆಯನ್ನು ಬಿಜೆಪಿ ನೀಡಿತ್ತು.

ಕಲಂ 370(3)ರ ಪ್ರಕಾರ ರಾಷ್ಟ್ರಪತಿ ಅಥವಾ ಸಾರ್ವಜನಿಕ ಪ್ರಕಟಣೆ ಮೂಲಕ ಈ 370ನೇ ಕಲಂ ಅನ್ನು ನಿಷ್ಕ್ರಿಯಗೊಳಿಸಬಹುದು ಅಥವಾ ಜಾರಿಗೊಳಿಸಬಹುದು ಇಲ್ಲವೇ ಬದಲಾವಣೆ ಮಾಡಬಹುದಾಗಿದೆ ಎಂದು ವಿವರಿಸಿದೆ.

ಈ ನಿಟ್ಟಿನಲ್ಲಿ ಸಂವಿಧಾನಬದ್ಧವಾಗಿ ರಾಷ್ಟ್ರಪತಿಗೆ ನೀಡಿರುವ ಅಧಿಕಾರವನ್ನು ಉಪಯೋಗಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಲಂ 370, ಕಲಂ 35ಎ ಅನ್ನು ರದ್ದುಗೊಳಿಸಿದೆ.

ಕಲಂ 370 ಅನ್ನು ರದ್ದಯಗೊಳಿಸಬೇಕಿದ್ದರೆ ಲೋಕಸಭೆ, ರಾಜ್ಯಸಭೆಯಲ್ಲಿ ಬಹುಮತದ ಅಗತ್ಯವಿರುತ್ತದೆ. ಅಲ್ಲದೇ ಆರ್ಟಿಕಲ್ 368ಕ್ಕೆ ಸಂವಿಧಾನದಲ್ಲಿ ತಿದ್ದುಪಡಿ ಮಾಡಬೇಕಾಗಿತ್ತು. ಆದರೆ ಕೇಂದ್ರ ಸರಕಾರ ತುಂಬಾ ಚಾಣಕ್ಯ ನಡೆಯಿಂದ ಆರ್ಟಿಕಲ್ 370ಅನ್ನು ರದ್ದು ಮಾಡುವ ಮೂಲಕ ತಿದ್ದುಪಡಿ ಹಾದಿಯನ್ನು ಸುಗಮಗೊಳಿಸಿಕೊಂಡಿದೆ ಎಂದು ವರದಿ ವಿಶ್ಲೇಷಿಸಿದೆ.

Advertisement

ಕೇಂದ್ರ ಸರಕಾರದ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಅಮಿತ್ ಶಾ, ಪಂಡಿತ್ ಜವಾಹರಲಾಲ್ ನೆಹರು 1952 ಮತ್ತು 1962ರಲ್ಲಿ ಕೈಗೊಂಡ ನಿರ್ಧಾರದ ಹಾದಿಯಲ್ಲಿಯೇ ನರೇಂದ್ರ ಮೋದಿ ಸರಕಾರ ಕ್ರಮ ಕೈಗೊಂಡಿದೆ. 1952ರಲ್ಲಿ ನೆಹರು ಮತ್ತು ಜಮ್ಮು-ಕಾಶ್ಮೀರದ ಅಂದಿನ ಶೇಕ್ ಅಬ್ದುಲ್ಲಾ ಜತೆ ದೆಹಲಿ ಒಪ್ಪಂದ ಮಾಡಿಕೊಂಡಿದ್ದರು. ಈ ಪ್ರಕಾರ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ ಅವಕಾಶ ಮಾಡಿಕೊಟ್ಟಿದ್ದರು ಎಂದರು.

ಆರ್ಟಿಕಲ್‌ 35 ಎ: ಸಂವಿಧಾನದ ಪರಿಚ್ಛೇದ 35ಎ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ನಿಯಮ ಸ್ಥಾನಮಾನವನ್ನು ಒದಗಿಸುತ್ತಿದೆ. ಅದರಲ್ಲೂ ಮುಖ್ಯವಾಗಿ ಹೊರ ರಾಜ್ಯದವರು ಜಮ್ಮು ಕಾಶ್ಮೀರದಲ್ಲಿ ಖಾಯಂ ಆಗಿ ನೆಲೆಸುವುದನ್ನು ಈ ಕಾಯ್ದೆ ನಿಷೇಧಿಸಿದೆ. ಅಲ್ಲದೇ ಹೊರ ರಾಜ್ಯದವರಿಗೆ ಕಾಶ್ಮೀರದಲ್ಲಿ ಸ್ಥಿರಾಸ್ತಿ ಖರೀದಿ, ಸರ್ಕಾರಿ ಉದ್ಯೋಗ, ಸ್ಕಾಲರ್‌ ಶಿಪ್‌ ಮತ್ತು ಇತರೆ ನೆರವುಗಳನ್ನೂ ಈ ಪರಿಚ್ಛೇದ ನಿಷೇಧಿಸಿದೆ.

ಆರ್ಟಿಕಲ್‌ 370: ಈ ವಿಧಿಯು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುತ್ತದೆ. ಭಾರತೀಯ ಸಂವಿಧಾನದ ಎಲ್ಲವಿಚಾರಗಳು ಇತರ ರಾಜ್ಯಗಳಿಗೆ ಅನ್ವಯವಾದರೂ, ಜಮ್ಮು ಮತ್ತು ಕಾಶ್ಮೀರದ ಮಟ್ಟಿಗೆ ಆಗುವುದಿಲ್ಲ. ಆ ರಾಜ್ಯವು ಭಾರತದ ಅವಿಭಾಜ್ಯ ಅಂಗ ಎಂದು ವಿಧಿಯಲ್ಲಿ ಹೇಳಿದ್ದರೂ, ಹಣಕಾಸು, ರಕ್ಷಣೆ, ವಿದೇಶಾಂಗ, ಸಂವಹನ ಹೊರತುಪಡಿಸಿ, ಉಳಿದೆಲ್ಲ ತೀರ್ಮಾನಗಳನ್ನು ಕಾಶ್ಮೀರ ಸರ್ಕಾರ ಸ್ವತಂತ್ರವಾಗಿ ಕೈಗೊಳ್ಳಬಹುದಾಗಿದೆ.

ಇನ್ನು ಅಲ್ಲಿನ ಜನತೆ ಭಾರತದ ಬೇರೆ ಕಡೆಗಳಲ್ಲಿ ಆಸ್ತಿ ಖರೀದಿ ಮಾಡಬಹುದಾಗಿದ್ದು, ಬೇರೆ ರಾಜ್ಯದ ಜನರು ಕಾಶ್ಮೀರದಲ್ಲಿ ಆಸ್ತಿ ಹೊಂದುವಂತಿಲ್ಲ. ಕಾಶ್ಮೀರದಲ್ಲಿ ಯುದ್ಧ ಸಂದರ್ಭದ ತುರ್ತುಸ್ಥಿತಿ ಹೊರತಾಗಿ ತುರ್ತುಪರಿಸ್ಥಿತಿ ಘೋಷಿಸುವ ಯಾವುದೇ ಹಕ್ಕನ್ನು ಕೇಂದ್ರ ಸರ್ಕಾರ ಹೊಂದಿರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next