ಕಾಸ್ ಗಂಜ್(ಉತ್ತರಪ್ರದೇಶ): ಕಳೆದ ಐದು ವರ್ಷಗಳ ಹಿಂದೆ ವಿವಾಹನಾಗಿದ್ದ ವ್ಯಕ್ತಿಗೆ ಸ್ಥಳೀಯ ಪೊಲೀಸರು ಬಲವಂತವಾಗಿ ಠಾಣೆಯಲ್ಲಿ ಮತ್ತೊಂದು ವಿವಾಹ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸ್ ಗಂಜ್ ಪೊಲೀಸ್ ವರಿಷ್ಠಾಧಿಕಾರಿ ತನಿಖೆ ನಡೆಸುವಂತೆ ಆದೇಶ ಹೊರಡಿಸಿರುವ ಪ್ರಕರಣ ಉತ್ತರಪ್ರದೇಶದಲ್ಲಿ ನಡೆದಿದೆ.
ಏನಿದು ಘಟನೆ:
ಕಾಸ್ ಗಂಜ್ ಜಿಲ್ಲೆಯ ವ್ಯಕ್ತಿ ಗುರುಗ್ರಾಮ್ ನಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದು, ಈ ಸಂದರ್ಭದಲ್ಲಿ ಸಹೋದ್ಯೋಗಿಯೊಬ್ಬಳ ಜತೆ ಸಂಪರ್ಕ ಬೆಳೆದಿತ್ತು. ಆಕೆ ತನ್ನ ಮನೆಯ ಕಷ್ಟ, ತಂದೆ ತೀರಿ ಹೋದ ವಿಷಯ ತಿಳಿಸಿದ ನಂತರ ಈ ವ್ಯಕ್ತಿ ಆಕೆಗೆ ಆರ್ಥಿಕವಾಗಿ ನೆರವು ನೀಡುವ ಭರವಸೆ ನೀಡಿದ್ದ.
ಈ ವ್ಯಕ್ತಿಗೆ ಈಗಾಗಲೇ ವಿವಾಹವಾಗಿದ್ದು, ಐದು ವರ್ಷದ ಮಗಳಿದ್ದಾಳೆ. ಆದರೆ ಡಿಸೆಂಬರ್ 11ರಂದು ಯುವತಿಯ ತಾಯಿ ಈತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನ ಪ್ರಕಾರ, ಈ ವ್ಯಕ್ತಿ ತನ್ನ ಮಗಳನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಮೋಸ ಮಾಡಿರುವುದಾಗಿ ತಿಳಿಸಿದ್ದಾಳೆ. ನಂತರ ಪೊಲೀಸರು ವ್ಯಕ್ತಿಗೆ ಠಾಣೆಗೆ ಬರುವಂತೆ ಮೊಬೈಲ್ ಕರೆ ಮಾಡಿ ತಿಳಿಸಿದ್ದರು. ಅದರಂತೆ ಆತ ಠಾಣೆಗೆ ಬಂದಾಗ ಪೊಲೀಸರು ಬಲವಂತದಿಂದ ಯುವತಿ ಜತೆ ವಿವಾಹ ಮಾಡಿಸಿದ್ದರು. ಈ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಚರ್ಚೆಗೆ ಎಡೆಮಾಡಿಕೊಟ್ಟಿರುವುದಾಗಿ ವರದಿ ವಿವರಿಸಿದೆ.
ಈ ವಿಚಾರ ತಿಳಿಯುತ್ತಿದ್ದಂತೆಯೇ ಮೊದಲ ಪತ್ನಿ ಪೊಲೀಸರ ವಿರುದ್ಧ ತಿರುಗಿ ಬಿದ್ದಿದ್ದು, ತನ್ನ ಗಂಡನನ್ನು ಬಲವಂತವಾಗಿ ಠಾಣೆಗೆ ಕರೆಯಿಸಿ ಮದುವೆ ಮಾಡಿಸುವ ಮೂಲಕ ನನ್ನ ಕುಟುಂಬದ ಸಂತೋಷನ್ನು ಹಾಳು ಮಾಡಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಅಷ್ಟೇ ಅಲ್ಲ ಗಂಡನ ವಿರುದ್ಧ ಮುನಿಸುಕೊಂಡು ಆಕೆ ತವರು ಮನೆಗೆ ತೆರಳಿದ್ದು, ತಾನು ಆತ್ಮಹತ್ಯೆಗೆ ಶರಣಾಗುವುದಾಗಿ ಬೆದರಿಕೆ ಹಾಕಿರುವುದಾಗಿ ವರದಿ ತಿಳಿಸಿದೆ.
ಠಾಣೆಯಲ್ಲಿ ನಡೆದ ವಿವಾಹದಿಂದ ಇಕ್ಕಟ್ಟಿಗೆ ಸಿಲುಕಿರುವ ವ್ಯಕ್ತಿ ಹಾಗೂ ಆತನ ತಂದೆ ಕಾಸ್ ಗಂಜ್ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ, ಈ ಪ್ರಕರಣದಲ್ಲಿ ತಾವು ಮಧ್ಯಪ್ರವೇಶಿಸಿ, ಉನ್ನತ ಮಟ್ಟದ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಈ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿರುವುದಾಗಿ ಸರ್ಕಲ್ ಇನ್ಸ್ ಪೆಕ್ಟರ್ ಅಂಚಲ್ ಸಿಂಗ್ ಚೌಹಾಣ್ ತಿಳಿಸಿದ್ದು, ಈ ವಿಚಾರದಲ್ಲಿ ಯಾರೇ ತಪ್ಪು ಮಾಡಿದ್ದರು ಅವರನ್ನು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.