Advertisement

ಕಾಸರಗೋಡು: ಮತ್ತೆ 3 ಮಂದಿಗೆ ಸೋಂಕು ದೃಢ

11:07 AM Apr 11, 2020 | Sriram |

ಕಾಸರಗೋಡು: ಕೇರಳ ರಾಜ್ಯದಲ್ಲಿ ಶುಕ್ರವಾರ 7 ಹೊಸ ಕೋವಿಡ್ 19 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಮೂವರು ಕೋವಿಡ್ 19 ಬಾಧಿತರಾಗಿದ್ದಾರೆ.

Advertisement

ಕೋವಿಡ್ 19 ವೈರಸ್‌ ಸೋಂಕಿನಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 27 ಮಂದಿ ಗುಣಮುಖರಾಗಿ ಶುಕ್ರವಾರ ಡಿಸಾcರ್ಜ್‌ ಆಗಿದ್ದಾರೆ. ಕಾಸರಗೋಡು ಜಿಲ್ಲೆಯ 17 ಮಂದಿ, ಕಣ್ಣೂರು-6, ಕಲ್ಲಿಕೋಟೆ – 2, ಎರ್ನಾಕುಳಂ ಮತ್ತು ತೃಶ್ಶೂರು ಜಿಲ್ಲೆಯಲ್ಲಿ ತಲಾ ಒಬ್ಬರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಈ ವರೆಗೆ ಒಟ್ಟು 124 ಮಂದಿ ಗುಣಮುಖರಾಗಿದ್ದಾರೆ. ಈ ಪೈಕಿ 8 ವಿದೇಶಿಯರೂ ಸೇರಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ 24 ಮಂದಿ ಗುಣಮುಖರಾಗಿದ್ದಾರೆಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಟೀಚರ್‌ ಹೇಳಿದ್ದಾರೆ.

ಕಾಸರಗೋಡಿನಲ್ಲಿ 3, ಕಣ್ಣೂರು ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ತಲಾ ಇಬ್ಬರಿಗೆ ಕೋವಿಡ್ 19 ವೈರಸ್‌ ಬಾಧಿಸಿರುವುದು ಶುಕ್ರವಾರ ದೃಢಪಟ್ಟಿದೆ. ಈ ಪೈಕಿ ಮಲಪ್ಪುರಂ ಜಿಲ್ಲೆಯ ಇಬ್ಬರು ನಿಜಾಮುದ್ದೀನ್‌ ಸಮಾವೇಶದಲ್ಲಿ ಭಾಗವಹಿಸಿದವರು. ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ಒಟ್ಟು ಐವರು ಕೋವಿಡ್ 19 ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದರಿಂದ ರೋಗ ಬಾಧಿಸಿದೆ.

ಕೇರಳದಲ್ಲಿ ಈ ವರೆಗೆ ಒಟ್ಟು 364 ಮಂದಿಗೆ ಕೋವಿಡ್ 19 ಪಾಸಿಟಿವ್‌ ಆಗಿದ್ದು, ಸದ್ಯ ವಿವಿಧ ಆಸ್ಪತ್ರೆಗಳಲ್ಲಿ 238 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 1,29,751 ಮಂದಿ ನಿಗಾದಲ್ಲಿದ್ದು, ಈ ಪೈಕಿ 730 ಜನರು ಆಸ್ಪತ್ರೆಗಳಲ್ಲಿದ್ದಾರೆ. ಶುಕ್ರವಾರ 126 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. 13,339 ವ್ಯಕ್ತಿಗಳ ಸ್ಯಾಂಪಲ್‌ ಕಳುಹಿಸಲಾಗಿದೆ. ಇದರಲ್ಲಿ 12,335 ಸ್ಯಾಂಪಲ್‌ಗ‌ಳು ನೆಗೆಟಿವ್‌ ಆಗಿವೆ.

ಕಾಸರಗೋಡು ಜಿಲ್ಲೆಯ ಮುಳಿಯಾರು ಗ್ರಾ.ಪಂ.ನ ಪೊವ್ವಲ್‌ ನಿವಾಸಿಗಳಾಗಿರುವ 52 ಮತ್ತು 24 ವರ್ಷದ ಇಬ್ಬರು ಮಹಿಳೆಯರಿಗೆ, ಕಾಸರಗೋಡು ನಗರದ ತಳಂಗರೆ ನಿವಾಸಿ 17 ವರ್ಷದ ಯುವಕನಿಗೆ ಸೋಂಕು ತಗುಲಿರುವುದು ಖಚಿತವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ| ಎ.ವಿ. ರಾಮದಾಸ್‌ ತಿಳಿಸಿದರು.

Advertisement

55 ಕೇಸು ದಾಖಲು
ಲಾಕ್‌ಡೌನ್‌ ಆದೇಶ ಉಲ್ಲಂಘನೆಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ 55 ಕೇಸ್‌ ದಾಖಲಾಗಿವೆ. 97 ಮಂದಿಯನ್ನು ಬಂಧಿಸಲಾಗಿದೆ. 25 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಠಾಣೆಯಲ್ಲಿ 5, ಕುಂಬಳೆ 4, ಕಾಸರಗೋಡು 2, ವಿದ್ಯಾನಗರ 5, ಬದಿಯಡ್ಕ 4, ಆದೂರು 2, ಬೇಡಗಂ 1, ಮೇಲ್ಪರಂಬ 9, ಬೇಕಲ 2, ಹೊಸದುರ್ಗ 1, ನೀಲೇಶ್ವರ 1, ಚಂದೇರ 6, ಚೀಮೇನಿ 2, ವೆಳ್ಳರಿಕುಂಡ್‌ 4, ಚಿತ್ತಾರಿಕಲ್‌ 4, ರಾಜಪುರಂ 3 ಕೇಸುಗಳು ದಾಖಲಾಗಿವೆ. ಈ ವರೆಗೆ ಜಿಲ್ಲೆಯಲ್ಲಿ 660 ಕೇಸುಗಳು ದಾಖಲಾಗಿವೆ. 1,065 ಮಂದಿಯನ್ನು ಬಂಧಿಸಲಾಗಿದ್ದು, 404 ವಾಹನಗಳನ್ನು ವಶಪಡಿಸಲಾಗಿದೆ.

ಮಾಲೋಂ ಕಸಬ ಶಾಲೆಗೆ ಭೇಟಿ
ಜಿಲ್ಲೆಯಲ್ಲಿ ಕೋವಿಡ್‌ 19 ಪ್ರತಿರೋಧ ಚಟುವಟಿಕೆಗಳ ಏಕೀಕರಣ ಹೊಣೆಗಾರಿಕೆಯ ವಿಶೇಷ ಅಧಿಕಾರಿ ಅಲ್ಕೇಶ್‌ ಕುಮಾರ್‌ ಶರ್ಮ ಮತ್ತು ಕಂದಾಯ ಇಲಾಖೆ ಸಿಬಂದಿ ಶುಕ್ರವಾರ ವೆಸ್ಟ್‌ ಏಳೇರಿ ಗ್ರಾ.ಪಂ.ನ ಮಾಲೋಂ ಕಸಬ ಶಾಲೆಯಲ್ಲಿ ಇತರ ರಾಜ್ಯಗಳ ಕಾರ್ಮಿಕರಿಗಾಗಿ ಸಿದ್ಧಪಡಿಸಲಾದ ಸೌಲಭ್ಯ ಕೇಂದ್ರಕ್ಕೆ ಭೇಟಿ ನೀಡಿದರು. ವಿಶೇಷ ಸಮುದಾಯ ಅಡುಗೆ ಮನೆ, ಇತರ ರಾಜ್ಯಗಳ ಕಾರ್ಮಿಕರ ವಸತಿ ಸಹಿತ ಸೌಲಭ್ಯಗಳು ಇಲ್ಲಿವೆ. ಉಪಜಿಲ್ಲಾಧಿಕಾರಿ ಅರುಣ್‌ ಕೆ. ವಿಜಯನ್‌, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ಕೇಶವನ್‌, ವೆಳ್ಳರಿಕುಂಡ್‌ ತಹಶೀಲ್ದಾರ್‌ ಪಿ.ವಿ. ಕುಂಞಿಕಣ್ಣನ್‌, ಲೈಸನ್‌ ಅಧಿಕಾರಿ ತುಳಸೀಧರನ್‌ ಜತೆಗಿದ್ದರು. ಝಾರ್ಖಂಡ್‌, ಬಿಹಾರ,ರಾಜಸ್ಥಾನ, ಆಸ್ಸಾಂ, ಪಶ್ಚಿಮ ಬಂಗಾಲದ ನೂರಾರು ಮಂದಿ ಇಲ್ಲಿ ಆಸರೆ ಪಡೆದಿದ್ದಾರೆ. ಲಾಕ್‌ ಡೌನ್‌ ಆದೇಶ ಜಾರಿಗೊಂಡಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ ಇವರಿಗೆ ಈ ವ್ಯವಸ್ಥೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next