ಕಾಸರಗೋಡು: ಇಲ್ಲಿನ ಚೂರಿ ಎಂಬಲ್ಲಿ ಮದ್ರಸಾ ಅಧ್ಯಾಪಕರೊಬ್ಬರನ್ನು ದುಷ್ಕರ್ಮಿಗಳ ತಂಡವೊಂದು ಬರ್ಬರವಾಗಿ ಇರಿದು ಹತ್ಯೆಗೈದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ.
ಮಸೀದಿಯ ಉಸ್ತಾದ್ ಕೊಡಗು ನಿವಾಸಿ ರಿಯಾಸ್(30)ಎನ್ನುವವರನ್ನು ಕೋಣೆಗೆ ನುಗ್ಗಿ ಹತ್ಯೆಗೈಯಲಾಗಿದೆ.
ಮಸೀದಿ ಸಮೀಪ ಇದ್ದ ಒಂದು ಕೊಠಡಿಯಲ್ಲಿ ರಿಯಾಸ್ ಮಲಗಿದ್ದು, ಇನ್ನೊಂದು ಕೊಠಡಿಯಲ್ಲಿ ಖತೀಬ್ ಅಬ್ದುಲ್ ಆಸೀಸ್ ಮುಸ್ಲಿಯಾರ್ ಅವರು ಮಲಗಿದ್ದರು. ದಾಳಿ ನಡೆದ ಬಳಿಕ ರಿಯಾಸ್ ಬೊಬ್ಬಿಟ್ಟಿದ್ದು, ಖತೀಬ್ ಎಚ್ಚರಗೊಂಡು ಹೊರ ಬರುವಷ್ಟರಲ್ಲಿ ದುಷ್ಕರ್ಮಿಗಳು ಮಾರಕ ದಾಳಿ ನಡೆಸಿ ಪರಾರಿಯಾಗಿದ್ದರು. ಕೂಡಲೇ ಖತೀಬ್ ಮೈಕ್ ಮೂಲಕ ದಾಳಿ ನಡೆದಿರುವುದನ್ನು ತಿಳಿಸಿದರು. ಸಮೀಪವಾಸಿಗಳು ಆಗಮಿಸಿ ರಿಯಾಸ್‌ರನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರಾದರೂ ಮಾರ್ಗಮದ್ಯದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ಬಳಿಕ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಕಾಸರಗೋಡು ವಿಧಾನಸಭಾ ವ್ಯಾಪ್ತಿಯಲ್ಲಿ ಮುಸ್ಲಿಂ ಲೀಗ್ ಹರತಾಳ ನಡೆಸುತ್ತಿದೆ. ಕಾಸರಗೋಡು ನಗರದಲ್ಲಿ ಬಂದ್ ವಾತಾವರಣ ಕಂಡು ಬಂದಿದ್ದು, ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದಿಲ್ಲ. ಎಸ್‌ಡಿಪಿಐ ಪ್ರತಿಭಟನಾ ಮೆರವಣಿಗೆ ನಡೆಸಿದೆ.
ಮುಂಜಾಗ್ರತಾ ಕ್ರಮವಾಗಿ ಬಸ್ಸುಗಳು ಸಂಚಾರ ನಡೆಸುತ್ತಿಲ್ಲ. ಜನರು ತೀವ್ರವಾಗಿ ಪರದಾಡಬೇಕಾಗಿದೆ ಎಂದು ವರದಿಯಾಗಿದೆ. ಸ್ಥಳದಲ್ಲಿ ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಾಗಿದೆ.
ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ.