Advertisement
ಕಾಸರಗೋಡು: ಸಾಕಷ್ಟು ಐತಿಹಾಸಿಕ ಹಿನ್ನೆಲೆಯಿರುವ ಹತ್ತು ಹಲವು ಭಾಷೆಗಳ ಸಂಗಮ ಭೂಮಿಯಾದ ಕಾಸರಗೋಡು ಹಲವು ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡ ಸಂಪನ್ನ ಪ್ರದೇಶ. ದೇಶಕ್ಕೇ ಮಾದರಿಯಾಗಿರುವ ಅಥವಾ “ಮಿನಿ ಭಾರತ’ ಎಂದೇ ಗುರುತಿಸಿ ಕೊಂಡಿರುವ ಇಲ್ಲಿನ ಜನಜೀವನ, ಆಚಾರ, ವಿಚಾರಗಳು, ನಡೆ, ನುಡಿ ಎಲ್ಲವು ಭಿನ್ನ. ಒಂದೇ ಪ್ರದೇಶದಲ್ಲಿ ಎಲ್ಲೂ ಸಿಗದಷ್ಟು ಭಾಷಾ ವೈವಿಧ್ಯ. ಆರಾಧನಾಲಯಗಳಿಲ್ಲದ ಒಂದೇ ಒಂದು ಪ್ರದೇಶ ದುರ್ಬೀನಿಟ್ಟು ನೋಡಿದರೂ ಕಾಣಸಿಗದು. ಇಂತಹ ಸಾಂಸ್ಕೃತಿಕ ವೈವಿಧ್ಯದ ಮಣ್ಣಿನಲ್ಲಿ ಸಾಕಷ್ಟು ಪ್ರವಾಸಿ ಕೇಂದ್ರಗಳಿದ್ದರೂ, ನಿರೀಕ್ಷೆಯ ಮಟ್ಟಕ್ಕೆ ಬೆಳೆದಿಲ್ಲ. ಪ್ರವಾಸಿ ಕೇಂದ್ರಗಳ ಸಮಗ್ರ ಅಭಿವೃದ್ಧಿಗೆ ಸಾಧ್ಯತೆಗಳಿದ್ದರೂ ಸಂಬಂಧಪಟ್ಟವರ ನಿರ್ಲಕ್ಷÂ ಮನೋಭಾವ ಅಥವಾ ಇಚ್ಛಾಶಕ್ತಿ ಇಲ್ಲದಿರುವುದರಿಂದ ಕಾಸರಗೋಡಿನ ಪ್ರವಾಸಿ ಕೇಂದ್ರಗಳು ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗಿಲ್ಲ ಎಂಬುದು ದುರಂತವೇ ಸರಿ.
Related Articles
Advertisement
ರಾಣಿಪುರಂ: ಚಾರಣಿಗರ ಸ್ವರ್ಗ ಚಾರಣಿಗರ ಸ್ವರ್ಗ ರಾಣಿಪುರಂ ಪ್ರವಾಸಿ ಕೇಂದ್ರದಲ್ಲಿ ಸಾಕಷ್ಟು ಅವಕಾಶಗಳಿದ್ದರೂ ನಿರೀಕ್ಷೆಯಂತೆ ಅಭಿವೃದ್ಧಿ ಸಾಧ್ಯವಾಗಿಲ್ಲ. ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲೂ ಸಾಧ್ಯವಾಗಿಲ್ಲ. ರಾಣಿಪುರಂ ಅರಣ್ಯ ಪ್ರದೇಶವನ್ನು ಹೊಕ್ಕಿದರೆ ದಾರಿ ತೋರದೆ ವಾಪಸಾಗಲು ಬಹಳಷ್ಟು ಸಂಕಷ್ಟ ಅನುಭವಿಸಬೇಕಾಗುತ್ತದೆ. ಹಲವು ಬಾರಿ ರಾಣಿಪುರಂಗೆ ಹೋಗಿದ್ದ ಪ್ರವಾಸಿಗರು ಅರಣ್ಯದೊಳಗೆ ಹೋದ ಬಳಿಕ ಹಿಂದೆ ಬರಲು ಸಾಧ್ಯವಾಗದೆ ಮೂರು ನಾಲ್ಕು ದಿನ ಅರಣ್ಯದಲ್ಲೇ ಉಳಿದುಕೊಂಡು ಸಾಹಸದಿಂದ ಹೊರಬಂದ ಘಟನೆಗಳೂ ನಡೆದಿತ್ತು. ಈ ಪ್ರದೇಶದಲ್ಲಿ ದೂರವಾಣಿ ಸಂಪರ್ಕ ಕೂಡಾ ಲಭಿಸುವುದಿಲ್ಲ. ಪ್ರವಾಸಿಗರಿಗೆ ಉಳಿದುಕೊಳ್ಳಲು ವ್ಯವಸ್ಥೆಯಿದ್ದರೂ, ಈ ಕಟ್ಟಡದಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಿಲ್ಲ. ನವಿಲುಗಳು ಗುಂಪುಗೂಡಿ ಆಗಮಿಸುವ ಮುಳಿ ಯಾರು- ಆದೂರು-ಮಯಿಲಾಟುಪ್ಪಾರ, ವಿದ್ಯಾನಗರ ಮೊದಲಾದ ಪ್ರದೇಶಗಳಲ್ಲಿ ಸೌಕರ್ಯ ಕಲ್ಪಿಸಿದರೆ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗಬಹುದು. ಈ ಪ್ರದೇಶದಲ್ಲಿ ನವಿಲು ಸಾಕಷ್ಟು ಇದ್ದು, ಈ ಪ್ರದೇಶವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ದಿಪಡಿಸ ಬಹುದು. ಆದರೆ ಈ ಪ್ರದೇಶವನ್ನು ಅಭಿವೃದ್ಧಿಪಡಿಸಲು ಸಂಬಂಧಪಟ್ಟವರಿಗೆ ಇಚ್ಛಾಶಕ್ತಿ ಬೇಕು. ಕೋಟೆಗಳ ನಾಡು
ಕಾಸರಗೋಡು ಜಿಲ್ಲೆಯಲ್ಲಿ ಹಲವು ಕೋಟೆಗಳಿದ್ದು, ಅವುಗಳ ಪೈಕಿ ಬೇಕಲ ಕೋಟೆ ತಾಯಿ ಕೋಟೆ ಎಂದೇ ಪ್ರಸಿದ್ಧಿ. ಇದರ ಜತೆಯಲ್ಲಿ ಕಾಸರಗೋಡಿನಲ್ಲಿ ಹಲವು ಕೋಟೆಗಳಿವೆ. ಆರಿಕ್ಕಾಡಿ, ಚಂದ್ರಗಿರಿ, ಪೊವ್ವಲ್ ಕೋಟೆಗಳು ಪ್ರವಾಸಿ ಕೇಂದ್ರಗಳಲ್ಲಿ ಸೇರ್ಪಡೆ ಗೊಳಿಸ ಲಾಗಿದೆ. ಆದರೆ ಈ ಕೋಟೆ ಯನ್ನು ಅಭಿವೃದ್ಧಿ ಪಡಿಸಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕೆಲವು ದುರಸ್ತಿ ಕೆಲಸ ಬಿಟ್ಟರೆ ಪ್ರವಾಸಿಗರನ್ನು ಆಕರ್ಷಿಸುವಂತಹ ಕೆಲಸ ನಡೆದಿಲ್ಲ. ಇದಲ್ಲದೇ ಇನ್ನೂ ಹಲವು ಕೋಟೆಗಳಿವೆ. ಕಾಸರಗೋಡು ಕೋಟೆ, ಹೊಸದುರ್ಗ ಕೋಟೆ, ಮಧೂರಿನ ಮಾಯಿಲ ಕೋಟೆ, ಬಂದ್ಯೋಡ್ ಅಡ್ಕದ ಕೋಟೆ ಮೊದಲಾದವು ಇನ್ನೂ ಅಭಿವೃದ್ಧಿ ಕಂಡಿಲ್ಲ. ಮಂಜೇಶ್ವರ ಸುಂದರ ಪ್ರದೇಶ
ದೇಶದಲ್ಲೇ ಅಪೂರ್ವವಾದ ಮಂಜೇಶ್ವರ ಜೈನ ಬಸದಿ, ಮಂಜೇಶ್ವರ ಸಮುದ್ರ ಕಡಲ ಕಿನಾರೆ, ಆದೂರು ಪರಪ್ಪ ಮೀಸಲು ಅರಣ್ಯ, ಸಾಹಸಿಗಳಿಗೆ ಸ್ವರ್ಗವಾದ ಕೋಟಂಚೇರಿ ಹಿಲ್, ಅನಂತಪುರ ಸರೋವರ ಕ್ಷೇತ್ರ ಮೊದಲಾದ ಪ್ರವಾಸಿ ಕೇಂದ್ರಗಳಿವೆ. ಈ ಕೇಂದ್ರಗಳಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಂಬಂಧಪಟ್ಟ ಪ್ರವಾಸೋದ್ಯಮ ಇಲಾಖೆ ಮುಂದಾಗಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯ ಸರಕಾರ ಆದ್ಯತೆ ನೀಡುತ್ತಿರುವಾಗ ಜಿಲ್ಲೆಯಲ್ಲಿ ಇದರ ಯಾವುದೇ ಚಟುವಟಿಕೆಗಳು ಸಕ್ರಿಯಗೊಂಡಿಲ್ಲ. ವಲಿಯಪರಂಬ ಟೂರಿಸಂ-ಕಾಯಲ್ ಟೂರಿಸಂ (ಹಿನ್ನೀರು ಪ್ರವಾಸೋ ದ್ಯಮ) ಅಭಿವೃದ್ಧಿ ಇದೀಗ ಮರೀಚಿಕೆಯಾಗಿದೆ. ಪ್ರವಾಸಿಗರನ್ನು ಆಕರ್ಷಿಸುವ ಪೈವಳಿಕೆ ಪೊಸಡಿಗುಂಪೆಯ ಅಭಿವೃದ್ಧಿ ಇನ್ನೂ ಸಾರ್ಥಕಗೊಂಡಿಲ್ಲ. ಸಮುದ್ರ ತಳದಿಂದ 1,500 ಮೀಟರ್ ಎತ್ತರದಲ್ಲಿರುವ ಪೊಸಡಿಗುಂಪೆಯಲ್ಲಿ ಸಿನಿಮಾ, ಕಿರುಚಿತ್ರಗಳ ಚಿತ್ರೀಕರಣ ನಡೆದಿದ್ದರೂ ಬೆಟ್ಟದ ಮೇಲೆ ತಲುಪಲು ರಸ್ತೆ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ. ಗಾಳಿಯಿಂದ ವಿದ್ಯುತ್ ಉತ್ಪಾದಿಸಲು ಯೋಗ್ಯವಾದ ಈ ಪ್ರದೇಶ ಅಧಿಕಾರಿಗಳ ಅವಗಣನೆಯಿಂದಾಗಿ ಅಭಿವೃದ್ಧಿಯಿಂದ ಹಿಂದುಳಿದಿದೆ.ಆದೂರು ಪರಪ್ಪದ ರಿಸರ್ವ್ ಅರಣ್ಯ ಕೇಂದ್ರೀಕರಿಸಿ ಸರಕಾರಿ ಅತಿಥಿಗೃಹ ಕಾರ್ಯಾಚರಿಸುತ್ತಿದೆ. ಇದನ್ನು ಸದುಪಯೋಗಪಡಿಸಿ ಪ್ರವಾಸೋದ್ಯಮ ಅಭಿವೃದ್ಧಿಗೆ ಉಪಯೋಗಿಸಲಾಗುವುದು ಎಂದು ಈ ಹಿಂದೆಯೇ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇತಿಹಾಸ ಪ್ರಸಿದ್ಧವಾದ ಪೊವ್ವಲ್‌ಕೋಟೆ ಹಾಗೂ ಚಂದ್ರಗಿರಿ ಕೋಟೆಯ ದುರಸ್ತಿ ಕಾಮಗಾರಿ ಗಳನ್ನು ಆರ್ಕಿಯೋಲಜಿಕಲ್ ಸರ್ವೇ ಆಫ್ ಇಂಡಿಯಾ ನಡೆಸಿದ್ದರೂ ಇದನ್ನು ಪ್ರವಾಸಿಗಳಿಗೆ ಸದುಪಯೋಗ ಪಡಿಸಲು ಸಾಧ್ಯವಾಗಿಲ್ಲ. ಆರಿಕ್ಕಾಡಿಯ ಕಾಂಡ್ಲಾ ಪ್ರವಾಸಿ ಕೇಂದ್ರ ಕೇಂದ್ರೀಕರಿಸಿ ಪ್ರವಾಸೋದ್ಯಮದಲ್ಲಿ ಅನೇಕ ಸಾಧ್ಯತೆಗಳಿವೆ. ಈ ಎಲ್ಲಾ ಸಾಧ್ಯತೆಗಳನ್ನು ಸಾಕಾರಗೊಳಿಸಬೇಕಿದ್ದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇಚ್ಛಾಶಕ್ತಿಯನ್ನು ತೋರಬೇಕಾಗಿದೆ. – ಪ್ರದೀಪ್ ಬೇಕಲ್