ಕಾಸರಗೋಡು: ಪೋಕ್ಸೋ ಪ್ರಕರಣದಲ್ಲಿ ಬಂಧಿತನಾದ ಆರೋಪಿಯನ್ನು ವೈದ್ಯಕೀಯ ತಪಾಸಣೆಗೆ ತಂದಾಗ ಆಸ್ಪತ್ರೆಯಿಂದ ಪರಾರಿಯಾಗಲು ಯತ್ನಿಸಿದ್ದು, ಕೈಕೋಳ ಸಹಿತ ಓಡುತ್ತಿದ್ದ ಆರೋಪಿಯನ್ನು ಖಾಸಗಿ ಚಾನೆಲ್‌ನ ಕೆಮರಾಮೆನ್ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಶನಿವಾರ ರಾತ್ರಿ 8.30ಕ್ಕೆ ಕಾಸರಗೋಡು ಜನರಲ್ ಆಸ್ಪತ್ರೆ ಸಮೀಪದಲ್ಲಿ ಈ ಘಟನೆ ಸಂಭವಿಸಿದೆ. ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಅಬ್ದುಲ್ ಆಲಿಯಾಸ್ ಶಾಫಿ (28) ಆಸ್ಪತ್ರೆಯಿಂದ ಪರಾರಿಯಾಗುತ್ತಿದ್ದಾಗ ಹಿಡಿಯಲಾಯಿತು.
2022ರ ಸೆಪ್ಟಂಬರ್ ತಿಂಗಳಲ್ಲಿ 17ರ ಹರೆಯದ ತರುಣಿಯನ್ನು ಅಪಹರಿಸಿ ಕರ್ನಾಟಕದ ರಹಸ್ಯ ಕೇಂದ್ರದಲ್ಲಿ ಇರಿಸಿ ಕಿರುಕುಳ ನೀಡಿದ್ದಾಗಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಕಾಸರಗೋಡು ಜನರಲ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕೊಂಡೊಯ್ಯಲಾಗಿತ್ತು. ವೈದ್ಯರ ಸಲಹೆಯಂತೆ ಒಂದು ಕೈಕೋಳವನ್ನು ಕಳಚುತ್ತಿದ್ದಂತೆ ಅಲ್ಲಿದ್ದ ಮೂವರು ಪೊಲೀಸರನ್ನು ತಳ್ಳಿ ಪರಾರಿಯಾಗಿದ್ದ. ಕೋಳ ಸಹಿತ ವ್ಯಕ್ತಿ ಓಡುತ್ತಿರುವುದನ್ನು ಗಮನಿಸಿದ ಖಾಸಗಿ ಚಾನೆಲ್‌ನ ಕೆಮರಾಮೆನ್ ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾದರು.