Advertisement

ಶಾಸ್ತ್ರೀಯ ಸೊಗಸು, ಭಕ್ತಿ ಪಾರಮ್ಯ ಅನಾವರಣಗೊಳಿಸಿದ ಸಂಗೀತ ಕಛೇರಿ

08:15 PM Feb 02, 2018 | Karthik A |

ಕಾಸರಗೋಡು: ವಿದ್ಯಾನಗರದ ಶ್ರೀ ಗೋಪಾಲಕೃಷ್ಣ ಸಂಗೀತ ವಿದ್ಯಾಲಯದ 21ನೇ ವಾರ್ಷಿಕೋತ್ಸವದ ಅಂಗವಾಗಿ ಜ. 21ರಂದು ನಗರದ ಲಲಿತ  ಕಲಾಸದನದಲ್ಲಿ ಆಯೋಜಿಸಲಾಗಿದ್ದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ರಸಿಕರಿಗೆ ರಸಾನುಭೂತಿಯನ್ನು ನೀಡಿತು. ಕಚೇರಿಯನ್ನು ನೀಡಿದ ಕಲಾವಿದ ವಿದ್ವಾನ್‌ ಚೆಂಗೋಟೈ ಹರಿಹರ ಸುಬ್ರಹ್ಮಣ್ಯನ್‌ ಅಯ್ಯರ್‌ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು.

Advertisement

ಮೊದಲಿಗೆ ಚುಟುಕಾದ ಆಲಾಪನೆಯಿಂದ ಚಾರುಕೇಶಿ ರಾಗದ ಲಾಲ್‌ಗ‌ುಡಿಯವರ “ಇನ್ನಂ ಎನ್ನ ಮನ ಮದಿಯಾದ’ ಎಂಬ ಆದಿತಾಳದ ವರ್ಣವನ್ನು ಆಕರ್ಷಕವಾಗಿ ಪ್ರಸ್ತುತಪಡಿಸಿ, ಮುತ್ತುಸ್ವಾಮಿ ದೀಕ್ಷಿತರ ಚಕ್ರವಾಕ ರಾಗದ ಆದಿ ತಾಳದ ‘ಗಜಾನನಯುತಂ ಗಣೇಶ್ವರಂ’ ಕೃತಿಯನ್ನು ನೇರವಾಗಿ ಆಯ್ದುಕೊಂಡು ಸುಂದರ ನಿರೂಪಣೆಯೊಂದಿಗೆ ಚೇತೋಹಾರಿಯಾದ ಕಲ್ಪನಾ ಸ್ವರಗಳಿಂದ, ಲೆಕ್ಕಾಚಾರಯುಕ್ತ ಮೇಲಕ್ಕೊಯ್ದು ಸಭಿಕರಿಂದ ಕರತಾಡನಗೊಂಡಿತು. ಲಲಿತ ರಾಗದ ಮಿಶ್ರ ಛಾಪು ತಾಳದ ‘ನನ್ನು ಭ್ರೋಮ ಲಲಿತ’ ಕೃತಿಗೆ ನೀಡಿದ ರಾಗ ಲಾಲಿತ್ಯ ಪೂರ್ಣವಾಗಿದ್ದು ಶ್ಯಾಮಾ ಶಾಸ್ತ್ರಿಗಳ ಕೃತಿಯ ಪ್ರಸ್ತುತಿಯಂತು ನೆರವಲ್‌ ಸ್ವರ ಪ್ರಸ್ತಾರಗಳಿಂದ ಚೆನ್ನಾಗಿ ಮೂಡಿಬಂತು. ಅಠಾಣ ರಾಗದ ಊತುಕ್ಕಾಡು ವೆಂಕಟ ಸುಬ್ಬ ಅಯ್ಯರ್‌ರವರ “ಮಧುರ ಮಧುರ ವೇಣುಗಾನ’ ವೆಂಬ ಕೀರ್ತನೆ ರಾಗಾಲಾಪನೆಯೊಂದಿಗೆ ಮಧುರವಾಗಿತ್ತು. ವಿಜಯ ವಿಠಲ ದಾಸರ ಕೀರವಾಣಿ ರಾಗದ “ನಿನ್ನ ನಂಬಿದೆ ರಾಘವೇಂದ್ರ’ ಕೀರ್ತನೆಗೆ ಮೊದಲು ನೀಡಿದ ವಿಸ್ತೃತ ರಾಗಾಲಾಪನೆ ಸ್ಥಾಯೀ ಪೂರ್ಣತೆಯಿಂದ ರಂಜಿಸಿ “ಭಾರತೀಶ ಪದಾಬ್ಜ ಭೃಂಗ’ ಎಂಬಲ್ಲಿ ನೀಡಿದ ನೆರವಲ್‌ ಪ್ರಯೋಗ ವಿವಿಧ ಪ್ರಕಾರಗಳಲ್ಲಿ ವಿಶಿಷ್ಟವಾಗಿ ಹೊರಹೊಮ್ಮಿ ಸ್ವರ ಪ್ರಸ್ತಾರಗಳಿಂದ ಶ್ರೀಮಂತವಾಯಿತು.

ತ್ಯಾಗರಾಜ ಸ್ವಾಮಿಗಳ “ವಿನತಾ ಸುಖವಾ’ ರಚನೆ ಜಯಂತ ಸೇನ ರಾಗದಲ್ಲಿ ವಿದ್ವತ್‌ಪೂರ್ಣ ಸ್ವರ ಪ್ರಸ್ತಾರಗಳಿಂದ ಆದಿ ತಾಳದಲ್ಲಿ ಆಕರ್ಷಣೀಯವಾಗಿ ಕಲಾವಿದರ ಕಂಠದಿಂದ ಚುರುಕಾಗಿ ಮೂಡಿ ಬಂದಿತು. ಕಾರ್ಯಕ್ರಮದ ಪ್ರಧಾನ ರಾಗವಾಗಿ “ಕಲ್ಯಾಣಿ’ಯನ್ನು ಆಯ್ದುಕೊಂಡ ಕಲಾವಿದರು ಸುದೀರ್ಘ‌ ವಿನ್ಯಾಸದ ಭದ್ರ ಸ್ಥಾಯಿತ್ವದ ನೆಲೆಗಟ್ಟಿನ ರಾಗಾಲಾಪನೆ ಮಾಡಿದರು. ಅದನ್ನನುಸರಿಸಿ ಚೌಕ ಕಾಲದ ಪುರಂದರ ದಾಸರ “ಶರಣೆಂಬೆ ವಾಣಿ ಪೊರೆಯೇ ಕಲ್ಯಾಣಿ’ ಕೀರ್ತನೆಯನ್ನು ಭಾವಪೂರ್ಣವಾಗಿ ಹಾಡಿದರು. ಜೊತೆಯಲ್ಲಿ ಕಲ್ಪನಾ ಸ್ವರಗಳ ಸಂಯೋಜನೆ – ಮನೋಧರ್ಮದ ಅನಾವರಣ ಉತ್ತುಂಗತೆಯನ್ನು ಸಾರಿತು.

ಕೊನೆಯ ಹಂತದಲ್ಲಿ ಶೋತೃಗಳನ್ನು ರಂಜಿಸಿದ್ದು ದಿವ್ಯನಾಮ ಸಂಕೀರ್ತನೆ, ಅಭಂಗ ಮತ್ತು ದೇವರ ನಾಮಗಳು. “ವನಮಾಲಿ ರಾಧಾರಮಣ’ ಸಿಂಧು ಬೈರವಿ ರಾಗದ “ಗೋವಿಂದ ಮಣತುಂ’ ಮತ್ತು ನಾರಾಯಣ ಸ್ಮರಣೆ, ಕೃಷ್ಣಾಮೃತಗಳನ್ನು ತಾನು ಹಾಡುವುದರೊಂದಿಗೆ ಸಭಿಕರನ್ನು ತನ್ನನ್ನು ಅನುಸರಿಸಿ ಹಾಡುವಂತೆ ಪ್ರೇರೇಪಿಸಿ ಹಾಡಿಸಿದ್ದಂತೂ ಅವಿಸ್ಮರಣೀಯ. ಚಪ್ಪಾಳೆಯೊಂದಿಗೆ ಸಭಾಂಗಣದೊಳಗೆ ಮೊಳಗಿದ್ದು ಕೃಷ್ಣ, ರಾಮ, ನಾರಾಯಣ ನಾಮಸ್ಮರಣೆ. ಶೋತೃ ಮತ್ತು ಕಲಾವಿದರ ನಾದ ಸಂಗಮ ತನ್ಮಯತೆಯಿಂದ ಸಾಗಿತು. ಆಕರ್ಷಕ ತಿಲ್ಲಾನದೊಂದಿಗೆ ಕಚೇರಿ ಸಂಪನ್ನಗೊಂಡಿತು. ಪಿಟೀಲಿನಲ್ಲಿ ತಿರುವಿಳ ವಿಜು ಎಸ್‌.ಆನಂದ್‌ ಶ್ರೇಷ್ಠ ಮಟ್ಟದ ಸಾಥ್‌ ನೀಡಿ ರಂಜಿಸಿದರು.

ಮೃದಂಗ ವಾದನದಲ್ಲಿ ಬಾಲಕೃಷ್ಣ ಕಾಮತ್‌ ಕೊಚ್ಚಿ, ಘಟಂನಲ್ಲಿ ಶ್ರೀಜಿತ್‌ ವೆಳ್ಳತಂಜೂರು ಮತ್ತು ಮೋರ್ಸಿಂಗ್‌ನಲ್ಲಿ ಗೋವಿಂದ ಪ್ರಸಾದ್‌ ಪಯ್ಯನ್ನೂರು ಅವರ ಪೂರಕವಾದ ಸಹಕಾರ ಮತ್ತು ವಿಶಿಷ್ಟ ತನಿ ಆವರ್ತನ ಗಮನ ಸೆಳೆಯಿತು. ಸಂಗೀತ ವಿದುಷಿ ಉಷಾ ಈಶ್ವರ ಭಟ್‌ ನೇತೃತ್ವದಲ್ಲಿ ಮುಂಜಾನೆಯಿಂದ ಸಂಜೆಯ ತನಕ ಜರಗಿದ ಈ ವಾರ್ಷಿಕೋತ್ಸವಕ್ಕೆ ಊರು ಪರವೂರುಗಳಿಂದ ಅಧಿಕ ಸಂಖ್ಯೆಯಲ್ಲಿ ಶೋತೃಗಳು ಆಗಮಿಸಿದ್ದರು. ವಿದ್ಯಾರ್ಥಿಗಳು ನೀಡಿದ ಸಂಗೀತ ಆರಾಧನೆ ಕಾರ್ಯಕ್ರಮ ಗಮನ ಸೆಳೆಯಿತು.

Advertisement

– ಪ್ರದೀಪ್‌ ಬೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next