ಕಾಸರಗೋಡು: ಚಂದೇರ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಆಫೀಸರ್ ಕರಿವೆಳ್ಳೂರು ಪಲಿಯೇರಿ ಕೊವ್ವಲ್ ನಿವಾಸಿ ಪಿ. ದಿವ್ಯಶ್ರೀ (33) ಅವರನ್ನು ತಲ್ವಾರ್‌ನಿಂದ ಕಡಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪತಿ ರಾಜೇಶ್ (33)ನನ್ನು ವಳಪಟ್ಟಣಂ ಪೊಲೀಸರು ಬಂಧಿಸಿದ್ದಾರೆ.
ಬೈಕ್‌ನಲ್ಲಿ ಬಂದ ರಾಜೇಶ್ ತನ್ನ ಪತ್ನಿ ದಿವ್ಯಶ್ರೀ ಅವರನ್ನು ತಲ್ವಾರ್‌ನಿಂದ ಕಡಿದು, ತಡೆಯಲು ಬಂದ ದಿವ್ಯಶ್ರೀ ಅವರ ತಂದೆ ವಾಸು (65)ಅವರಿಗೂ ತಲ್ವಾರ್‌ನಿಂದ ಕಡಿದು ಗಂಭೀರ ಗಾಯಗೊಳಿಸಿದ ಪ್ರಕರಣದಲ್ಲಿ ರಾಜೇಶ್‌ನನ್ನು ಬಂಧಿಸಲಾಗಿದೆ.
ಕೊಲೆ ನಡೆದ ಬಳಿಕ ಆರೋಪಿ ತನ್ನ ಬೈಕನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ. ಆತನಿಗೆ ಪೊಲೀಸರು ವ್ಯಾಪಕ ಶೋಧ ನಡೆಸಿದಾಗ ಗುರುವಾರ ರಾತ್ರಿ ಕಣ್ಣೂರು ಪುದಿಯ ತಿರುವಿನ ಬಾರ್ ಪರಿಸರದಿಂದ ವಳಪಟ್ಟಣಂ ಪೊಲೀಸರು ಬಂಧಿಸಿದರು. ಅನಂತರ ಆತನನ್ನು ಪಯ್ಯನ್ನೂರು ಪೊಲೀಸರಿಗೆ ಹಸ್ತಾಂತರಿಸಿದರು.
ದಿವ್ಯಶ್ರೀ ಹಾಗೂ ರಾಜೇಶ್ ಅವರದ್ದು ಪ್ರೇಮ ವಿವಾಹವಾಗಿತ್ತು. ರಾಜೇಶ್ ಪೈಂಟಿಂಗ್ ಕಾರ್ಮಿಕನಾಗಿದ್ದಾನೆ. ಮದುವೆ ಬಳಿಕ ಅವರಿಬ್ಬರ ಮಧ್ಯೆ ವೈಮನಸ್ಸು ಉಂಟಾಗಿತ್ತು. ಅದರಿಂದಾಗಿ ದಿವ್ಯಶ್ರೀ ತಂದೆ ಮನೆಗೆ ವಾಸ್ತವ್ಯ ಬದಲಾಯಿಸಿದ್ದರು. ಅಲ್ಲದೆ ವಿವಾಹ ವಿಚ್ಛೇದನಕ್ಕೆ ಅವರು ಕಣ್ಣೂರು ಕುಟುಂಬ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ದಿವ್ಯಶ್ರೀ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು. ದಿವ್ಯಶ್ರೀ ಅವರು ಪುತ್ರ 7ನೇ ತರಗತಿ ವಿದ್ಯಾರ್ಥಿ ಆಶಿಕ್, ಸಹೋದರಿ ಪ್ರವಿತಾ, ತಂದೆ ವಾಸು ಅವರನ್ನು ಅಗಲಿದ್ದಾರೆ. ತಿರುವ ನಂತಪುರ ಪೊಲೀಸ್ ಬೆಟಾಲಿಯನ್‌ನಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ್ದ ದಿವ್ಯಶ್ರೀ ವರ್ಕಿಂಗ್ ಅರೇಂಜ್‌ಮೆಂಟ್ ಪ್ರಕಾರ ಒಂದೂವರೆ ವರ್ಷದ ಹಿಂದೆ ಚಂದೇರ ಠಾಣೆಗೆ ವರ್ಗಾವಣೆಗೊಂಡಿದ್ದರು