ಹೊಸದಿಲ್ಲಿ/ಕಾಸರಗೋಡು: ಲೋಕಸಭೆ ಚುನಾವಣೆ ವೇಳೆ ಕೇರಳದಲ್ಲಿ ಬೋಗಸ್ ಮತದಾನ ನಡೆದಿದೆ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ 4 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಕೇಂದ್ರ ಚುನಾವಣ ಆಯೋಗ ಆದೇಶಿಸಿದೆ.
ಗುರುವಾರ ಈ ಕುರಿತು ನಿರ್ದೇಶನ ನೀಡಿದ ಆಯೋಗವು ಕಾಸರಗೋಡಿನ 3 ಮತ್ತು ಕಣ್ಣೂರಿನ ಒಂದು ಮತಗಟ್ಟೆಯಲ್ಲಿ ಮೇ 19ರಂದು ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮರು ಮತದಾನ ನಡೆಸಲಾಗುವುದು ಎಂದು ಹೇಳಿದೆ.
ಕಾಸರಗೋಡು ಲೋಕಸಭಾ ಕ್ಷೇತ್ರದ ಕಲ್ಯಾಶೆÏೕರಿಯ ಪಿಲಾತ್ತಾರ (ಬೂತ್ ನಂಬ್ರ 19), ಪುದಿಯಂಗಾಡಿ ಜುಮಾಅತ್ ಎಚ್ಎಸ್ ನಾರ್ತ್ ಬ್ಲಾಕ್ (ಬೂತ್ ನಂಬ್ರ 69), ಜುಮಾಅತ್ ಎಚ್ಎಸ್ ಸೌತ್ ಬ್ಲಾಕ್(ಬೂತ್ ನಂಬ್ರ 70), ಕಣ್ಣೂರು ತಳಿಪರಂಬ ಪಾಂಬುರುತ್ತಿ ಮಾಪ್ಪಿಳ್ಳ ಎಯುಪಿಎಸ್(ಬೂತ್ ನಂಬ್ರ 166)ನಲ್ಲಿ ಮರುಮತದಾನ ನಡೆಯಲಿದೆ.
ಶುಕ್ರವಾರ ಸಂಜೆಯವರೆಗೂ ಚುನಾವಣ ಪ್ರಚಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಎ. 23ರಂದು ಈ ಮತಗಟ್ಟೆಗಳಲ್ಲಿ ನಡೆದ ಮತದಾನವನ್ನು ರದ್ದು ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.
ಚುನಾವಣ ವೀಕ್ಷಕರು ಸಲ್ಲಿಸಿರುವ ವರದಿಗಳು, ಆಯಾ ಜಿಲ್ಲೆಯ ಮತಗಟ್ಟೆ ಅಧಿಕಾರಿಗಳು ನೀಡಿದ ವರದಿಗಳು ಹಾಗೂ ಎಲ್ಲ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಗಣಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.