ಕಾಸರಗೋಡು: ಕಾಸರಗೋಡು ರೈಲು ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ 5 ಕೋಟಿ ರೂ. ಮಂಜೂರು ಮಾಡಲಾಗಿದೆ.
ಕಾಸರಗೋಡು-ಕಾಂಞಂಗಾಡು ರಾಜ್ಯ ಹೆದ್ದಾರಿ ನಿರ್ಮಾಣ ಅಂಗವಾಗಿ ಕಾಸರಗೋಡು ರೈಲು ನಿಲ್ದಾಣ ಮತ್ತು ಪ್ರದೇಶವನ್ನು ಅಭಿವೃದ್ಧಿಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್‌ವೀರ್ ಚಂದ್ ಅಧ್ಯಕ್ಷತೆಯಲ್ಲಿ ನಡೆದ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಯ ಸಭೆಯಲ್ಲಿ ಈ ಯೋಜನೆಗೆ ತಾಂತ್ರಿಕ ಮಂಜೂರಾತಿ ನೀಡಿದೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ. ರಾಜ್ ಮೋಹನ್, ಹಣಕಾಸು ಅಧಿಕಾರಿ ಎಂ. ಶಿವಪ್ರಕಾಶ್, ಲೋಕೋಪಯೋಗಿ ಕಟ್ಟಡ ನಿರ್ಮಾಣ ವಿಭಾಗ ಕಾರ್ಯಕಾರಿ ಎಂಜಿನಿಯರ್ ಮುಹಮ್ಮದ್ ಮುನೀರ್, ಪಿ. ವಿನೋದ್ ಕುಮಾರ್ ಉಪಸ್ಥಿತರಿದ್ದರು.
ಇದನ್ನೂ ಓದಿ:ಟೀಮ್ ಇಂಡಿಯಾದ ಓಪನರ್ ಕೆ.ಎಲ್. ರಾಹುಲ್ ತುಳು ಕಮೆಂಟ್
ಕಾಸರಗೋಡು ರೈಲು ನಿಲ್ದಾಣದಿಂದ ತಾಯಲಂಗಾಡಿ ವರೆಗಿನ ಪ್ರದೇಶಗಳನ್ನು ನವೀಕರಣಗೊಳಿಸಲಾಗುವುದು. ರೈಲು ನಿಲ್ದಾಣದ ಮುಂಭಾಗದಲ್ಲಿ ಅತ್ಯಾಧುನಿಕ ಬಸ್ ತಂಗುದಾಣ, ಹಾದಿಬದಿ ಪ್ರಯಾಣಿಕರ ವಿಶ್ರಾಂತಿಗೆ ಉದ್ಯಾನ, ಉಳಿದೆಡೆ ಹೂದೋಟ, ಪಾರ್ಕಿಂಗ್ ಜಾಗಗಳಲ್ಲಿ ಕಿಯಾಸ್ಕ್ ಗಳನ್ನು ಸ್ಥಾಪಿಸಲಾಗುವುದು. ಅತ್ಯಾಧುನಿಕ ಲಘು ಉಪಾಹಾರ ಕೇಂದ್ರಗಳು, ರಸ್ತೆಗಳ ಉಭಯ ಕಡೆಗಳಲ್ಲಿ ಟೈಲ್ಸ್ ಬಳಸಿ ಕಾಲ್ನಡೆ ಹಾದಿ ನಿರ್ಮಿಸಲಾಗುವುದು. ಚರಂಡಿ, ಅತ್ಯಾಧುನಿಕ ಬೀದಿ ಬೆಳಕಿನ ವ್ಯವಸ್ಥೆ ಇತ್ಯಾದಿ ನಿರ್ಮಿಸಲಾಗುವುದು ಎಂದು ಸಭೆ ತಿಳಿಸಿದೆ.