ಕಾಸರಗೋಡು: ಪಳ್ಳಿಕೆರೆ ಪೂಚಕ್ಕಾಡಿನ ಫಾರೂಕ್ ಮಸೀದಿ ಸಮೀಪದ ನಿವಾಸಿ ಅನಿವಾಸಿ ಉದ್ಯಮಿ ಅಬ್ದುಲ್ ಗಫೂರ್ ಹಾಜಿ (53) ಅವರ ಸಾವು ಕೊಲೆಯೆಂದು ಸಾಬೀತುಗೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ತನಿಖಾ ತಂಡ ಬಂಧಿಸಿದೆ.
ಜಿನ್ನುಮ್ಮ ಯಾನೆ ಶಮೀಮ, ಈಕೆಯ ಪತಿ ಉಬೈಸ್, ಸಹಾಯಕರಾದ ಪೂಚಕ್ಕಾಡ್‌ನ ಅಸ್ನೀಫ, ಮಧೂರು ನಿವಾಸಿ ಆಯಿಶಾಳನ್ನು ಡಿಸಿಆರ್‌ಬಿ ಡಿವೈಎಸ್‌ಪಿ ನೇತೃತ್ವದಲ್ಲಿ ಪ್ರತ್ಯೇಕ ತಂಡ ಬಂಧಿಸಿದೆ.
2023ರ ಎಪ್ರಿಲ್ 14ರಂದು ಮುಂಜಾನೆ ಅಬ್ದುಲ್ ಗಫೂರ್ ನಿಗೂಢ ರೀತಿಯಲ್ಲಿ ಮನೆಯೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಹಜ ಸಾವೆಂಬ ನೆಲೆಯಲ್ಲಿ ದಫನ ಮಾಡಿದ ಮೃತದೇಹವನ್ನು ಬಳಿಕ ಪುತ್ರನ ದೂರಿನ ಹಿನ್ನೆಲೆಯಲ್ಲಿ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.
ತಲೆಗೆ ಉಂಟಾದ ಗಂಭೀರ ಹೊಡತವೇ ಸಾವಿಗೆ ಕಾರಣವಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿತ್ತು. ಗಫೂರ್ ಹಾಜಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ ನಡೆಸಿದ ತನಿಖೆಯಲ್ಲಿ ಮನೆಯಿಂದ 612 ಪವನ್ ಚಿನ್ನಾಭರಣ ಕಳವು ಗೈದಿರುವುದು ತಿಳಿದು ಬಂದಿತ್ತು.
ಗಫೂರ್ ಹಾಜಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ದಿನದ ಹಿಂದಿನ ದಿನ ಪತ್ನಿ ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದರು. ಇದರಿಂದ ಗಫೂರ್ ಹಾಜಿ ಮಾತ್ರವೇ ಮನೆಯಲ್ಲಿದ್ದರು. ಎ. 14ರಂದು ಮುಂಜಾನೆ ಮನೆಯಲ್ಲಿ ಯಾರೂ ಕಂಡು ಬಾರದ ಹಿನ್ನೆಲೆಯಲ್ಲಿ ನೆರೆಮನೆಯವರು ಹೋಗಿ ನೋಡಿದಾಗ ಗಫೂರ್ ಹಾಜಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಚಿನ್ನಾಭರಣ ದೋಚುವ ಉದ್ದೇಶದಿಂದ ಗಫೂರ್ ಹಾಜಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿತ್ತು.
ಅಲ್ಲದೆ ಗಫೂರ್ ಹಾಜಿ ಮೃತಪಟ್ಟ ದಿನ ಮಂತ್ರವಾದಿ ಮಹಿಳೆ ಆ ಮನೆಗೆ ಹೋಗಿದ್ದು, ಇದು ಸಂಶಯಕ್ಕೆ ಎಡೆಮಾಡಿಕೊಟ್ಟಿತ್ತು. ಮೊದಲು ಬೇಕಲ ಪೊಲೀಸರು ತನಿಖೆ ನಡೆಸಿದ ಈ ಪ್ರಕರಣವನ್ನು ಆ ಬಳಿಕ ಡಿಸಿಆರ್‌ಬಿಗೆ ಹಸ್ತಾಂತರಿಸಲಾಗಿತ್ತು. ಪೊಲೀಸರ ಸಮಗ್ರ ತನಿಖೆಯಲ್ಲಿ ಇದೀಗ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಗಫೂರ್ ಹಾಜಿ ಹಾಗೂ ಸಹೋದರರಿಗೆ ಶಾರ್ಜಾ ಹಾಗು ದುಬೈಯಲ್ಲಿ ನಾಲ್ಕರಷ್ಟು ಸೂಪರ್ ಮಾರ್ಕೆಟ್‌ಗಳಿವೆ.