ಕಾಸರಗೋಡು: ಕರಾವಳಿ ಮತ್ತು ಒಳನಾಡಿನಲ್ಲಿ ಮೇ 29 ರಂದು ರಾತ್ರಿ ಸುರಿದ ಧಾರಾಕಾರ ಮಳೆಗೆ ವಿವಿಧೆಡೆ ಅಪಾರ ನಾಶನಷ್ಟ ಸಂಭವಿಸಿದ್ದು, ಹೊಸಂಗಡಿ ಪೇಟೆ ಜಲಾವೃತಗೊಂಡಿದೆ. ಸಿಡಿಲು ಬಡಿದು ಕೆಲವು ಮನೆಗಳು ಹಾನಿಗೀಡಾಗಿದ್ದು, ವಿವಿಧೆಡೆ ಮರ ಉರುಳಿ ಬಿದ್ದಿದೆ.
ಹೊಸಂಗಡಿ ಪೇಟೆ ಜಲಾವೃತಗೊಂಡಿದೆ. ಆನೆಕಲ್ಲು ಭಾಗಕ್ಕೆ ತೆರಳುವ ಮೇಲಿನ ರಸ್ತೆಯಲ್ಲಿ ಚರಂಡಿ ಸಂಪೂರ್ಣ ಮಣ್ಣು, ಕಸಕಡ್ಡಿಯಿಂದ ತುಂಬಿದ ಕಾರಣ ನೀರು ರಸ್ತೆಯಲ್ಲಿ ಹರಿದು ಜಲಾವೃತಗೊಂಡಿತು. ಇದರಿಂದಾಗಿ ಪಾದಚಾರಿಗಳು ಸಂಕಷ್ಟ ಅನುಭವಿಸುವಂತಾಯಿತು. ಚರಂಡಿಯ ನೀರು ಹರಿದು ಬಸ್ ತಂಗುದಾಣದೊಳಗೆ ತುಂಬಿಕೊಂಡಿತು. ಮಳೆಗಾಲದ ಪೂರ್ವಭಾವಿಯಾಗಿ ಚರಂಡಿಯಿಂದ ಕಸಕಡ್ಡಿ, ಮಣ್ಣು ತೆರವುಗೊಳಿಸದಿರುವುದರಿಂದಾಗಿ ಈ ಪರಿಸ್ಥಿತಿಗೆ ಕಾರಣವಾಗಿದೆ.
ಪೆರ್ಲ ವಾಣೀನಗರದ ಹಲವೆಡೆ ಸಿಡಿಲು ಬಡಿದು ಹಲವು ಮನೆಗಳ ವಯರಿಂಗ್, ವಿವಿಧ ಗೃಹೋಪಕರಣಗಳಿಗೆ ಹಾನಿಯಾಗಿದೆ. ಸ್ವರ್ಗ ನಿವಾಸಿ ಸಂತೋಷ್ ವಿ.ಎಸ್. ಭಟ್ ಅವರ ನೀರಾವರಿ ಪಂಪ್ ಸೆಟ್, ವಿದ್ಯುತ್ ಉಪಕರಣ, ಹೃಷಿಕೇಶ್ ಭಟ್ ಅವರ ವಿದ್ಯುತ್ ಉಪಕರಣಗಳು ಹಾನಿಗೀಡಾಗಿವೆ. ಪೊಸೋಟು ಬಳಿ ಅಡಿಕೆ ತೋಟಕ್ಕೂ ಸಿಡಿಲು ಬಡಿದಿದೆ.
ಉಪ್ಪಳ ಕುಕ್ಕಾರಿನಲ್ಲಿರುವ ಮಂಗಲ್ಪಾಡಿ ಸರಕಾರಿ ಹೈಸ್ಕೂಲ್‌ನ ಗೇಟ್ ಬಳಿಯಿದ್ದ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ವಿದ್ಯುತ್ ಕಂಬ ಮುರಿದು ಬಿದ್ದಿದೆ. ತಂತಿಗಳು ಚೆಲ್ಲಾಪಿಲ್ಲಿಯಾಗಿ ಹರಡಿದೆ. ಈ ವೇಳೆ ವಿದ್ಯುತ್ ಮೊಟಕುಗೊಂಡ ಕಾರಣ ಅಪಾಯ ತಪ್ಪಿದೆ. ಮರದ ರೆಂಬೆಯೊಂದು ಶಾಲೆಯ ಛಾವಣಿಗೆ ಬಡಿದಿದ್ದು, ಇದರಿಂದ ಒಂದು ಬದಿಯ ಕೆಲವು ಹೆಂಚುಗಳು ತುಂಡಾಗಿವೆ. ಸೋಲಾರ್ ಪ್ಯಾನೆಲ್ ದೂರದಲ್ಲಿ ಬಿದ್ದಿದೆ.
ಮಂಜೇಶ್ವರ ಕರೋಡ ಬಳಿ ರಾ.ಹೆದ್ದಾರಿಗೆ ಬೃಹತ್ ದೂಪದ ಮರವೊಂದು ಮುರಿದು ಬಿದ್ದಿದ್ದು, ಇದರಿಂದ ಟ್ರಾನ್ಸ್‌ಫಾರ್ಮರ್ ಹಾನಿಗೀಡಾಗಿದೆ. ಉಪ್ಪಳ ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಮರವನ್ನು ಕಡಿದು ತೆರವುಗೊಳಿಸಿದ ಬಳಿಕ ಸಾರಿಗೆ ಸುಗಮಗೊಂಡಿತು.
ಕುಂಬಳೆ ಪೊಲೀಸ್ ಠಾಣೆಯ ಬಳಿಯಿರುವ ಕಟ್ಟಡವೊಂದರ ಸಿಮೆಂಟ್ ಶೀಟ್ ಬಿದ್ದು ಎಂಎಂಕೆ ಕಮ್ಯೂನಿಕೇಶನ್‌ನ ಮಾಲಕರಾದ ಪ್ರಶಾಂತ ಅವರ ಸ್ವಿಫ್ಟ್ ಕಾರು ಹಾನಿಗೀಡಾಗಿದೆ. ಕಾಸರಗೋಡು ಜಿಲ್ಲೆಯ ಕೆಲವು ನದಿಗಳು ತುಂಬಿ ಹರಿಯುತ್ತಿದೆ.
ಮನೆಗೆ ಹಾನಿ
ಹೊಸಂಗಡಿ ಕೊಪ್ಪಳ ನಿವಾಸಿ ಸಂಜೀವ ಅವರ ಮನೆಗೆ ಬುಧವಾರ ಮುಂಜಾನೆ ತೆಂಗಿನ ಮರ ಬಿದ್ದು ಸಂಪೂರ್ಣ ಹಾನಿಗೀಡಾಗಿದೆ. ಸಮೀಪದ ಇನ್ನೋರ್ವ ವ್ಯಕ್ತಿಯ ಹಿತ್ತಿಲಲ್ಲಿದ್ದ ತೆಂಗಿನ ಮರ ಬುಡ ಸಹಿತ ಕುಸಿದು ಬಿದ್ದಿದ್ದು, ಸಂಜೀವ ಅವರ ಮನೆಯ ಹೆಂಚು, ಪಕ್ಕಾಸು ಹಾನಿಗೊಂಡಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ.