Advertisement

ಕಾಸರಗೋಡಿನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ

08:52 PM Apr 26, 2019 | Team Udayavani |

ಕಾಸರಗೋಡು: ಚಂದ್ರಗಿರಿ ಹೊಳೆಯಲ್ಲಿ ನೀರಿನ ಪ್ರಮಾಣ ಕುಸಿತದಿಂದ ಬಾವಿಕೆರೆಯ ಜಲ ಪ್ರಾಧಿಕಾರ ಜಲಾಶಯದಿಂದ ಪಂಪಿಂಗ್‌ ನಿಲುಗಡೆಗೊಂಡಿದ್ದು, ಇದರಿಂದಾಗಿ ಕಾಸರಗೋಡು ನಗರಸಭೆ ಸಹಿತ ಸಮೀಪದ ಗ್ರಾಮ ಪಂಚಾಯತ್‌ ಪ್ರದೇಶಗಳಿಗೆ ನೀರು ಸರಬರಾಜು ನಿಲುಗಡೆಗೊಂಡಿದೆ.

Advertisement

ಕಾಸರಗೋಡು ನಗರಸಭೆ ವ್ಯಾಪ್ತಿಯ ಸುಮಾರು 40 ಸಾವಿರ ಮಂದಿಗೆ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಈ ಕಾರಣದಿಂದ ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ ಟ್ಯಾಂಕ್‌ಗಳಲ್ಲಿ ನೀರು ಸರಬರಾಜು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನೀರಿಲ್ಲದೆ ಪಂಪಿಂಗ್‌ ಇಲ್ಲ
ಗುರುವಾರ ಬಾವಿಕೆರೆಯಲ್ಲಿ ಪಂಪಿಂಗ್‌ ನಿಲುಗಡೆಗೊಳಿಸಲಾಗಿದೆ. ಜಲಾಶಯದಲ್ಲಿ ನೀರಿನ ಪ್ರಮಾಣ ಭಾರೀ ಕುಸಿದಿರುವುದರಿಂದ ಪಂಪಿಂಗ್‌ ಸಾಧ್ಯವಾಗುತ್ತಿಲ್ಲ ಎಂದು ತಾಂತ್ರಿಕ ವಿಭಾಗ ಸಿಬಂದಿಗಳು ವರದಿ ಮಾಡಿದ್ದಾರೆ. ನೀರಿನ ಜತೆಗೆ ಉಪ್ಪಿನ ಅಂಶವೂ ಸೇರಿಕೊಂಡಿದೆ. ಈ ಕಾರಣದಿಂದ ಪಂಪಿಂಗ್‌ ನಿಲುಗಡೆಗೆ ನಿರ್ದೇಶಿಸಲಾಗಿದೆ.

ಜಲ ಪೂರೈಕೆ ಸ್ಥಗಿತ: ಮಾಹಿತಿ
ಜಲ ಪೂರೈಕೆ ನಿಲ್ಲಿಸಲಾಗಿದೆ ಎಂದು ಶಾಸಕ ಎನ್‌.ಎ. ನೆಲ್ಲಿಕುನ್ನು, ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ ಬಾಬು, ಕಾಸರಗೋಡು ನಗರಸಭಾ ಅಧ್ಯಕ್ಷೆ ಬಿಫಾತಿಮಾ ಮೊದಲಾದವರಿಗೆ ಜಲ ಅಥೋರಿಟಿ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಮಾಹಿತಿ ನೀಡಿದ್ದಾರೆ. ಬೇಕಲ್‌ ರಿಸೋರ್ಟ್‌ ಅಭಿವೃದ್ಧಿ ಕಾರ್ಪೊರೇಶನ್‌(ಬಿಆರ್‌ಡಿಸಿ)ನ ಬಾಂಗೋಡ್‌ನ‌ಲ್ಲಿರುವ ಪ್ಲಾಂಟ್‌ನಿಂದ ಟ್ಯಾಂಕ್‌ಗಳಲ್ಲಿ ನೀರು ಸರಬರಾಜು ಮಾಡಬೇಕಾದ ಪರಿಸ್ಥಿತಿಗೆ ಕಾರಣವಾಗಿದೆ. ಈಗಾಗಲೇ ನಗರದ ಕೆಲವೆಡೆ ಇಲ್ಲಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಇಲ್ಲಿಯೂ ನೀರಿನ ಮಟ್ಟ ಕುಸಿಯುತ್ತಿದೆ.

ಉಪ್ಪು ಮಿಶ್ರಿತ ನೀರು
ಬಾವಿಕೆರೆಯಿಂದ ಪಂಪ್‌ ಮಾಡುತ್ತಿರುವ ನೀರಿನಲ್ಲಿ ಉಪ್ಪಿನ ಅಂಶ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಒಂದು ಲೀಟರ್‌ನಲ್ಲಿ 900 ಮಿಲ್ಲಿ ಗ್ರಾಂ ಈಗಾಗಲೇ ಉಪ್ಪಿನ ಅಂಶವಿದೆ. 250 ಮಿಲ್ಲಿಗ್ರಾಂಗಿಂತ ಅಧಿಕ ಉಪ್ಪಿನ ಅಂಶವಿದ್ದರೆ ಕುಡಿಯದಂತೆ ತಿಳಿಸಲಾಗಿದೆ. ಈಗ ಸರಬರಾಜು ಮಾಡುತ್ತಿದ್ದ ನೀರನ್ನು ಕುಡಿಯಲು ಬಳಸದಂತೆಯೂ, ಕೇವಲ ಮನೆ ಬಳಕೆಗೆ ಮಾತ್ರವೇ ಬಳಸಲು ಸೂಚಿಸಲಾಗಿತ್ತು.

Advertisement

ಕಾಸರಗೋಡು ನಗರದಲ್ಲಿ ಲಾರಿಗಳ ಮೂಲಕ ಟ್ಯಾಂಕ್‌ಗಳಲ್ಲಿ ನೀರು ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಲಾಗುವುದೆಂದು ನಗರಸಭಾ ಅಧಿಕೃತರು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ
ಬಾವಿಕೆರೆಯಲ್ಲಿ ಪಂಪಿಂಗ್‌ ನಿಲುಗಡೆ ಗೊಳಿಸಿದ್ದರಿಂದ ಕಾಸರಗೋಡು ನಗರದ ಸರಕಾರಿ ಜನರಲ್‌ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಈ ವರೆಗೆ ಪೈಪ್‌ ಲೈನ್‌ ಮೂಲಕ ಆಸ್ಪತ್ರೆಗೆ ನೀರು ನೀಡಲಾಗುತ್ತಿತ್ತು. ಆದರೆ ನೀರು ಸರಬರಾಜು ನಿಲುಗಡೆಯೊಂದಿಗೆ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಸದ್ಯ ಆಸ್ಪತ್ರೆಯ ಬಾವಿಯಿಂದ ನೀರು ಬಳಸಲಾಗುತ್ತಿದ್ದು, ಅದರಲ್ಲೂ ನೀರಿನ ಮಟ್ಟ ಕುಸಿಯ ತೊಡಗಿದೆ. ಟ್ಯಾಂಕ್‌ಗಳ ಮೂಲಕ ನೀರು ಆಸ್ಪತ್ರೆಗೆ ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next