Advertisement

ಕಾಸರಗೋಡು ಅಪರಾಧ ಸುದ್ದಿಗಳು

09:09 PM Jun 20, 2019 | Sriram |

ರೈಲು ಗಾಡಿಯಲ್ಲಿ ಕಳವು : ಬಂಧನ
ಕಾಸರಗೋಡು: ರೈಲು ಗಾಡಿಗಳಲ್ಲಿ ಪ್ರಯಾಣಿಕರ ಬೆಲೆಬಾಳುವ ಸಾಮಗ್ರಿಗಳನ್ನು ಕಳವು ಮಾಡುತ್ತಿದ್ದ ಆರೋಪಿ ಬದಿಯಡ್ಕ ನೀರ್ಚಾಲು ನಿವಾಸಿ ಹ್ಯಾರಿಸ್‌ ಪುತ್ತೂರು ಆಲಿಯಾಸ್‌ ಅಬ್ದುಲ್‌ ಹ್ಯಾರಿಸ್‌(30)ನನ್ನು ರೈಲ್ವೇ ಭದ್ರತಾ ಪಡೆ ಬಂಧಿಸಿದೆ.

Advertisement

ಕಾಸರಗೋಡು ರೈಲು ನಿಲ್ದಾಣ ಪರಿಸರದಿಂದ ರೈಲ್ವೇ ಪೊಲೀಸರ ಸಹಾಯದೊಂದಿಗೆ ಆರ್‌ಪಿಎಫ್‌ ಇನ್‌ಸ್ಪೆಕ್ಟರ್‌ ಪಿ. ವಿಜಯ ಕುಮಾರ್‌ ನೇತೃತ್ವದಲ್ಲಿ ಬಂಧಿಸಲಾಗಿದೆ. ಈತ ಬುಧವಾರ ಮುಂಜಾನೆ ಕಾಸರಗೋಡು ರೈಲು ನಿಲ್ದಾಣದಲ್ಲಿ ಶಂಕಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದುದನ್ನು ಕಂಡು ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಆತ ಹಲವು ಕಳವು ಪ್ರಕರಣಗಳಲ್ಲಿ ಆರೋಪಿ ಎಂಬುದಾಗಿ ತಿಳಿದುಬಂತು. ಈತನ ವಿರುದ್ಧ ಮಂಗಳೂರು ರೈಲ್ವೇ ಪೊಲೀಸ್‌ ಠಾಣೆಯಲ್ಲಿ ಕಳವು ಕೇಸುಗಳಿವೆ. ಈ ಹಿನ್ನೆಲೆಯಲ್ಲಿ ಆತನನ್ನು ಮಂಗಳೂರಿನ ರೈಲ್ವೇ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ವೃದ್ಧೆಯ ಕುತ್ತಿಗೆಯಿಂದ ಚಿನ್ನದ ಸರ ಅಪಹರಣ
ಉಪ್ಪಳ: ಸ್ಕೂಟರ್‌ನಲ್ಲಿ ಬಂದ ಇಬ್ಬರು ನಡೆದುಕೊಂಡು ಹೋಗುತ್ತಿದ್ದ ಐಲ ಕಡಪ್ಪುರ ನಿವಾಸಿ ಕೇಶವ ಅವರ ಪತ್ನಿ ಕಮಲಾ (75) ಅವರ ಕುತ್ತಿಗೆಯಿಂದ ಸುಮಾರು ಐದೂವರೆ ಪವನಿನ ಚಿನ್ನದ ಸರವನ್ನು ಅಪಹರಿಸಿ ಪರಾರಿಯಾದ ಘಟನೆ ನಡೆದಿದೆ.

ಜೂ. 19ರಂದು ಬೆಳಗ್ಗೆ 11.15ಕ್ಕೆ ಹೊಸಂಗಡಿ ಆಸ್ಪತ್ರೆಯಿಂದ ಔಷಧ ತೆಗೆದುಕೊಂಡು ಪಾರೆಕಟ್ಟೆ ಯಿಂದ ಬಪ್ಪಾಯಿತೊಟ್ಟಿ ರಸ್ತೆಯಲ್ಲಿ ಮನೆಗೆ ನಡೆದು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಕಮಲಾ ಅವರನ್ನು ನೆಲಕ್ಕೆ ಬೀಳಿಸಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಅಪಹರಿಸಿದ್ದು, ಗಾಯಗೊಂಡ ಕಮಲಾ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಮಗುವನ್ನೆತ್ತಿಕೊಂಡು ಭಿಕ್ಷಾಟನೆ : ವ್ಯಕ್ತಿ ವಶಕ್ಕೆ
ಕಾಸರಗೋಡು: ಒಂದು ವರ್ಷದ ಮಗುವನ್ನೆತ್ತಿಕೊಂಡು ಭಿಕ್ಷಾಟನೆ ನಡೆಸು ತ್ತಿದ್ದ ವ್ಯಕ್ತಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕಾಸರಗೋಡು ಹಳೆ ಬಸ್‌ ನಿಲ್ದಾಣದಿಂದ ಉತ್ತರ ಪ್ರದೇಶದ ನಿವಾಸಿ ಶಬಲಬಾಬು ಯಾದವ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಗುವನ್ನು ಬಾಲ ಮಂದಿರಕ್ಕೆ ಕರೆದೊಯ್ಯಲಾಗಿದೆ.

Advertisement

ಯುವತಿಯ ಮಾನಭಂಗಕ್ಕೆ ಯತ್ನ: ಕೇಸು ದಾಖಲು
ಬದಿಯಡ್ಕ: ಯುವತಿಯ ಹಿಡಿದೆಳೆದು ಮಾನಭಂಗಕ್ಕೆತ್ನಿಸಿದ ಆರೋಪದಂತೆ ಮುಂಡಿತ್ತಡ್ಕ ನಿವಾಸಿ ಇಕ್ಬಾಲ್‌ (35) ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಬದಿಯಡ್ಕ ಠಾಣೆ ವ್ಯಾಪ್ತಿಯ ಮನೆಯೊಂದಕ್ಕೆ ಜೂ. 19ರಂದು ಮಧ್ಯಾಹ್ನ ನುಗ್ಗಿದ ಇಕ್ಬಾಲ್‌ ಯುವತಿಯ ಕೈ ಹಿಡಿದೆಳೆದು ಮಾನಭಂಗಕ್ಕೆತ್ನಿಸಿದ್ದಾನೆನ್ನಲಾಗಿದೆ. ಯುವತಿಯ ಮೊಬ್ಬೆ ಕೇಳಿ ನೆರೆಮನೆ ನಿವಾಸಿಗಳು ತಲುಪುವಷ್ಟರಲ್ಲಿ ಆತ ಪರಾರಿಯಾಗಿದ್ದ‌. ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ತೆಂಗಿನ ಮರದಿಂದ ಬಿದ್ದಿದ್ದ ವ್ಯಕ್ತಿ ಸಾವು
ಮುಳ್ಳೇರಿಯ: ತೆಂಗಿನ ಮರದಿಂದ ಬಿದ್ದು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮವ್ವಾರು ಬಳಿಯ ಅಯರ್ಕಾಡ್‌ ನಿವಾಸಿ ಗಂಗಾಧರನ್‌ ನಾಯರ್‌ ಕರಿಚ್ಚೇರಿ (57) ಸಾವಿಗೀಡಾದರು.ಜೂ. 17ರಂದು ಕಾಸರಗೋಡಿನ ಅಡ್ಕತ್ತಬೈಲಿನಲ್ಲಿ ತೆಂಗಿನ ಮರ ಕಡಿಯಲೆಂದು ಮರಕ್ಕೆ ಹತ್ತಿದ್ದರು. ಮರದ ತುದಿ ತುಂಡಾಗಿ ಬಿದ್ದಾಗ ನಿಯಂತ್ರಣ ತಪ್ಪಿದ ಗಂಗಾಧರನ್‌ ನಾಯರ್‌ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರು.

ಬಸ್‌ ತಂಗುದಾಣದಲ್ಲಿ ಕೂಲಿ ಕಾರ್ಮಿಕನ ಶವ ಪತ್ತೆ
ಮಂಜೇಶ್ವರ: ಕೂಲಿ ಕಾರ್ಮಿಕ, ಬೋರ್ಕಳ ನಿವಾಸಿ ಸಿರಿಲ್‌ ಡಿ’ಸೋಜಾ (43) ಅವರ ಮೃತದೇಹ ಮಜೀರ್ಪಳ್ಳ ಬಸ್‌ ತಂಗುದಾಣದಲ್ಲಿ ಪತ್ತೆಯಾಗಿದೆ. ಅವರ ಕುಟುಂಬ ಈಗ ಉಡುಪಿಯ ಶಿರ್ವದಲ್ಲಿ ವಾಸಿಸುತ್ತಿದೆ. ಅವರು ಏಕಾಂಗಿಯಾಗಿದ್ದು ರಾತ್ರಿ ಬಸ್‌ ತಂಗುದಾಣದಲ್ಲಿ ನಿದ್ದೆ ಮಾಡುತ್ತಿದ್ದರು.

ಮನೆ ಛಾವಣಿಯಿಂದ ಬಿದ್ದು ಗಾಯ
ಅಡೂರು: ಹಾನಿಗೀಡಾದ ಮನೆಯ ದುರಸ್ತಿಗಾಗಿ ಛಾವಣಿ ಮೇಲೇರಿದ ಅಡೂರು ಕೊರತ್ತಿಮೂಲೆ ನಿವಾಸಿ ಸುಂದರ ನಾಯ್ಕ (48) ಅವರು ಗಾಯಗೊಂಡಿದ್ದಾರೆ. ಅವರನ್ನು ಪರಿಯಾರಂ ಮೆಡಿಕಲ್‌ ಕಾಲೇಜಿನ ಆಸ್ಪತ್ರೆಗೆ ಸೇರಿಸಲಾಗಿದೆ.

ರೈಲು ಹಳಿಯಲ್ಲಿ ಮೃತದೇಹ ಪತ್ತೆ
ಮಂಜೇಶ್ವರ: ದೈಗೋಳಿ ಬೋರ್ಕಳ ಬಳಿಯ ಬೋಳಂತಕೋಡಿ ನಿವಾಸಿ, ಖಾಸಗಿ ಬಸ್‌ ಚಾಲಕ ಅಬ್ದುಲ್‌ ಅನೀಸ್‌ ಅವರ ಪತ್ನಿ ಅಸ್ಮಾ (30) ಅವರ ಮೃತದೇಹ ರೈಲು ಹಳಿಯಲ್ಲಿ ಪತ್ತೆಯಾಗಿದೆ. ಅವರು ಜೂ. 19ರಂದು ಮುಂಜಾನೆ 4 ಗಂಟೆಗೆ ಮನೆಯಿಂದ ನಾಪತ್ತೆಯಾಗಿದ್ದರು.

ನೇಣು ಬಿಗಿದು ಆತ್ಮಹತ್ಯೆ
ಕಾಸರಗೋಡು: ಹೈನುಗಾರಿಕೆ ಕೃಷಿಕ, ಬೇಡಗಂ ಬೇತೂರುಪಾರ ನಿವಾಸಿ ಎಚ್‌. ಕಣ್ಣನ್‌ (53) ಅವರು ಮನೆಯ ಬಳಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಗೈದಿದ್ದಾರೆ.

ವಿದ್ಯಾರ್ಥಿನಿಗೆ ಕಿರುಕುಳ ಯತ್ನ: ಬಂಧನ
ಕಾಸರಗೋಡು: ಮಡಿಯನ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಶಾಲಾ ವಿದ್ಯಾರ್ಥಿನಿಗೆ ಕಿರುಕುಳ ನೀಡಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂಲತಃ ಮಾಣಿ ನಿವಾಸಿ ಹಾಗೂ ಈಗ ಹೊಸದುರ್ಗ ಪೂಚ್ಚಕ್ಕಾಡ್‌ನ‌ಲ್ಲಿ ವಾಸಿಸುತ್ತಿರುವ ಸಿ.ವಿ. ಅಬ್ದುಲ್‌ ಕರೀಂ (67)ನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.

ಗಾಂಜಾ ಪ್ರಕರಣ : 10,000 ರೂ. ದಂಡ
ಕಾಸರಗೋಡು: ಗಾಂಜಾ ಕೈವಶ ಇರಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಳ ನಯಾಬಜಾರ್‌ ಮಾಳಿಗ ಹೌಸ್‌ನ ಉಮ್ಮರ್‌ ಫಾರೂಕ್‌(44) ಗೆ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್‌ ನ್ಯಾಯಾಲಯ (1) 10 ಸಾವಿರ ರೂ. ದಂಡ ವಿಧಿಸಿದೆ. 2018ರ ಆ. 11ರಂದು ಕುಂಬಳೆ ಅಬಕಾರಿ ದಳ ಮಂಜೇಶ್ವರ ಕುಂಜತ್ತೂರಿನ ಕೈಕಂಬ – ಬಾಯಾರು ರಸ್ತೆ ಪರಿಸರದಿಂದ 20 ಗ್ರಾಂ ಗಾಂಜಾ ವಶಪಡಿಸಿಕೊಂಡಿತ್ತು.

ಶಾಲೆ ಆವರಣ ಗೋಡೆ ಕುಸಿತ
ಮುಂಡಿತ್ತಡ್ಕ: ಮುಗು ಸರಕಾರಿ ಎಲ್‌.ಪಿ. ಶಾಲೆಯ ಆವರಣ ಗೋಡೆ ಕುಸಿದು ಬಿದ್ದಿದೆ. ಆವರಣ ಗೋಡೆಯ ಕಲ್ಲುಗಳು ಸಮೀಪದ ರಸ್ತೆಗೆ ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.

Advertisement

Udayavani is now on Telegram. Click here to join our channel and stay updated with the latest news.

Next