Advertisement

Kasaragod ಅಪರಾಧ ಸುದ್ದಿಗಳು

08:56 PM Dec 05, 2024 | Team Udayavani |

ಮನೆಯಲ್ಲಿ ಏಕಾಂಗಿಯಾಗಿದ್ದ ಮಹಿಳೆಯ ಸಾವು
ಕಾಸರಗೋಡು: ಪಾಣತ್ತೂರು ನೇರೋಡಿಯ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಪಿಲಾಂಕು ನಾಯ್ಕ ಅವರ ಪತ್ನಿ ಪಾರ್ವತಿ ಬಾಯ್‌(66) ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆಗೆ ಸಂಬಂಧಿಸಿ ರಾಜಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಮದ್ಯ ಸಹಿತ ಬಂಧನ
ಕುಂಬಳೆ: ಕೊಯಿಪಾಡಿ ಕಳತ್ತೂರು ತಪಾಸಣಾ ಕೇಂದ್ರದ ಪರಿಸರದ ಮನೆಯೊಂದರಲ್ಲಿ ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ 66.06 ಲೀಟರ್‌ ಮದ್ಯ ಹಾಗು 8.25 ಲೀಟರ್‌ ಗೋವಾ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಈ ಸಂಬಂಧ ಮನೆಯ ನಿವಾಸಿ ಸುರೇಶ್‌ (60)ನನ್ನು ಬಂಧಿಸಿದೆ.

72 ಗ್ರಾಂ ಎಂಡಿಎಂಎ ಸಹಿತ ಯುವಕನ ಬಂಧನ
ಉಪ್ಪಳ: ಮಂಜೇಶ್ವರದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 72.73 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದು, ಈ ಸಂಬಂಧ ಕಾಂಞಂಗಾಡ್‌ ಇಟ್ಟಮ್ಮಲ್‌ ನಿವಾಸಿ ನಿಸಾಮುದ್ದೀನ್‌(35)ನನ್ನು ಬಂಧಿಸಿದೆ. ಕಾಸರಗೋಡು ಡಿವೈಎಸ್‌ಪಿ ಸುನಿಲ್‌ ಕುಮಾರ್‌ಮೇಲ್ನೋಟದಲ್ಲಿ ತಲಪ್ಪಾಡಿಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಶಿಲ್ಪಾ ನಿರ್ದೇಶ ಪ್ರಕಾರ ‘ಆಪರೇಶನ್‌ ನ್ಯೂ ಇಯರ್‌ ಹಂಟ್‌’ ಕಾರ್ಯಾಚರಣೆಯಲ್ಲಿ ಮೀಂಜದ ಕೆಂಪು ಕಲ್ಲು ಕೋರೆಯೊಂದರ ಸಮೀಪ ಪೊದೆಗಳೆಡೆ ಬಚ್ಚಿಡಲಾಗಿದ್ದ 22 ಗ್ರಾಂ ಎಂಡಿಎಂಎ ಪತ್ತೆಹಚ್ಚಲಾಗಿದೆ. ಕಾಸರಗೋಡು ಆರ್‌ಡಿ ನಗರದಲ್ಲಿ ನಡೆಸಿದ ವಾಹನ ತಪಾಸಣೆಯಲ್ಲಿ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 30.22 ಗ್ರಾಂ ಎಂಡಿಎಂಎ ಮತ್ತು 13,300 ರೂ. ವಶಪಡಿಸಿಕೊಂಡು ಮಾಸ್ತಿಕುಂಡ್‌ ನಿವಾಸಿಯನ್ನು ಬಂಧಿಸಲಾಗಿದೆ.

ಎರಡು ಫೋಕ್ಸೋ ಪ್ರಕರಣ ದಾಖಲು
ಕಾಸರಗೋಡು: ಹದಿಮೂರರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವೆಳ್ಳರಿಕುಂಡು ಪೊಲೀಸರು ಫೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ.

Advertisement

ಚಂದೇರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 14 ರ ಹರೆಯದ ಬಾಲಕನಿಗೆ ಪ್ರಕೃತಿ ವಿರುದ್ದ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ 40 ರ ಹರೆಯದ ವ್ಯಕ್ತಿಯ ವಿರುದ್ಧ ಪೊಲೀಸರು ಫೋಕ್ಸೋ ಕೇಸು ದಾಖಲಿಸಿದ್ದಾರೆ.

ಮನೆಯಿಂದ ಕಳವಿಗೆತ್ನ
ಬೋವಿಕ್ಕಾನ: ಪೊವ್ವಲ್‌ ಬೆಂಚ್‌ ಕೋರ್ಟ್‌ ಸಮೀಪದ ತೌಫೀಕ್‌ ರಹ್ಮಾನ್‌ ಅವರ ಮನೆಯಿಂದ ಕಳವಿಗೆ ಯತ್ನಿಸಿದ ಘಟನೆ ನಡೆದಿದೆ. ಮನೆಯ ಮುಂಭಾಗದ ಬಾಗಿಲು ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕಳವಿಗೆತ್ನ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾಲಕಿಗೆ, ತಾಯಿಗೆ ಲೈಂಗಿಕ ಕಿರುಕುಳ : ಬಂಧನ
ಕಣ್ಣೂರು: ಅಪ್ರಾಪ್ತ ಬಾಲಕಿಗೆ, ಬಾಲಕಿಯ ತಾಯಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಕಣ್ಣೂರು ಮಿಡಾವಿಯಲ್ಲಿ ವಾಸಿಸುವ ಮಾವಿಂಡಕುಂಡಿ ಹೌಸ್‌ನ ಕೆ.ಕೆ.ಸದಾನಂದನ್‌(65)ನನ್ನು ಚಕ್ಕರಕಲ್‌ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಫೋಕ್ಸೋ ಕೇಸು ದಾಖಲಿಸಲಾಗಿದೆ.

ಚಹಾ ಕುಡಿಯುತ್ತಿದ್ದ ಮಹಿಳೆ ಸಾವು
ಬದಿಯಡ್ಕ: ಚಹಾ ಕುಡಿಯುತ್ತಿದ್ದ ಪೆರಡಾಲ ಕೆಡಂಜಿ ನಿವಾಸಿ ಬಾಬು ಅವರ ಪತ್ನಿ ಗೀತಾ(40) ಕುಸಿದು ಬಿದ್ದು ಸಾವಿಗೀಡಾದ ಘಟನೆ ನಡೆದಿದೆ. ಕುಸಿದು ಬಿದ್ದ ಗೀತಾ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.

ಬಸ್‌ನಿಂದ ಬ್ಯಾಟರಿ ಕಳವು
ಕಾಸರಗೋಡು: ಕಯ್ಯೂರಿನಲ್ಲಿ ನಿಲ್ಲಿಸಿದ್ದ ಶ್ರೀಕೃಷ್ಣ ಬಸ್‌ನ ಎರಡು ಬ್ಯಾಟರಿ ಕಳವು ಮಾಡಿದ ಘಟನೆ ನಡೆದಿದೆ. ಇವುಗಳಿಗೆ 28 ಸಾವಿರ ರೂ.ಮೌಲ್ಯ ಅಂದಾಜಿಸಲಾಗಿದೆ. ಈ ಬಗ್ಗೆ ಕಂಡಕ್ಟರ್‌ ಶ್ರೀಜಿತ್‌ ನೀಡಿದ ದೂರಿನಂತೆ ಚೀಮೇನಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಮದ್ಯ ಸಹಿತ ಬಂಧನ
ಕುಂಬಳೆ: ಕೊಯಿಪ್ಪಾಡಿ ಕಳತ್ತೂರು ತಪಾಸಣಾ ಕೇಂದ್ರ ಪರಿಸರದಲ್ಲಿ ಕಾಸರಗೋಡು ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 15.57 ಲೀಟರ್‌ ಮದ್ಯ ವಶಪಡಿಸಿಕೊಂಡು, ಕಿದೂರು ನಿವಾಸಿ ಹರಿಪ್ರಸಾದ್‌(19)ನನ್ನು ಬಂಧಿಸಿದೆ.

ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊಲೆ : ಡಿ.13 ರಂದು ತೀರ್ಪು
ಕಾಸರಗೋಡು: ಪೆರಿಯಾ ಸಮೀಪದ ಕಲ್ಯೋಟ್‌ನಲ್ಲಿ ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಾದ ಶರತ್‌ಲಾಲ್‌ ಮತ್ತು ಕೃಪೇಶ್‌ ಅವರನ್ನು ಕೊಲೆಗೈದ ಪ್ರಕರಣದ ವಿಚಾರಣೆ ಎರ್ನಾಕುಳಂ ಸಿಬಿಐ ನ್ಯಾಯಾಲಯದಲ್ಲಿ ಪೂರ್ಣಗೊಂಡಿದ್ದು, ನ್ಯಾಯಾಲಯ ಡಿ.13 ರಂದು ತೀರ್ಪು ನೀಡಲಿದೆ.

ಅಯ್ಯಪ್ಪ ಭಕ್ತನ ಹಣ ಕಳವು : ಮೂವರ ಬಂಧನ
ಎರುಮೇಲಿ: ಅಯ್ಯಪ್ಪ ಭಕ್ತನ ಶೋಲ್ಡರ್‌ ಬ್ಯಾಗ್‌ ಕತ್ತರಿಸಿ 14 ಸಾವಿರ ರೂ. ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡು ಉತ್ತಮ ಪಾಳಯಂ ನಿವಾಸಿ ಪಳನಿ ಸ್ವಾಮಿ(45), ಡಿಂಡಿಗಲ್‌ ನಿವಾಸಿ ಮುರುಗನ್‌(45), ಕೆಮಳಿಯ ಭಗವತಿ(52)ಯನ್ನು ಎರುಮೇಲಿ ಪೊಲೀಸರು ಬಂಧಿಸಿದ್ದಾರೆ. ಎರುಮೇಲಿಯಲ್ಲಿ ಪೇಟತುಳ್ಳಲ್‌ ನಡೆಸುತ್ತಿದ್ದ ಸಂದರ್ಭದಲ್ಲಿ ಬ್ಯಾಗ್‌ ಕತ್ತರಿಸಿ ಹಣ ಕಳವು ಮಾಡಲಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next