Advertisement

ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

10:41 PM Jun 10, 2019 | Sriram |

ಕಾರು – ಬೈಕ್‌ ಢಿಕ್ಕಿ : ಯುವಕನ ಸಾವು
ಕಾಸರಗೋಡು: ಚೆಮ್ನಾಡ್‌ ಮೇಲ್ಪರಂಬ ಕೆಎಸ್‌ಟಿಪಿ ರಾಜ್ಯ ಹೆದ್ದಾರಿಯಲ್ಲಿ ಜೂ. 9ರಂದು ರಾತ್ರಿ ಕಾರು – ಬೈಕ್‌ ಢಿಕ್ಕಿ ಹೊಡೆದು ಬೈಕ್‌ ಸವಾರ ಚೆಮ್ನಾಡ್‌ ಸಮೀಪದ ಅರಮಂಗಾನ ನಿವಾಸಿ ಹಾಗೂ ಗಾರೆ ಕೆಲಸದ ಮೇಸಿŒ ಮಣಿ ಆಲಿಯಾಸ್‌ ಮಣಿಕಂಠನ್‌ (30) ಸಾವಿಗೀಡಾದರು.

Advertisement

ಜೂ. 9ರಂದು ರಾತ್ರಿ 10 ಗಂಟೆಗೆ ಉದುಮದಿಂದ ಬೈಕ್‌ನಲ್ಲಿ ಮಣಿಕಂಠನ್‌ ಅರಮಂಗಾನಕ್ಕೆ ಹೋಗುತ್ತಿದ್ದಾಗ ಬಸ್‌-ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತು.

ಬಜರಂಗ ದಳ ಮುಖಂಡನಿಗೆ‌
ಇರಿದು ಕೊಲೆಗೆ ಯತ್ನ : ಬಂಧನ
ಉಪ್ಪಳ: ಬಜರಂಗದಳ ಬಾಯಾರು ಮಂಡಲ ಸಂಚಾಲಕ ಬಾಯಾರು ಕೊಜಪ್ಪೆ ನಿವಾಸಿ ಪ್ರಸಾದ್‌ (28) ಅವರನ್ನು ಇರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಾಯಾರು ದಳಿಕುಕ್ಕು ನಿವಾಸಿ ಅಬೂಬಕ್ಕರ್‌ ಸಿದ್ದಿಕ್‌ (27)ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಎರಡು ವಾರಗಳ ರಿಮಾಂಡ್‌ ವಿಧಿಸಿದೆ. ಉಳಿದ ಐವರು ಆರೋಪಿಗಳು ಕರ್ನಾಟಕಕ್ಕೆ ಪರಾರಿಯಾಗಿರುವುದಾಗಿ ಶಂಕಿಸಲಾಗಿದೆ.

ನೇಣು ಬಿಗಿದು ಯುವಕ ಆತ್ಮಹತ್ಯೆ
ನೆಲ್ಲಿಕಟ್ಟೆ: ಪೈಕ ಬಾಲನಡ್ಕ ವಳಪ್ಪಿಲ್‌ ನಿವಾಸಿ ವಿಜಯನ್‌ (35) ಅವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಹೊಗೆಸೊಪ್ಪು ಉತ್ಪನ್ನ ವಶಕ್ಕೆ
ಉಪ್ಪಳ: ವಾಮಂಜೂರು ಅಬಕಾರಿ ಚೆಕ್‌ಪೋಸ್ಟ್‌ ನಲ್ಲಿ ಅಬಕಾರಿ ದಳ ಅಧಿಕಾರಿಗಳು ನಡೆಸಿದ ವಾಹನ ತಪಾಸಣೆ ಸಂದರ್ಭದಲ್ಲಿ ಬಸ್‌ನಲ್ಲಿ ಸಾಗಿಸುತ್ತಿದ್ದ 10 ಕಿಲೋ ಹೊಗೆಸೊಪ್ಪು ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಬಸ್‌ನ ಹಿಂಬದಿ ಸೀಟಿನಡಿಯಲ್ಲಿ ಹೊಗೆಸೊಪ್ಪು ಉತ್ಪನ್ನ ಪತ್ತೆಯಾಗಿದೆ.

ರೈಲಿನಿಂದ ಬಿದ್ದು ಗಾಯ
ಹೊಸದುರ್ಗ: ಕಾಂಞಂಗಾಡು ರೈಲು ನಿಲ್ದಾಣ ಪರಿಸರದಲ್ಲಿ ರೈಲುಗಾಡಿಯಿಂದ ಬಿದ್ದು ತಮಿಳುನಾಡು ನಿವಾಸಿ ಪಳನಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಮಂಗಳೂರಿನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಮಾವೇಲಿ ಎಕ್ಸ್‌ಪ್ರೆಸ್‌ ರೈಲು ಗಾಡಿಯಿಂದ ಬಿದ್ದು ಈ ಘಟನೆ ನಡೆಯಿತು.

ತಂದೆ, ಮಗನಿಗೆ ಇರಿತ
ಕಾಸರಗೋಡು: ನೆಲ್ಲಿಕುಂಜೆ ಕಡಪ್ಪುರದ ಭಾರ್ಗವನ್‌ (55) ಮತ್ತು ಪುತ್ರ ಮಿಥುನ್‌ (20) ಇರಿತದಿಂದ ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡಿರುವ ಮಿಥುನ್‌ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಭಾರ್ಗವನ್‌ ಅವರನ್ನು ಕಾಸರಗೋಡಿನ ಜನರಲ್‌ ಆಸ್ಪತ್ರೆಗೆ ಸೇರಿಸಲಾಗಿದೆ. ಪೂರ್ವದ್ವೇಷದಿಂದ ಸುನಿಲ್‌ ಇರಿದು ಗಾಯಗೊಳಿಸಿದ್ದಾಗಿ ಗಾಯಾಳುಗಳು ತಿಳಿಸಿದ್ದಾರೆ.

ಸಿಪಿಎಂ ಬೂತ್‌ ಏಜೆಂಟ್‌ ಮನೆಗೆ
ಕರಿ ಆಯಿಲ್‌ : ಯುವಕನಿಗೆ ಹಲ್ಲೆ
ಕುಂಬಳೆ: ಸಿಪಿಎಂ ಬೂತ್‌ ಏಜೆಂಟ್‌ನ ಮನೆಗೆ ಕರಿ ಆಯಿಲ್‌ ಬಳಿದ ಘಟನೆಗೆ ಸಂಬಂಧಿಸಿ ಯುವಕನನ್ನು ದಾರಿಯಲ್ಲಿ ತಡೆದು ನಿಲ್ಲಿಸಿ ಹಲ್ಲೆ ಮಾಡಿದ ಘಟನೆ ನಡೆದಿದ್ದು, ಪೊಲೀಸರು ಕೇಸು ದಾಖಲಿಸಿದ್ದಾರೆ.

ಆರಿಕ್ಕಾಡಿ ಕುಂಡಾಪುವಿನ ಗೌರೀಶ್‌ (19) ಅವರ ದೂರಿನಂತೆ ಬಾಸಿತ್‌ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಚುನಾವಣೆ ಫಲಿತಾಂಶ ಘೋಷಣೆಯ ಬಳಿಕ ಕಂಚಿಕಟ್ಟೆಯ ಸಿಪಿಎಂ ಬೂತ್‌ ಏಜೆಂಟ್‌ ಆಗಿದ್ದ ಕೀರ್ತಿ ಅವರ ಮನೆಗೆ ಯಾರೋ ಕರಿ ಆಯಿಲ್‌ ಬಳಿದಿದ್ದರು. ಈ ಘಟನೆಗೆ ಸಂಬಂಧಿಸಿ ಗೌರೀಶ್‌ ಅವರನ್ನು ದಾರಿ ಮಧ್ಯೆ ತಡೆದು ನಿಲ್ಲಿಸಿ ಕೀರ್ತಿಯ ಮನೆಗೆ ಕರಿ ಆಯಿಲ್‌ ಬಳಿದಿರುವುದು ನೀನಲ್ಲವೇ? ಎಂದು ಪ್ರಶ್ನಿಸಿ ಹಲ್ಲೆ ಮಾಡಿದ್ದಾಗಿ ಗೌರೀಶ್‌ ದೂರು ನೀಡಿದ್ದಾರೆ.

ಹಲ್ಲೆ ಪ್ರಕರಣ : ಕೇಸು ದಾಖಲು
ಉಪ್ಪಳ: ಪಾವರು ಕೋಡಿ ಸಿ.ಎಂ.ನಗರ ನಿವಾಸಿ ಯೂಸುಫ್‌ ಅವರ ಪುತ್ರ ಹಸೈನಾರ್‌ ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಂಬಂಧಿಕನಾದ ಹನೀಫನ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.

ಎರಡೂವರೆ ಲೀಟರ್‌ ಮದ್ಯ ವಶ
ಉಪ್ಪಳ: ವಾರೀಸುದಾರರಿಲ್ಲದ ಎರಡೂವರೆ ಲೀಟರ್‌ ಮದ್ಯವನ್ನು ವಾಮಂಜೂರು ಅಬಕಾರಿ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ವೇಳೆ ಬಸ್‌ನಿಂದ ವಶಪಡಿಸಿಕೊಳ್ಳಲಾಗಿದೆ. ಬಸ್‌ನ ಹಿಂಬದಿ ಸೀಟಿನಡಿಯಲ್ಲಿ 475 ಮಿ.ಲೀ. 7 ಬಾಟಲಿ ವಿದೇಶಿ ಮದ್ಯ ಇರಿಸಲಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next